ಕುಟುಂಬ ರಾಜಕೀಯದಲ್ಲಿ ಕರ್ನಾಟಕ ದೇಶಕ್ಕೇ ನಂ.4!

Published : Sep 13, 2025, 05:50 AM IST
Vidhan soudha

ಸಾರಾಂಶ

ಕುಟುಂಬ ರಾಜಕಾರಣಕ್ಕೆ ಮಂಗಳ ಹಾಡಬೇಕು ಎಂಬ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಿದ್ದರೂ, ಆ ರಾಜಕೀಯ ಶೈಲಿ ಆಳವಾಗಿ ಬೇರೂರಿದೆ ಎಂದು ವರದಿಯೊಂದು ಹೇಳಿದೆ

 ನವದೆಹಲಿ: ಕುಟುಂಬ ರಾಜಕಾರಣಕ್ಕೆ ಮಂಗಳ ಹಾಡಬೇಕು ಎಂಬ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಿದ್ದರೂ, ಆ ರಾಜಕೀಯ ಶೈಲಿ ಆಳವಾಗಿ ಬೇರೂರಿದೆ ಎಂದು ವರದಿಯೊಂದು ಹೇಳಿದೆ. ದೇಶದ ಒಟ್ಟು ಸಂಸದ, ಶಾಸಕ, ವಿಧಾನಪರಿಷತ್‌ ಸದಸ್ಯರ ಪೈಕಿ ಶೇ.20ರಷ್ಟು ಮಂದಿಗೆ ಕುಟುಂಬ ರಾಜಕಾರಣದ ಹಿನ್ನೆಲೆ ಇದೆ. ಇಂತಹ ಜನಪ್ರತಿನಿಧಿಗಳ ಸಂಖ್ಯೆಯಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಸರಾಸರಿಗಿಂತಲೂ ಕರ್ನಾಟಕದಲ್ಲಿ ಹೆಚ್ಚಿನ ಕುಟುಂಬ ರಾಜಕಾರಣವಿದೆ ಎಂದೂ ವರದಿ ತಿಳಿಸಿದೆ.

ಕುಟುಂಬ ರಾಜಕಾರಣವೆಂದರೆ, ಸಾಮಾನ್ಯವಾಗಿ ತಮಿಳುನಾಡು ಕನ್ನಡಿಗರ ಕಣ್ಣ ಮುಂದೆ ಬರುತ್ತದೆ. ಆದರೆ ಆ ರಾಜ್ಯ ಕರ್ನಾಟಕಕ್ಕಿಂತ ಕೆಳಗೆ ಅಂದರೆ 7ನೇ ಸ್ಥಾನದಲ್ಲಿದೆ ಎಂಬ ಸಂಗತಿ ವರದಿಯಲ್ಲಿದೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ಎನ್‌ಇಡಬ್ಲ್ಯು) ಸಂಸ್ಥೆಗಳು ಬಿಡುಗಡೆ ಮಾಡಿರುವ ವರದಿ ಅನ್ವಯ, ಪ್ರಸಕ್ತ ದೇಶದಲ್ಲಿರುವ 5,204 ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಲ್ಲಿ ಶೇ.20ರಷ್ಟು ಮಂದಿ ರಾಜಕೀಯ ಕೌಟುಂಬಿಕ ಹಿನ್ನೆಲೆಯಿಂದ ಬಂದವರು. ಈ ಪಟ್ಟಿಯಲ್ಲಿ, ಕರ್ನಾಟಕ ಶೇ.29ರಷ್ಟು ಕುಟುಂಬಿಕ ಹಿನ್ನೆಲೆ ಹೊಂದಿದ ಜನಪ್ರತಿನಿಧಿಗಳನ್ನು ಹೊಂದುವ ಮೂಲಕ ದೇಶದಲ್ಲಿ 4ನೇ ಸ್ಥಾನ ಪಡೆದಿದೆ.

ಉತ್ತರ ಪ್ರದೇಶದಲ್ಲಿ 141, ಮಹಾರಾಷ್ಟ್ರದಲ್ಲಿ 129, ಬಿಹಾರದಲ್ಲಿ 96 ಮಂದಿಗೆ ಕುಟುಂಬ ರಾಜಕಾರಣದ ನಂಟು ಇದ್ದರೆ, 94 ಮಂದಿಯ ಕುಟುಂಬದ ನಂಟಿನೊಂದಿಗೆ ಕರ್ನಾಟಕ 4ನೇ ಸ್ಥಾನದಲ್ಲಿದೆ.

ಕರ್ನಾಟಕ ನಂ.4:

ಕರ್ನಾಟಕದ ವಿಧಾನಸಭೆ, ವಿಧಾನ ಪರಿಷತ್‌ ಮತ್ತು ಸಂಸತ್‌ನಲ್ಲಿ ಕರ್ನಾಟಕದ ಜನಪ್ರತಿನಿಧಿಗಳನ್ನು ಸೇರಿಸಿದರೆ ಒಟ್ಟು 326 ಜನರಿದ್ದಾರೆ. ಇವರಲ್ಲಿ 14 ಲೋಕಸಭಾ ಸಂಸದರು, 2 ರಾಜ್ಯಸಭಾ ಸದಸ್ಯರು, 14 ವಿಧಾನ ಪರಿಷತ್‌ ಸದಸ್ಯರು ಹಾಗೂ 64 ಶಾಸಕರು ಸೇರಿ ಒಟ್ಟು 94 ಜನ (ಶೇ.29) ಕೌಟುಂಬಿಕ ಹಿನ್ನೆಲೆಯುಳ್ಳವರು. ಈ ಪೈಕಿ 85 ಪುರುಷ ಹಾಗೂ 9 ಮಹಿಳಾ ಜನಪ್ರತಿನಿಧಿಗಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ತಮಿಳುನಾಡಿನ 281 ರಾಜಕಾರಣಿಗಳ ಪೈಕಿ 43 ಮಂದಿಗೆ (ಶೇ.15) ಕುಟುಂಬ ರಾಜಕಾರಣದ ಹಿನ್ನೆಲೆ ಇದೆ ಎಂದು ವರದಿ ಹೇಳಿದೆ.

ಪಕ್ಷವಾರು ಎಷ್ಟೆಷ್ಟು?:

ರಾಷ್ಟ್ರೀಯ ಪಕ್ಷಗಳಲ್ಲಿ ಹಾಲಿ ಜನಪ್ರತಿನಿಧಿಗಳಲ್ಲಿ ಶೇ.20ರಷ್ಟು ಮಂದಿ ರಾಜಕೀಯ ಕೌಟುಂಬಿಕ ಹಿನ್ನೆಲೆ ಹೊಂದಿದ್ದಾರೆ. ಕಾಂಗ್ರೆಸ್‌ನಲ್ಲಿ ಶೇ.32, ಬಿಜೆಪಿಯಲ್ಲಿ ಶೇ.18 ಹಾಗೂ ಸಿಪಿಎಂನಲ್ಲಿ ಅತಿ ಕನಿಷ್ಠ ಶೇ.8ರಷ್ಟು ಜನರಿದ್ದಾರೆ. ದೇಶದ ಒಟ್ಟು 5,204 ಜನಪ್ರತಿನಿಧಿಗಳ ಪೈಕಿ ಲೋಕಸಭೆಯಲ್ಲಿ ಶೇ.31 (ಅತಿ ಹೆಚ್ಚು), ರಾಜ್ಯಸಭೆಯಲ್ಲಿ ಶೇ.21, ರಾಜ್ಯ ವಿಧಾನಸಭೆಗಳಲ್ಲಿ ಶೇ.20 ಮತ್ತು ವಿಧಾನ ಪರಿಷತ್‌ನಲ್ಲಿ ಶೇ.22ರ ಪ್ರಮಾಣದಲ್ಲಿ ಕುಟುಂಬ ರಾಜಕಾರಣವಿದೆ.

ಪರಿವಾರ ರಾಜಕೀಯ

- ದೇಶದ 5204 ಸಂಸದ, ಶಾಸಕ, ವಿಧಾನಪರಿಷತ್‌ ಸದಸ್ಯರ ಪೈಕಿ ಶೇ.20 ಮಂದಿಗೆ ಕುಟುಂಬದ ಹಿನ್ನೆಲೆ

- ಕರ್ನಾಟಕ ರಾಜ್ಯದಲ್ಲಿ ಇಂತಹವರ ಪ್ರಮಾಣ ಶೇ.29. ಅಂದರೆ ರಾಷ್ಟ್ರೀಯ ಸರಾಸರಿಗಿಂತಲೂ ಅಧಿಕ

- ಕರ್ನಾಟಕದ 14 ಲೋಕಸಭೆ, 2 ರಾಜ್ಯಸಭೆ, 14 ಎಂಎಲ್ಸಿ, 64 ಶಾಸಕರಿಗೆ ಕುಟುಂಬ ರಾಜಕೀಯ ನಂಟು

- ಈ ಪೈಕಿ 85 ಮಂದಿ ಪುರುಷರು, 9 ಮಂದಿ ಮಹಿಳೆಯರು. ತಮಿಳುನಾಡಿಗೆ 7ನೇ ಸ್ಥಾನ: ಎಡಿಆರ್‌ ವರದಿ

PREV
Read more Articles on

Recommended Stories

ಬ್ಯಾಲೆಟ್ ಪೇಪರ್ ಅಕ್ರಮ ಈಗ ಸುಲಭವಲ್ಲ
ವೀಪಿ ಚುನಾವಣೆ ಅಡ್ಡ ಮತದಾನ : ಇಂಡಿಯಾ ಕೂಟದಲ್ಲಿ ಒಡಕು