ವೈವಿಧ್ಯಮಯ ಕೃಷಿಗೆ ಒತ್ತು ನೀಡಿ: ಶಿವರಾಜ್‌ಸಿಂಗ್‌ ಚೌಹಾಣ್‌ ಕರೆ

KannadaprabhaNewsNetwork |  
Published : Jun 10, 2025, 12:06 AM ISTUpdated : Jun 10, 2025, 04:40 AM IST
ICRC | Kannada Prabha

ಸಾರಾಂಶ

ರೈತರು ವೈವಿಧ್ಯಮಯ ಕೃಷಿಗೆ ಒತ್ತು ನೀಡಬೇಕು. ಕೃಷಿ ಉತ್ಪನ್ನಗಳ ಸಂಸ್ಕರಣೆ, ರಫ್ತಿಗೆ ಗಮನ ಹರಿಸಬೇಕು ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್‌ಸಿಂಗ್‌ ಚೌಹಾಣ್‌ ಕರೆ ನೀಡಿದ್ದಾರೆ.

 ಬೆಂಗಳೂರು : ರೈತರು ವೈವಿಧ್ಯಮಯ ಕೃಷಿಗೆ ಒತ್ತು ನೀಡಬೇಕು. ಕೃಷಿ ಉತ್ಪನ್ನಗಳ ಸಂಸ್ಕರಣೆ, ರಫ್ತಿಗೆ ಗಮನ ಹರಿಸಬೇಕು ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್‌ಸಿಂಗ್‌ ಚೌಹಾಣ್‌ ಕರೆ ನೀಡಿದ್ದಾರೆ.

ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಸ್ಥೆಯಲ್ಲಿ ಭಾರತೀಯ ಕೃಷಿ ಸಂಶೋಧನೆ ಮಂಡಳಿ ಮತ್ತು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೈತರು ಪಾರಂಪರಿಕ ಕೃಷಿಗೆ ಸೀಮಿತವಾಗದೆ ವೈವಿಧ್ಯಮಯ ಕೃಷಿಗೆ ಮುಂದಾಗಬೇಕು. ಸಂಸ್ಕರಣೆ ಮತ್ತು ರಫ್ತಿಗೆ ಗಮನ ಹರಿಸಬೇಕು. ಕೇಂದ್ರ ಸರ್ಕಾರ ಸದಾಕಾಲ ರೈತರಿಗೆ ಬೆಂಬಲವಾಗಿ ನಿಂತಿದೆ. ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ತೋಟಗಾರಿಕಾ ಬೆಳೆ ಬೆಳೆಯವಲ್ಲಿ ವಿಶೇಷ ಸಾಧನೆ ಮಾಡಲಾಗುತ್ತಿದೆ. ಭಾರತೀಯ ತೋಟಗಾರಿಕೆ ಸಂಸ್ಥೆಯೂ ರೈತರಿಗೆ ಉತ್ತಮ ಸಹಕಾರ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಜ್ಞರು ಕೈಗೊಳ್ಳುವ ಸಂಶೋಧನೆಗಳು ರೈತರಿಗೆ ತಕ್ಷಣ ಲಭ್ಯವಾಗಬೇಕು. ಲ್ಯಾಬ್‌ನಿಂದ ಲ್ಯಾಂಡ್‌ಗೆ ತಕ್ಷಣ ಮಾಹಿತಿ ರವಾನೆಯಾಗಬೇಕು. ಕಮಲಂ(ಡ್ರ್ಯಾಗನ್ ಫ್ರೂಟ್) ಕೃಷಿಯಲ್ಲಿ ಮೊದಲ ಎರಡು ವರ್ಷ ಲಾಭ ಕಡಿಮೆ ಇದ್ದರೂ ಮೂರನೇ ವರ್ಷದಿಂದ ಹೆಕ್ಟೇರ್‌ಗೆ 6 ರಿಂದ 7 ಲಕ್ಷ ರು. ಲಭಿಸಲಿದೆ. ‘ಒಂದು ದೇಶ-ಒಂದು ಕೃಷಿ-ಒಂದು ತಂಡ’ ಧ್ಯೇಯದೊಂದಿಗೆ ಕೇಂದ್ರ ಸರ್ಕಾರ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕೈಗೊಂಡಿದೆ ಎಂದು ವಿವರಿಸಿದರು.

ನಕಲಿ ಬೀಜದ ವಿರುದ್ಧ ಕ್ರಮ :ದೇಶದ ಜಿಡಿಪಿಗೆ ಕೃಷಿಯ ಕೊಡುಗೆ ಶೇ.5.4 ರಷ್ಟಿದೆ. ಆಹಾರ ಭದ್ರತೆ, ಪೋಷಕಾಂಶಯುಕ್ತ ಆಹಾರ, ಲಾಭದಾಯಕ ಕೃಷಿ, ಮಣ್ಣಿನ ನೈಜ ಶಕ್ತಿಯ ರಕ್ಷಣೆಯ ಪ್ರಮುಖ ಗುರಿಗಳನ್ನು ಕೇಂದ್ರ ಸರ್ಕಾರ ಹೊಂದಿದೆ. ನಕಲಿ ಬೀಜ ಮತ್ತು ಕೀಟ ನಾಶಕಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್‌ಸಿಂಗ್‌ ಚೌಹಾಣ್‌ ತಿಳಿಸಿದ್ದಾರೆ.

ಐವರು ಪ್ರತಿಭಾವಂತ ರೈತರಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೂ ಮೊದಲು ಸಚಿವರು ಡ್ರ್ಯಾಗನ್‌ ಹಣ್ಣು ಬೆಳೆಯುವ ಪ್ರದೇಶಕ್ಕೆ ಭೇಟಿ ನೀಡಿ ಹಣ್ಣು ಬೆಳೆಯುವ ಬಗ್ಗೆ ಮಾಹಿತಿ ಪಡೆದರು. ನೈಸರ್ಗಿಕವಾಗಿ ಟೊಮೆಟೋ ಬೆಳೆಯುವ ಪ್ರದೇಶಕ್ಕೂ ತೆರಳಿ ರೈತರಿಂದ ಬಗ್ಗೆ ವಿವರ ಪಡೆದರು.

ಸಂಸದ ಡಾ.ಕೆ.ಸುಧಾಕರ್‌, ಶಾಸಕ ಎಸ್‌.ಆರ್‌.ವಿಶ್ವನಾಥ್‌, ತೋಟಗಾರಿಕಾ ಸಂಸ್ಥೆ ಮಹಾ ನಿರ್ದೇಶಕ ಡಾ.ಎಸ್.ಕೆ.ಸಿಂಗ್, ಪಶುವೈದ್ಯಕೀಯ ಸಂಸ್ಥೆ ಮಹಾ ನಿರ್ದೇಶಕ ಡಾ.ರಾಘವೇಂದ್ರ ಭಟ್ಟ ಮತ್ತಿತರರು ಹಾಜರಿದ್ದರು.

PREV
Read more Articles on

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ