ಜಾತಿಗಣತಿ ಬಗ್ಗೆ ಸಭೆ ಮಾಡಿ ಗೊಂದಲ ಸೃಷ್ಟಿಸಬೇಡಿ, ಸಭೆ ಮುಂದೂಡಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

Published : Jan 13, 2025, 10:57 AM IST
dk shivakumar

ಸಾರಾಂಶ

ಜಾತಿಗಣತಿ ವಿಚಾರವಾಗಿ ಈಗಲೇ ಸಭೆ ಮಾಡಿ ಗೊಂದಲ ಸೃಷ್ಟಿಸುವುದು ಬೇಡ, ಸಭೆ ಮುಂದೂಡಿ ಎಂದು ಒಕ್ಕಲಿಗರ ಸಂಘದ ಪದಾಧಿಕಾರಿಗಳಿಗೆ ಹೇಳಿದ್ದೇನೆ

ಬೆಂಗಳೂರು : ಜಾತಿಗಣತಿ ವಿಚಾರವಾಗಿ ಈಗಲೇ ಸಭೆ ಮಾಡಿ ಗೊಂದಲ ಸೃಷ್ಟಿಸುವುದು ಬೇಡ, ಸಭೆ ಮುಂದೂಡಿ ಎಂದು ಒಕ್ಕಲಿಗರ ಸಂಘದ ಪದಾಧಿಕಾರಿಗಳಿಗೆ ಹೇಳಿದ್ದೇನೆ. ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ. ಈ ವಿಚಾರವಾಗಿ ಸ್ವಾಮೀಜಿ ಜೊತೆ ನಾನು ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಭಾನುವಾರ ಜಾತಿಗಣತಿ ವರದಿ ವಿರೋಧಿಸಿ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಸದಾಶಿವನಗರದ ನಿವಾಸದಲ್ಲಿ ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ಒಕ್ಕಲಿಗರ ಸಂಘದ ನಾಯಕರ ಜತೆ ತಾವು ಯಾವುದೇ ಸಭೆ ಮಾಡಿಲ್ಲ. ಅದರ ಅವಶ್ಯಕತೆ ನನಗಿಲ್ಲ. ಅವರು ಜಾತಿಗಣತಿ ವಿಚಾರವಾಗಿ ಪ್ರತ್ಯೇಕವಾಗಿ ಸಭೆ ಮಾಡಬೇಕೆಂದು ತೀರ್ಮಾನ ಮಾಡಿದ್ದರು. ಆ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದೇನೆ. ಸಭೆ ಮುಂದಕ್ಕೆ ಹಾಕಿ, ನಾವು ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಆಡಳಿತಾಧಿಕಾರಿ ನೇಮಿಸುವ ಎಚ್ಚರಿಕೆ: ಒಕ್ಕಲಿಗರ ಸಂಘದ ಹೊಸ ಪದಾಧಿಕಾರಿಗಳ ತಂಡ ರಾಜಿ ಮಾಡಿಕೊಂಡು ತಮ್ಮನ್ನು ಭೇಟಿ ಮಾಡಲು ಬಂದಿದ್ದರು. ಮತ್ತೆ ಪದಾಧಿಕಾರಿಗಳ ಮಧ್ಯೆ ಕಿತ್ತಾಟ ನಡೆದರೆ ಆಡಳಿತಾಧಿಕಾರಿ ನೇಮಿಸುವುದಾಗಿ ಎಚ್ಚರಿಕೆ ನೀಡಿದ್ದೇನೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ ಎಂದರು.

ಲಕ್ಷ್ಮೀ ಹೆಬ್ಬಾಳ್ಕರ್‌ ಹಾಗೂ ಸಿ.ಟಿ.ರವಿ ಪ್ರಕರಣದ ತನಿಖೆ ಸಿಐಡಿಗೆ ವಹಿಸಿರುವ ಬಗ್ಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಗೃಹ ಸಚಿವರಿಗೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಈ ಬಗ್ಗೆ ಗೃಹಮಂತ್ರಿಗಳೇ ಉತ್ತರ ನೀಡುತ್ತಾರೆ ಎಂದಷ್ಟೇ ಹೇಳಿದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ