ಉಪಗ್ರಹ ಬೇಡ ಗ್ರಾಮ ಸಮೀಕ್ಷೆ ನಡೆಸಿ : ಅಶೋಕ್‌

Published : Sep 22, 2026, 07:03 AM IST
R Ashoka

ಸಾರಾಂಶ

ಕೇರಳದಲ್ಲಿ ಅನುಸರಿಸಿದಂತೆ ಪ್ರತಿ ಗ್ರಾಮಕ್ಕೂ ತೆರಳಿ ಸಮೀಕ್ಷೆ ನಡೆಸಿ, ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ (ಎನ್‌ಜಿಟಿ) ವಾಸ್ತವಾಂಶ ವರದಿ ಸಲ್ಲಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಸರ್ಕಾರಕ್ಕೆ ಸಲಹೆ

ವಿಧಾನಸಭೆ : ಪಶ್ಚಿಮಘಟ್ಟವನ್ನು ಪರಿಸರ ಸೂಕ್ಷ್ಮ ವಲಯವನ್ನಾಗಿ ಘೋಷಿಸುವ ಕಸ್ತೂರಿ ರಂಗನ್‌ ವರದಿಗೆ ಸಂಬಂಧಿಸಿ ಕೇರಳದಲ್ಲಿ ಅನುಸರಿಸಿದಂತೆ ಪ್ರತಿ ಗ್ರಾಮಕ್ಕೂ ತೆರಳಿ ಸಮೀಕ್ಷೆ ನಡೆಸಿ, ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ (ಎನ್‌ಜಿಟಿ) ವಾಸ್ತವಾಂಶ ವರದಿ ಸಲ್ಲಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಜತೆಗೆ ಕೇಂದ್ರ ಸರ್ಕಾರಕ್ಕೆ ರಾಜ್ಯದ ಸರ್ವ ಪಕ್ಷ ಮುಖಂಡರ ನಿಯೋಗ ಕೊಂಡೊಯ್ಯಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

ಕಸ್ತೂರಿ ರಂಗನ್‌ ನೇತೃತ್ವದ ಉನ್ನತ ಮಟ್ಟದ ಕಾರ್ಯನಿರತ ತಂಡ ನೀಡಿರುವ ವರದಿ ಕುರಿತಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎನ್‌ಜಿಟಿ ಆದೇಶದಂತೆ ಕೇಂದ್ರ ಸರ್ಕಾರ ಕಸ್ತೂರಿ ರಂಗನ್‌ ವರದಿ ಜಾರಿಗೆ ಏಳನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದೆ. ಕಸ್ತೂರಿ ರಂಗನ್‌ ವರದಿಯಿಂದಾಗಿ ಪಶ್ಚಿಮಘಟ್ಟ ವ್ಯಾಪ್ತಿಯ ಜನರು ನರಕ ಯಾತನೆ ಅನುಭವಿಸುವಂತಾಗುತ್ತಿದೆ. ಇದರ ಬಗ್ಗೆ ಪಕ್ಷಾತೀತವಾಗಿ, ರಾಜಕೀಯವನ್ನು ಬದಿಗಿಟ್ಟು ಎಲ್ಲರೂ ಕೆಲಸ ಮಾಡಬೇಕು ಎಂದರು.

ಉಪಗ್ರಹ ಸಮೀಕ್ಷೆ ನಡೆಸಿ ವರದಿ:

ಕಸ್ತೂರಿ ರಂಗನ್‌ ಸಮಿತಿಯು ಯಾವುದೇ ಸ್ಥಳ ಪರಿಶೀಲನೆ ನಡೆಸದೆ ಸ್ಯಾಟಲೈಟ್‌ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿದೆ. ಇದರಿಂದಾಗಿ ತೋಟಗಳನ್ನೂ ಅರಣ್ಯ ಎಂದು ಗುರುತಿಸಲಾಗಿದೆ. ಈ ರೀತಿಯ ತಪ್ಪು ಬಹಳಷ್ಟಿವೆ. ಅದನ್ನು ಗುರುತಿಸಿ ವಾಸ್ತವಾಂಶವುಳ್ಳ ವರದಿ ಸಿದ್ಧಪಡಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಕೇರಳ ಮಾದರಿ ಅನುಸರಿಸಬೇಕು. ಅಲ್ಲಿನ ಸರ್ಕಾರ ಪ್ರತಿ ಗ್ರಾಮಕ್ಕೂ ತೆರಳಿ ಅಲ್ಲಿನ ವಾಸ್ತವ ಸರ್ವೇ ಮಾಡಿ ವರದಿ ಸಿದ್ಧಪಡಿಸಿ ಕೇಂದ್ರ ಮತ್ತು ಎನ್‌ಜಿಟಿಗೆ ಸಲ್ಲಿಸಿದೆ. ಆ ವರದಿಯನ್ನು ಎನ್‌ಜಿಟಿ ಕೂಡ ಒಪ್ಪಿಕೊಂಡಿದ್ದು, 13 ಸಾವಿರ ಚದರ ಕಿಮೀ ಪರಿಸರ ಸೂಕ್ಷ್ಮ ಪ್ರದೇಶವಿತ್ತು. ಈಗ ಅದನ್ನು 9900 ಚದರ ಕಿ.ಮೀ.ಗೆ ಇಳಿಸಲಾಗಿದೆ. ಅದರ ಜತೆಗೆ ಬಫರ್‌ ವಲಯವನ್ನು ಶೂನ್ಯಕ್ಕಿಳಿಸಲಾಗಿದೆ. ಅದನ್ನು ರಾಜ್ಯವೂ ಅನುಸರಿಸಬೇಕು ಎಂದರು.

ಸರ್ವ ಪಕ್ಷ ನಿಯೋಗ ಹೋಗೋಣ:

ರಾಜ್ಯ ಸರ್ಕಾರ ಈಗಾಗಲೇ ತಿಳಿಸಿರುವಂತೆ ಕೇಂದ್ರ ಸರ್ಕಾರಕ್ಕೆ ಸರ್ವ ಪಕ್ಷ ನಿಯೋಗ ಕೊಂಡೊಯ್ಯಬೇಕು. ನಾವೆಲ್ಲರೂ ಸೇರಿ ಕೇಂದ್ರ ಸರ್ಕಾರಕ್ಕೆ ಜನರಿಗಾಗುವ ನೈಜ ಸಮಸ್ಯೆ ಮನವರಿಕೆ ಮಾಡಬೇಕು. ಹಾಗೆಯೇ, ಎನ್‌ಜಿಟಿ, ಸುಪ್ರೀಂ ಕೋರ್ಟ್‌ ಸೇರಿ ಇನ್ನಿತರ ನ್ಯಾಯಾಲಯಗಳಲ್ಲಿ ಕಸ್ತೂರಿ ರಂಗನ್‌ ವರದಿ ಕುರಿತಂತೆ ಇರುವ ಪ್ರಕರಣಗಳಲ್ಲಿ ರಾಜ್ಯದ ಪರ ಸಮರ್ಥವಾಗಿ ವಾದ ಮಂಡಿಸಲು ಪ್ರತ್ಯೇಕ ಕಾನೂನು ತಂಡ ನೇಮಿಸಬೇಕು. ಇದೆಲ್ಲದರ ಜತೆಗೆ ಕಸ್ತೂರಿ ರಂಗನ್‌ ವರದಿ ಕುರಿತಂತೆ ಯಾರೂ ಕೂಡ ರಾಜಕೀಯವಾಗಿ ಮಾತುಗಳನ್ನಾಡಬಾರದು ಎಂದು ಹೇಳಿದರು.

ಕಸ್ತೂರಿ ರಂಗನ್‌ ವರದಿಗೂ ಮುನ್ನ ಮಾಧವ ಗಾಡ್ಗಿಲ್‌ ಸಮಿತಿ ರಚಿಸಲಾಗಿತ್ತು. ಆ ಸಮಿತಿ ಪಶ್ಚಿಮಘಟ್ಟ ಪ್ರದೇಶದ ಪ್ರತಿ ಇಂಚು ಭೂಮಿಯನ್ನೂ ಪರಿಸರ ಸೂಕ್ಷ್ಮ ವಲಯವನ್ನಾಗಿ ಘೋಷಿಸುವಂತೆ ಶಿಫಾರಸು ಮಾಡಿತ್ತು. ಅದಕ್ಕೆ ವಿರೋಧ ವ್ಯಕ್ತವಾದ ನಂತರ ಕಸ್ತೂರಿ ರಂಗನ್‌ ಸಮಿತಿ ರಚಿಸಿ ವರದಿ ಪಡೆಯಲಾಗಿದೆ. ಅಲ್ಲದೆ, ಗೋವಾ ಫೌಂಡೇಷನ್‌ ಎಂಬ ಸಂಸ್ಥೆಯು ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದಂತೆ ಸಾಕಷ್ಟು ಹೋರಾಟ ಮಾಡುತ್ತಿದ್ದು, ಪ್ರತಿ ಹಂತದಲ್ಲೂ ನ್ಯಾಯಾಲಯಗಳ ಮೇಲೆ ಒತ್ತಡ ಹಾಕುವ ಕೆಲಸ ಮಾಡುತ್ತಿದೆ. ಕರ್ನಾಟಕದ ಮೇಲೆ ಪ್ರತಿಕೂಲ ಆದೇಶಗಳು ಬರುವುದಕ್ಕೂ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಕೇರಳ ಮಾದರಿ ಪಶ್ಚಿಮಘಟ್ಟಗಳ ಸರ್ವೆಗೆ ಪಕ್ಷಾತೀತವಾಗಿ ಆಗ್ರಹ
ಬರಪ್ರದೇಶ ಪಟ್ಟಿಗೆ ಗದಗ ಸೇರಿಸದಿದ್ರೆ ರಾಜೀನಾಮೆ: ಎಚ್‌.ಕೆ.ಪಾಟೀಲ್‌ ಎಚ್ಚರಿಕೆ