ನನ್ನ ಭವಿಷ್ಯದ ಬಗ್ಗೆ ಯಾರೂ ಚಿಂತಿಸಬೇಡಿ - ಮುಂದೊಂದು ದಿನ ನಾನೇ ನಂಬರ್ ಒನ್ ಆಗುತ್ತೇನೆ

ಸಾರಾಂಶ

15 ವರ್ಷದಿಂದ ಯತ್ನಾಳ ಉಚ್ಛಾಟನೆ ಎನ್ನುವ ಮಾತು ಕೇಳಿ ಬರುತ್ತಿದೆ. ಮುಂದೊಂದು ದಿನ ನಾನೇ ನಂಬರ್ ಒನ್ ಆಗುತ್ತೇನೆ. ನನ್ನ ಭವಿಷ್ಯದ ಬಗ್ಗೆ ಯಾರೂ ಚಿಂತಿಸಬೇಡಿ ಎಂದು ಬಿಜೆಪಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಬೆಳಗಾವಿ : 15 ವರ್ಷದಿಂದ ಯತ್ನಾಳ ಉಚ್ಛಾಟನೆ ಎನ್ನುವ ಮಾತು ಕೇಳಿ ಬರುತ್ತಿದೆ. ಮುಂದೊಂದು ದಿನ ನಾನೇ ನಂಬರ್ ಒನ್ ಆಗುತ್ತೇನೆ. ನನ್ನ ಭವಿಷ್ಯದ ಬಗ್ಗೆ ಯಾರೂ ಚಿಂತಿಸಬೇಡಿ ಎಂದು ಬಿಜೆಪಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು‌, ಬಸನಗೌಡ ಪಾಟೀಲ ಯತ್ನಾಳ ಉಚ್ಛಾಟನೆ ಮಾಡೋವರೆಗೆ ಮನೆ ಬಿಟ್ಟು‌ ಹೋಗುವುದಿಲ್ಲ ಎಂದು ಪಟ್ಟುಹಿಡಿದು 15ಕ್ಕೂ ಅಧಿಕ ಶಾಸಕರು ಯಡಿಯೂರಪ್ಪನವರ ಮನೆಯಲ್ಲಿ ಕುಳಿತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ದೊಡ್ಡ ಅನಾಹುತ. ಮನೆ ಬಿಟ್ಟು‌ ಹೋಗೋದಿಲ್ಲ ಅಂದ್ರೆ ಯಡಿಯೂರಪ್ಪ ಮಲಗಬೇಕೋ, ಬೇಡವೋ. ಪಾಪ ನನಗೆ ಭಾಳ ಕಣ್ಣೀರು ಬರುತ್ತಿದೆ‌ ಎಂದು ವ್ಯಂಗ್ಯವಾಡಿದರು.

ಪ್ರಧಾನಿ ನರೇಂದ್ರ ‌ಮೋದಿ ಅವರು ವಕ್ಫ್ ಕಾಯ್ದೆಗೆ 44 ತಿದ್ದುಪಡಿ ತರಲು ಕಳೆದ ಲೋಕಸಭೆಯ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಿದ್ದಾರೆ. ನಾವು ವಕ್ಫ್ ಕಿತ್ತು ಹಾಕಬೇಕೆಂದು ಬೀದರ್ ನಿಂದ ಕಲ್ಯಾಣ‌ ಕರ್ನಾಟಕ ಪ್ರವಾಸ ನಡೆಸಿ ಈಗ ಕಿತ್ತೂರು ಕರ್ನಾಟಕದಲ್ಲಿ ಜನಜಾಗೃತಿ ನಡೆಸಿ ಸೋಮವಾರ ದೆಹಲಿಗೆ ಹೋಗುತ್ತಿದ್ದೇವೆ. ರೈತರ ಹಾಗೂ ಮಠ, ಮಂದಿರದ ಆಸ್ತಿಗಳು ವಕ್ಫ್ ಹೆಸರಿಗೆ ಬರೆದಿರುವ ಬಗ್ಗೆ ಕೇಂದ್ರ ಸಂಸತ್‌ ಸಮಿತಿಗೆ ದಾಖಲೆ ಸಹಿತ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.

ವಕ್ಫ್ ಬೆಂಕಿ ಹಚ್ಚಿದ್ದು ಸಚಿವ ಜಮೀರ್ ಅಹ್ಮದ್ ಖಾನ್. ಸಾಕಷ್ಟು ಹಿಂದುಗಳ ಹಾಗೂ ರೈತರ ಆಸ್ತಿಗೆ ವಕ್ಫ್ ಬೋರ್ಡ್‌ ಎಂದು ನೋಟಿಸ್ ನೀಡಿದ್ದಾರೆ. ಇದು ದೊಡ್ಡ ದುರಂತ ಎಂದ ಅವರು, ಮೊದಲ‌ ಹಂತದ ವಕ್ಫ್ ಹೋರಾಟ ಮುಗಿದಿದೆ. ಚುನಾವಣೆಗಾಗಿ ವಕ್ಫ್ ಹೋರಾಟ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಆದರೆ, ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.

ಯತ್ನಾಳ ಬಸವಣ್ಣನ ವಿರೋಧಿ ಎಂದು ಬಿಂಬಿಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಹೆಸರಿನಲ್ಲಿಯೇ ಬಸವಣ್ಣ ಇದೆ. ಒಂದು ಸಾವಿರ ಆಕಳು ಕಟ್ಟಿದ್ದೇನೆ. ಬಸವಣ್ಣನವರು ಹೇಳಿದ ಕಾಯಕವೇ ಕೈಲಾಸದಂತೆ ನಡೆಯುತ್ತಿದ್ದೇನೆ ಎಂದು ತಿರುಗೇಟು ನೀಡಿದರು.ಪಂಚಮಸಾಲಿ ಕೋಟಾದಲ್ಲಿ ಈಗಿನ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದವರು ಸಮಾಜಕ್ಕೆ ಮೀಸಲಾತಿ ಕೊಡಿಸಲು ಶ್ರಮಿಸಬೇಕು. ಬಿಜೆಪಿ ಸರಕಾರದ ಅವಧಿಯಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಿಸುವಲ್ಲಿ ಎಲ್ಲರೂ ಮೋಸ ಮಾಡಿದ್ದಾರೆ. ಲಕ್ಷ್ಮೀ ಹೆಬ್ಬಾಳಕರಗೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಿಸಿ ಎಂದು ಕೇಳಲು ಮುಜುಗರ ಬರುತ್ತದೆ ಎಂದಿದ್ದಾರಂತೆ. ನಾನು ಎಲ್ಲಾ ಸಮುದಾಯದವರ ಪರವಾಗಿ ಹೋರಾಟ ಮಾಡುತ್ತೇನೆ. ಡಿ.10ರಂದು ನಮ್ಮ ಸಮಾಜ ನಡೆಸುತ್ತಿರುವ ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದು ಹೇಳಿದರು.

Share this article