ಮರೆಯಾದ ಸ್ವಾಭಿಮಾನ, ಮೆರೆದ ಸಮುದಾಯ ಪ್ರಜ್ಞೆ..!

KannadaprabhaNewsNetwork | Updated : Jun 07 2024, 06:02 AM IST

ಸಾರಾಂಶ

ಈ ಚುನಾವಣೆಯಲ್ಲಿ ಸಮುದಾಯ ಪ್ರಜ್ಞೆಯ ಅಲೆ ಮೇಳೈಸಿತ್ತು. ಇದು ಸ್ವಾಭಿಮಾನದ ಅಲೆಗಿಂತಲೂ ತೀವ್ರ ಸ್ವರೂಪದಲ್ಲಿತ್ತು. ಎಲ್ಲ ಜಾತಿ-ಜನಾಂಗದ ಮತಗಳು ಎಚ್.ಡಿ. ಕುಮಾರಸ್ವಾಮಿ ಪರವಾಗಿ ಅನಿರೀಕ್ಷಿತವೆಂಬಂತೆ ಹರಿದುಬಂದಿತು.

ಮಂಡ್ಯ ಮಂಜುನಾಥ

 ಮಂಡ್ಯ :  ಕಳೆದ ಚುನಾವಣಾ ಸಮಯದಲ್ಲಿ ಜಿಲ್ಲಾದ್ಯಂತ ಹೊಸ ಸಂಚಲನವನ್ನೇ ಸೃಷ್ಟಿಸಿದ್ದ ಸ್ವಾಭಿಮಾನದ ಅಲೆ ಈ ಬಾರಿ ಸಂಪೂರ್ಣ ಮರೆಯಾಗಿತ್ತು. ಈ ಚುನಾವಣೆಯ ಆರಂಭದಲ್ಲಿ ಕಾಂಗ್ರೆಸ್ ನಾಯಕರು ಮತ್ತೊಮ್ಮೆ ಜನಮಾನಸದಲ್ಲಿ ಸ್ವಾಭಿಮಾನವನ್ನು ಜಾಗೃತಿಗೊಳಿಸುವ ಪ್ರಯತ್ನ ನಡೆಸಿದರೂ ಜನರು ಅದಕ್ಕೆ ಸೊಪ್ಪು ಹಾಕಲೇ ಇಲ್ಲ.

ಈ ಚುನಾವಣೆಯಲ್ಲಿ ಸಮುದಾಯ ಪ್ರಜ್ಞೆಯ ಅಲೆ ಮೇಳೈಸಿತ್ತು. ಇದು ಸ್ವಾಭಿಮಾನದ ಅಲೆಗಿಂತಲೂ ತೀವ್ರ ಸ್ವರೂಪದಲ್ಲಿತ್ತು. ಎಲ್ಲ ಜಾತಿ-ಜನಾಂಗದ ಮತಗಳು ಎಚ್.ಡಿ. ಕುಮಾರಸ್ವಾಮಿ ಪರವಾಗಿ ಅನಿರೀಕ್ಷಿತವೆಂಬಂತೆ ಹರಿದುಬಂದಿತು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೊರ ಜಿಲ್ಲೆಯವರಾದರೂ ಅದನ್ನು ಮೀರಿ ಜನರು ಅವರ ಪರ ಮತಚಲಾಯಿಸಿದ್ದರು. ಮಂಡ್ಯ ಜಿಲ್ಲೆಯ ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಇದೊಂದು ಹೊಸ ದಾಖಲೆಯ ಚುನಾವಣೆಯೂ ಹೌದು.

ಹೊಸ ಇತಿಹಾಸ:

ಸುಮಲತಾ ಅಂಬರೀಶ್‌ ಕಳೆದ ಚುನಾವಣಾ ಸಮಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿದು ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ವಾಭಿಮಾನದ ಅಲೆಯಲ್ಲಿ ಗೆದ್ದು ಬಂದು ಚರಿತ್ರೆ ಸೃಷ್ಟಿಸಿದಂತೆ ಪ್ರಸ್ತುತ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಸ್ವಾಭಿಮಾನವನ್ನು ಮರೆಮಾಚಿ ಸಮುದಾಯದವರನ್ನು ತಮ್ಮತ್ತ ಆಕರ್ಷಿಸಿ ಪ್ರವಾಹದಂತೆ ಮತಗಳು ಹರಿದುಬರುವಂತೆ ಮಾಡಿದ್ದೂ ಹೊಸ ಇತಿಹಾಸವಾಗಿದೆ.

ಜನಪ್ರಿಯ ನಾಯಕರಿರುವ ಕಡೆ ಒಮ್ಮೊಮ್ಮೆ ಸ್ವಾಭಿಮಾನವನ್ನು ಮೆರೆಸುವ ಜಿಲ್ಲೆಯ ಜನರು ಮಗದೊಮ್ಮೆ ಸಮುದಾಯ ಪ್ರಜ್ಞೆಯನ್ನೂ ಮೆರೆಸುತ್ತಾರೆ ಎನ್ನುವುದಕ್ಕೆ ಈ ಚುನಾವಣೆ ಸಾಕ್ಷಿಯಾಗಿದೆ. ೨೦೧೯ರಲ್ಲಿ ಅಂಬರೀಶ್ ಮೇಲಿನ ಅಭಿಮಾನ, ಅನುಕಂಪದ ವಾತಾವರಣವಿರುವಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಊದಿದ ಸ್ವಾಭಿಮಾನದ ರಣಕಹಳೆಗೆ ಜಿಲ್ಲೆಯ ಜನರು ಸಂಪೂರ್ಣ ಫಿದಾ ಆದರು. ಆದರೆ, ಅಂಬರೀಶ್ ಮಾದರಿಯಲ್ಲಿ ಸುಮಲತಾ ಜನರ ನಡುವೆ ಇರುವ ರಾಜಕಾರಣಿಯಾಗಲಿಲ್ಲ. ಅವರು ಜನರ ಕೈಗೆಟುಕದ ರಾಜಕಾರಣಿಯಾಗಿ ಐದು ವರ್ಷ ಪೂರೈಸಿದರು. ಅಲ್ಲಿಗೆ ಸ್ವಾಭಿಮಾನಕ್ಕೆ ಮಣೆ ಹಾಕಿದ ಜನರು ತೀವ್ರ ಬೇಸರಗೊಂಡಿದ್ದರು.

ನಾಯಕತ್ವಕ್ಕೆ ಸಂಪೂರ್ಣ ಬೆಂಬಲ:

ಈ ಚುನಾವಣೆಯಲ್ಲಿ ಪ್ರಭಾವಿ ನಾಯಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ರಂಗ ಪ್ರವೇಶಿಸಿದಾಗಲೇ ಅವರ ಮೇಲೆ ಜನರ ಅಭಿಮಾನವೂ ಪುಟಿದೆದ್ದಿತು. ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ನೀಡಿದ್ದ ನೆರವು, ಮುಖ್ಯಮಂತ್ರಿಯಾಗಿದ್ದ ವೇಳೆ ಮಾಡಿದ್ದ ಸಾಲ ಮನ್ನಾ ಇವೆಲ್ಲವೂ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿತ್ತು. ಈ ಸಮಯಕ್ಕೆ ಸ್ವಾಭಿಮಾನವನ್ನು ಪಕ್ಕಕ್ಕೆ ಸರಿಸಿದ ಜಿಲ್ಲೆಯ ಜನರು ಸಮುದಾಯ ಪ್ರಜ್ಞೆಯನ್ನು ಮೂಡಿಸಿಕೊಂಡವು.

ಒಕ್ಕಲಿಗರು ಬಲವಾಗಿ ಕುಮಾರಸ್ವಾಮಿ ಅವರನ್ನು ಬೆಂಬಲಿಸಿದ ಮಾದರಿಯಲ್ಲೇ ಮಹಿಳೆಯರು ಹಾಗೂ ಹಿಂದುಳಿದ ವರ್ಗ, ಇತರೆ ಜಾತಿಯವರೂ ಅಷ್ಟೇ ತೀವ್ರಗತಿಯಲ್ಲಿ ಬೆಂಬಲಿಸಿದ್ದರಿಂದ ಗೆಲುವು ಸುಲಭ ಸಾಧ್ಯವಾಯಿತು. ಹಿಂದುಳಿದ ವರ್ಗ, ದಲಿತರು, ಇತರೆ ಹಿಂದುಳಿದ ಜಾತಿಯವರ ಮತಗಳನ್ನು ನೆಚ್ಚಿಕೊಂಡಿದ್ದ ಕಾಂಗ್ರೆಸ್ಸಿಗರಿಗೆ ತೀವ್ರ ನಿರಾಸೆ ಉಂಟಾಯಿತು. ಕುಮಾರಸ್ವಾಮಿ ಜಿಲ್ಲೆಯ ಜನರ ಬಗ್ಗೆ ಇಟ್ಟಿದ್ದ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. 2019 ರ ಲೋಕಸಭಾ ಚುನಾವಣೆಯಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲು ಹಾಗೂ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ೬ ಕ್ಷೇತ್ರಗಳಲ್ಲಿ ಸೋಲನುಭವಿಸಿದ್ದರ ನಡುವೆಯೂ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದದ್ದು ಗಮನಾರ್ಹವಾಗಿದೆ.

ಜನ ವಿಶ್ವಾಸವಿಲ್ಲದ್ದರಿಂದ ಜೆಡಿಎಸ್ ಪಾಲು:

ಸ್ವಾಭಿಮಾನದ ಹೆಸರಿನಲ್ಲೇ ಐದು ವರ್ಷ ಸಂಸದೆಯಾಗಿ ಸುಮಲತಾ ಕಾರ್ಯನಿರ್ವಹಿಸಿದ ರೀತಿ ಜನಮೆಚ್ಚುಗೆಗೆ ಪಾತ್ರವಾಗಲಿಲ್ಲ. ಜಿಲ್ಲೆಯೊಳಗೆ ಸುಮಲತಾ ಬಗ್ಗೆ ಜನರ ಪ್ರೀತಿ-ಅಭಿಮಾನ ಕ್ಷೀಣಿಸಿದ್ದೂ ಕೂಡ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಡುವುದಕ್ಕೆ ಒಂದು ಕಾರಣ ಎಂಬ ಮಾತುಗಳೂ ಕೇಳಿಬರುತ್ತಿವೆ. ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಯ ಚುನಾವಣಾ ಅಖಾಡ ಪ್ರವೇಶಿಸಿದಾಗ ಅವರು ಹೊರಗಿನವರು ಎಂಬ ಭಾವನೆ ಜನಮಾನಸದಲ್ಲಿ ಮೂಡಲೇ ಇಲ್ಲ. ಪ್ರತಿಯೊಬ್ಬರಿಗೂ ಪರಿಚಿತವಾಗಿದ್ದ ಮುಖ, ವ್ಯಕ್ತಿತ್ವವಾಗಿದ್ದರಿಂದ ಅವರ ನಾಮಬಲಕ್ಕೆ ಜನರು ಮನಸೋತರು.

ಚುನಾವಣೆಯಲ್ಲಿ ಬೆಂಬಲಿಸುವುದಕ್ಕೆ ಮತ್ತೊಂದು ಪರ್ಯಾಯ ಅವಕಾಶವೇ ಇಲ್ಲದಿದ್ದರಿಂದ ಸಾರಾಸಗಟಾಗಿ ಕುಮಾರಸ್ವಾಮಿ ಪರ ಜನರ ಅಲೆ ಎದ್ದಿತು. ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಲಿಂಗಾಯಿತರು, ದಲಿತರು, ಹಿಂದುಳಿದ ವರ್ಗ, ಇತರೆ ಹಿಂದುಳಿದ ಜಾತಿಯ ಬಹುತೇಕ ಮತಗಳು ಎಚ್‌ಡಿಕೆಯನ್ನು ಅರಸಿಕೊಂಡು ಬಂದವು. ಆರಂಭದಿಂದ ಅಂತ್ಯದವರೆಗೂ ಅಂತರವನ್ನೇ ಕಾಯ್ದುಕೊಂಡು ೨.೮೪ ಲಕ್ಷ ಮತಗಳ ಅಂತರದಿಂದ ಗೆದ್ದು ಬೀಗಿದರು.

ಎಚ್‌ಡಿಕೆ ಮುಂದಿರುವ ಸವಾಲುಗಳೇನು?

೧.ಕಾವೇರಿ ಸಮಸ್ಯೆಗೆ ಪರಿಹಾರ ಸೂಚಿಸುವುದಾಗಿ ಜನರಿಗೆ ನೀಡಿರುವ ಭರವಸೆ. ಇದು ಅಷ್ಟು ಸುಲಭದ ಕಾರ್ಯವೂ ಅಲ್ಲ. ಆದರೆ, ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ 2007 ರ ಅಂತಿಮ ತೀರ್ಪನ್ನು ವಿರೋಧಿಸಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದರಿಂದ 14.75 ಟಿಎಂಸಿ ಹೆಚ್ಚುವರಿ ನೀರು 2018 ರಲ್ಲಿ ಕರ್ನಾಟಕಕ್ಕೆ ದೊರಕಿತ್ತು. ಈಗ ಶಾಶ್ವತ ಪರಿಹಾರಕ್ಕೆ ಏನು ಮಾಡಬೇಕು ಎಂಬ ಬಗ್ಗೆ ತಕ್ಷಣದಿಂದಲೇ ಕಾರ್ಯೋನ್ಮುಖರಾಗಬೇಕಿದೆ.

೨. ಮೈಷುಗರ್ ಕಾರ್ಖಾನೆ ರೋಗಗ್ರಸ್ಥ ಕಾರ್ಖಾನೆಯಾಗಿದೆ. ಮೊದಲು ರೋಗಗ್ರಸ್ಥ ಎಂಬ ಹಣೆಪಟ್ಟಿಯನ್ನು ಕಳಚಬೇಕು. ಕಾರ್ಖಾನೆಯನ್ನು ಸಾಲಮುಕ್ತಗೊಳಿಸಿ ಕೇಂದ್ರಸರ್ಕಾರದಿಂದ ಕಾರ್ಖಾನೆಗೆ ಅನುದಾನ ಹರಿದುಬರುವಂತೆ ಮಾಡುವ ಅವಶ್ಯಕತೆ ಇದೆ. ಎಥೆನಾಲ್ ಘಟಕ ಸೇರಿದಂತೆ ಇನ್ನಿತರ ಉಪ ಉತ್ಪನ್ನಗಳ ತಯಾರಿಕೆಗೆ ಅವಕಾಶ ಕಲ್ಪಿಸಿಕೊಟ್ಟು ಕಾರ್ಖಾನೆ ಪುನರುಜ್ಜೀವನಗೊಳಿಸುವುದಕ್ಕೆ ಕ್ರಮ ವಹಿಸುವುದು ಅಗತ್ಯವಾಗಿದೆ.

೩. ಕೇಂದ್ರದಲ್ಲಿ ಕೃಷಿ ಖಾತೆ ದೊರಕಿದಲ್ಲಿ ಶೀತಲೀಕರಣ ಕೇಂದ್ರ, ಕೃಷಿ ಉತ್ಪನ್ನಗಳ ಸಂಸ್ಕರಣಾ ಕೇಂದ್ರಗಳನ್ನು ತೆರೆದು ಕೃಷಿ ಉತ್ಪನ್ನಗಳು ಹಾಳಾಗದಂತೆ ತಡೆಯುವುದು. ಕೃಷಿ ಮಾರುಕಟ್ಟೆ ವಿಸ್ತರಣೆಗೊಳಿಸುವುದು. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯನ್ನು ನಿಗದಿಪಡಿಸುವುದರೊಂದಿಗೆ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವುದು. ಒಮ್ಮೆ ಕೃಷಿ ಖಾತೆ ಸಿಗದಿದ್ದರೂ ಎನ್‌ಡಿಎ ಸರ್ಕಾರದ ಗಮನಸೆಳೆದು ಈ ಯೋಜನೆಗಳನ್ನು ಜಾರಿಗೆ ತಂದು ರೈತರ ಬದುಕನ್ನು ರಕ್ಷಣೆ ಮಾಡಬೇಕಿದೆ.

೪. ಸಂಸದರ ಆದರ್ಶ ಗ್ರಾಮ ಯೋಜನೆಗೆ ಹೊಸ ರೂಪ ನೀಡುವುದು. ಈಗಾಗಲೇ ಮೂರು ಅವಧಿಯಿಂದ ಮಾರಚಾಕನಹಳ್ಳಿ, ಕೆರೆತೊಣ್ಣೂರು, ಬೆಸಗರಹಳ್ಳಿ ಸೇರಿದಂತೆ ಕೆಲವು ಗ್ರಾಮಗಳು ಆದರ್ಶ ಗ್ರಾಮಕ್ಕೆ ಆಯ್ಕೆಯಾಗಿದ್ದರೂ ನಿರೀಕ್ಷಿತ ಪ್ರಗತಿ ಎಲ್ಲಿಯೂ ಕಂಡಿಲ್ಲ. ಆದರ್ಶ ಗ್ರಾಮ ಹೆಸರಿಗೆ ತಕ್ಕಂತೆ ಅಭಿವೃದ್ಧಿಯ ಪರ್ವವನ್ನು ಸೃಷ್ಟಿಸಿ ಇತರೆ ಗ್ರಾಮಗಳಿಗೆ ಮಾದರಿಯಾಗುವಂತೆ ಮಾಡಬೇಕಿರುವುದು ಕುಮಾರಸ್ವಾಮಿ ಜವಾಬ್ದಾರಿಯಾಗಿದೆ.

೫, ಮಂಡ್ಯದ ಫೆರಿಫೆರಲ್ ಕ್ಯಾನ್ಸರ್ ಕೇಂದ್ರವನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಿ ಕ್ಯಾನ್ಸರ್ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವಂತೆ ಮಾಡುವುದು. ಆಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳು, ವೈದ್ಯರು-ಸಿಬ್ಬಂದಿ ನೇಮಕ, ಔಷಧಾಲಯ ಸ್ಥಾಪನೆಯೊಂದಿಗೆ ಆಸ್ಪತ್ರೆಗೆ ಮೂಲಸೌಕರ್ಯಗಳನ್ನು ದೊರಕಿಸಿಕೊಟ್ಟು ಪುನಶ್ಚೇತನಗೊಳಿಸುವ ತುರ್ತು ಅಗತ್ಯವಿದೆ. ಇದರಿಂದ ನಾಲ್ಕೈದು ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ.

Share this article