ಜಗದೀಪ್‌ ಧನಕರ್‌ - ಜಯಾ ಬಚ್ಚನ್‌ ಸಂಘರ್ಷ: ಏರಿದ ದನಿಯಲ್ಲಿ ಮಾತು ಸರಿಯಲ್ಲ ಎಂದ ಸಂಸದೆ

KannadaprabhaNewsNetwork | Updated : Aug 10 2024, 04:38 AM IST

ಸಾರಾಂಶ

 ರಾಜ್ಯಸಭೆಯ ಉಪಸಭಾಪತಿ ಜಗದೀಪ್‌ ಧನಕರ್‌ ಹಾಗೂ ಚಿತ್ರನಟಿ- ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್‌ ನಡುವೆ ಸದನದಲ್ಲಿ ಮತ್ತೊಂದು ಸುತ್ತಿನ ವಾಕ್ಸಮರ ನಡೆದಿದ್ದು, ಈ ಬಾರಿ ವಿಕೋಪಕ್ಕೆ ಹೋಗಿದೆ.

ನವದೆಹಲಿ: ರಾಜ್ಯಸಭೆಯ ಉಪಸಭಾಪತಿ ಜಗದೀಪ್‌ ಧನಕರ್‌ ಹಾಗೂ ಚಿತ್ರನಟಿ- ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್‌ ನಡುವೆ ಸದನದಲ್ಲಿ ಮತ್ತೊಂದು ಸುತ್ತಿನ ವಾಕ್ಸಮರ ನಡೆದಿದ್ದು, ಈ ಬಾರಿ ವಿಕೋಪಕ್ಕೆ ಹೋಗಿದೆ. ತಮ್ಮ ಹೆಸರನ್ನು ಕೂಗುವಾಗ ಏರಿದ ದನಿಯಲ್ಲಿ ಹಾಗೂ ಭಿನ್ನ ಆಂಗಿಕ ಭಾಷೆಯನ್ನು ಪ್ರದರ್ಶಿಸಿದ್ದಕ್ಕೆ ಜಯಾ ಬಚ್ಚನ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಧನಕರ್‌ ಆಕ್ರೋಶದಿಂದ ತಿರುಗೇಟು ನೀಡಿದ್ದಾರೆ. ಇದರ ಬೆನ್ನಲ್ಲೇ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿವೆ.

ಸದನದ ಹೊರಗೆ ಸುದ್ದಿಗಾರರ ಜತೆ ಮಾತನಾಡಿದ ಜಯಾ ಬಚ್ಚನ್‌, ಉಪರಾಷ್ಟ್ರಪತಿಗಳ ಏರಿದ ದನಿ ಹಾಗೂ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಲು ಎದ್ದು ನಿಂತಾಗ ಮೈಕ್‌ ಆಫ್‌ ಮಾಡಿಸಿದ್ದು ತಮಗೆ ಬೇಸರ ತರಿಸಿದೆ ಎಂದು ಹೇಳಿದರು.

ಏನಿದು ಗದ್ದಲ?:

ಖರ್ಗೆ ಅವರ ಕುರಿತು ಬಿಜೆಪಿ ಸಂಸದ ಘನಶ್ಯಾಮ್‌ ತಿವಾರಿ ಅವರು ನೀಡಿದ್ದ ಹೇಳಿಕೆಯ ಬಗ್ಗೆ ಸದನದಲ್ಲಿ ವಾಗ್ವಾದ ನಡೆಯುತ್ತಿತ್ತು. ಆ ಬಗ್ಗೆ ಮಾತನಾಡಲು ಜಯಾ ಬಚ್ಚನ್‌ ಎದ್ದು ನಿಂತಾಗ ಉಪಸಭಾಪತಿಗಳು ‘ಜಯಾ ಅಮಿತಾಭ್‌ ಬಚ್ಚನ್‌ ನೀವು ಹೇಳಿ’ ಎಂದರು. ತಕ್ಷಣವೇ ಮಾತಿಗೆ ನಿಂತ ಜಯಾ ಬಚ್ಚನ್‌ ‘ನಾನು ಜಯಾ ಅಮಿತಾಭ್‌ ಬಚ್ಚನ್‌. ನಾನು ಏನು ಹೇಳಲು ಬಯಸುತ್ತೀನಿ ಎಂದರೆ, ನಾನೊಬ್ಬಳು ಕಲಾವಿದೆ. ನನಗೂ ಆಂಗಿಕ ಭಾಷೆ ಹಾಗೂ ಅಭಿವ್ಯಕ್ತಪಡಿಸುವಿಕೆ ಬಗ್ಗೆ ಗೊತ್ತಿದೆ. ನಿಮ್ಮ ಏರಿದ ದನಿಯನ್ನು ಒಪ್ಪಲು ಆಗುತ್ತಿಲ್ಲ, ಕ್ಷಮಿಸಿ. ನೀವು ಪೀಠದಲ್ಲಿ ಕುಳಿತಿರಬಹುದು. ಆದರೆ ನಾವೆಲ್ಲರೂ ಸಹೋದ್ಯೋಗಿಗಳು’ ಎನ್ನುತ್ತಿದ್ದಂತೆ ಧನಕರ್‌ ಕೆರಳಿ ಕೆಂಡವಾದರು.

‘ನೀವು ಏನೇ ಆಗಿರಬಹುದು, ನೀವು ಸೆಲೆಬ್ರಿಟಿ ಆಗಿರಬಹುದು. ಆದರೆ ಸದನದ ಸಭ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು. ನೀವು ಮಾತ್ರ ಪ್ರತಿಷ್ಠೆ ಗಳಿಸಿದ್ದೀರಿ ಎಂಬ ಭಾವನೆಯನ್ನು ಹೊಂದಬೇಡಿ. ನಾವು ಕೂಡ ಪ್ರತಿಷ್ಠೆಗೆ ತಕ್ಕಂತೆ ಬಾಳುತ್ತಿದ್ದೇವೆ’ ಎಂದು ಕೂಗಿದರು. ಇದಕ್ಕೆ ಪ್ರತಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಖರ್ಗೆ ಮಾತನಾಡಲು ಮುಂದಾದಾಗ ಅವಕಾಶ ನೀಡಲಿಲ್ಲ. ಆಗ ವಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದರು.

ಜಯಾ ಬಚ್ಚನ್‌ ಹೆಸರು ಕೂಗುವಾಗ ‘ಜಯಾ ಅಮಿತಾಭ್‌ ಬಚ್ಚನ್‌’ ಎಂದೇ ಧನಕರ್‌ ಕರೆಯುತ್ತಾರೆ. ‘ಜಯಾ ಬಚ್ಚನ್‌’ ಎನ್ನಿ ಸಾಕು ಎಂದು ಎರಡು ಬಾರಿ ಜಯಾ ಬಚ್ಚನ್‌ ಹೇಳಿದ್ದರೂ ಅವರು ಅದನ್ನು ಕೇಳುತ್ತಿಲ್ಲ.

Share this article