ದೇಶ ಸ್ವಾವಲಂಬನೆಯಾಗಲು ರೈತರ ಪಾತ್ರ ದೊಡ್ಡದು : ಶೋಭಾ ಕರಂದ್ಲಾಜೆ

KannadaprabhaNewsNetwork |  
Published : Oct 25, 2025, 01:00 AM ISTUpdated : Oct 25, 2025, 07:58 AM IST
Shobha Karandlaje

ಸಾರಾಂಶ

ದೇಶ ಸ್ವಾವಲಂಬಿಯಾಗಲು ರೈತರ ಪಾತ್ರ ಬಹುದೊಡ್ಡದು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ‌ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.  ರಾಷ್ಟ್ರೀಯ ರೇಷ್ಮೆಹುಳು ಬೀಜ ಸಂಸ್ಥೆಯ ಸುವರ್ಣ ಮಹೋತ್ಸವ ಉದ್ಘಾಟಿಸಿ  ಮಾತನಾಡಿದರು.

 ಬೆಂಗಳೂರು :  ದೇಶ ಸ್ವಾವಲಂಬಿಯಾಗಲು ರೈತರ ಪಾತ್ರ ಬಹುದೊಡ್ಡದು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ‌ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಶುಕ್ರವಾರ ಕೇಂದ್ರ ರೇಷ್ಮೆ ಮಂಡಳಿ ರಾಷ್ಟ್ರೀಯ ರೇಷ್ಮೆಹುಳು ಬೀಜ ಸಂಸ್ಥೆಯ ಸುವರ್ಣ ಮಹೋತ್ಸವ ಉದ್ಘಾಟಿಸಿ, ರಾಷ್ಟ್ರೀಯ ರೇಷ್ಮೆಹುಳು ಬೀಜ ಸಂಸ್ಥೆಯ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿ ಮಾತನಾಡಿದರು.

ಸ್ವಾತಂತ್ರ್ಯಾ ನಂತರ ದೇಶದ ಹಲವು ಕ್ಷೇತ್ರಗಳು ಸ್ವಾವಲಂಬಿಯಾಗಿರಲಿಲ್ಲ. ಆದರೆ ಇಂದು ಆಹಾರ ಉತ್ಪಾದನೆ, ಹಾಲು, ತರಕಾರಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಆತ್ಮನಿರ್ಭರತೆ ಹೊಂದಿದ್ದೇವೆ ಎಂದು ಹೇಳಿದರು.

ಯಾರಿಗೆ ದೂರ ದೃಷ್ಟಿಯಿರುತ್ತದೆಯೋ ಅವರಿಂದ ಸಂಸ್ಥೆಗಳನ್ನು ಕಟ್ಟಲು ಸಾಧ್ಯ. ಶ್ಯಾಮಪ್ರಸಾದ್ ಮುಖರ್ಜಿ ಉದ್ಯಮ ಸಚಿವರಾಗಿದ್ದ ದೇಶದಲ್ಲಿ ಹಲವು ಕೈಗಾರಿಕೆ, ಸಂಸ್ಥೆಗಳನ್ನು ಸ್ಥಾಪಿಸಿದರು. ಅದರ ಫಲದಿಂದ ಕೇಂದ್ರ ರೇಷ್ಮೆ ಮಂಡಳಿ ಬೃಹದಾಕಾರವಾಗಿ ಬೆಳೆದಿದೆ. ರೇಷ್ಮೆ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ. ಹಲವರಿಗೆ ಉದ್ಯೋಗವಕಾಶಗಳನ್ನು ಕಲ್ಪಿಸಿಕೊಟ್ಟಿದೆ ಎಂದರು.

ಪ್ರತಿ ವರ್ಷ 2.5 ಲಕ್ಷ ಕೋಟಿ ಮೊತ್ತದ ಅಡುಗೆ ತೈಲ ಆಮದು

ಪ್ರತಿ ವರ್ಷ 2.5 ಲಕ್ಷ ಕೋಟಿ ಮೊತ್ತದ ಅಡುಗೆ ತೈಲ ಆಮದು ಮಾಡಿಕೊಳ್ಳುತ್ತಿದ್ದೇವೆ. ಅದೇ ರೀತಿ ಶೇ.10ರಷ್ಟು ಬೇಳೆಕಾಳು ಹಾಗೂ ರೇಷ್ಮೆಯನ್ನೂ ಆಮದು ಮಾಡಿಕೊಳ್ಳುತ್ತಿದ್ದೇವೆ. ಇದನ್ನು ತಗ್ಗಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಹಲವು ವಿಶೇಷ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.

ರೈತರ ಆದಾಯ ದ್ವಿಗುಣಗೊಳ್ಳಲು ಉತ್ತಮ ಬಿತ್ತನೆ ಬೀಜ, ತಂತ್ರಜ್ಞಾನ, ಬೆಲೆ ಅವಶ್ಯ. ಉದ್ಯಮಿಗಳ ಆದಾಯ ದುಪ್ಪಟ್ಟುಗೊಳ್ಳಬೇಕಾದರೆ ಅವರು ತಯಾರಿಸುವ ಉತ್ಪನ್ನಗಳು ಉತ್ಕೃಷ್ಟವಾಗಿರಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಶ್ರಮಿಸಿದಾಗ ರೈತರ ಹಾಗೂ ಉದ್ಯಮಿಗಳ ಆದಾಯ ಹೆಚ್ಚಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಭಾರತದ ರೇಷ್ಮೆಗೆ ದೇಶದಲ್ಲಿ ಅಷ್ಟೇ ಅಲ್ಲ ವಿದೇಶಗಳಲ್ಲೂ ಹೆಚ್ಚಿನ ಬೇಡಿಕೆ

ಭಾರತದ ರೇಷ್ಮೆಗೆ ದೇಶದಲ್ಲಿ ಅಷ್ಟೇ ಅಲ್ಲ   ವಿದೇಶಗಳಲ್ಲೂ ಹೆಚ್ಚಿನ ಬೇಡಿಕೆಯಿದೆ. ರೇಷ್ಮೆಯ ಅತ್ಯುತ್ತಮ ಉತ್ಪನ್ನಗಳನ್ನು ತಯಾರಿಸಿ ವಿದೇಶಗಳಿಗೆ ರಫ್ತು ಮಾಡುವ ವಿಫುಲ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ. ಯಾವುದೇ ಉತ್ಪನ್ನಗಳನ್ನು ತಯಾರಿಸಿದರೂ ಅದು ರಫ್ತು ಗುಣಮಟ್ಟ ಹೊಂದಿರಬೇಕು. ಆಗ ಮಾತ್ರ ಉತ್ತಮ ಬೆಲೆ ದೊರೆಯಲು ಸಾಧ್ಯವಾಗಲಿದೆ ಎಂದರು.

ದೇಶದ ರೇಷ್ಮೆ ಉತ್ಪಾದನೆಯಲ್ಲಿ ರಾಜ್ಯ ಶೇ.40ರಷ್ಟು ಪಾಲು ಹೊಂದಿದೆ. ಈ ಪ್ರಮಾಣ ಮುಂದಿನ ದಿನಗಳಲ್ಲಿ ಹೆಚ್ಚಾಗಬೇಕು. ಮೈಸೂರು ರೇಷ್ಮೆ ಸೀರೆಗಳಿಗೆ ಉತ್ತಮ ಬೇಡಿಕೆ ಇದ್ದು, ಮತ್ತಷ್ಟು ಉತ್ಪಾದಿಸುವ ಸಾಮರ್ಥ್ಯ ಹೊಂದಬೇಕಿದೆ. ಕರ್ನಾಟಕದ ರೇಷ್ಮೆ ರಾಜ್ಯದ ಹೆಮ್ಮೆಯಾಗಿದ್ದು, ಅತ್ಯುತ್ತಮ ರೇಷ್ಮೆ ಬೆಳೆಯುತ್ತಿರುವ ರೈತರಿಗೆ ಈ ಹೆಗ್ಗಳಿಕೆ ಸಲ್ಲಬೇಕು ಎಂದು ಹೇಳಿದರು.

ಸಂಸದ ಡಾ.ಸಿ.ಎನ್.ಮಂಜುನಾಥ ಮಾತನಾಡಿ, ದೇಶ ನಿರ್ಮಾಣದಲ್ಲಿ ರೈತರು, ವಿಜ್ಞಾನಿಗಳ ಪಾತ್ರ ಹಿರಿದು. ಪ್ರಧಾನಿ ಮೋದಿ ಅವರ ಆಶಯದಂತೆ 2047ರ ವಿಕಸಿತ ಭಾರತ ನಿರ್ಮಾಣದಲ್ಲಿ ಕೃಷಿಕರು, ವಿಜ್ಞಾನಿಗಳು, ತಂತ್ರಜ್ಞರು ಮತ್ತು ಪಾರದರ್ಶಕ ಆಡಳಿತ ಮಹತ್ವದ ಪಾತ್ರವಹಿಸಲಿದೆ ಎಂದರು.

ರೇಷ್ಮೆಯೂ ಸಹ ದೇಶದ ಪಾಲಿಗೆ ಚಿನ್ನವಾಗಿದೆ. ರೈತರಿಗೆ ನಷ್ಟ ಉಂಟುಮಾಡದೆ ಪ್ರತಿ ತಿಂಗಳು ಸಂಬಳದ ಮಾದರಿಯಲ್ಲಿ ಆದಾಯ ತಂದುಕೊಡುವ ಬೆಳೆಯಾಗಿದೆ. ರಾಜ್ಯವು ರೇಷ್ಮೆ ಉತ್ಪಾದನೆಯಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಮುಂದಿನ‌ ದಿನಗಳಲ್ಲಿ ಇದರ ಉತ್ಪಾದನೆ ದ್ವಿಗುಣಗೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉತ್ತಮ ರೇಷ್ಮೆ ಬೆಳೆಯುತ್ತಿರುವ ಪ್ರಗತಿಪರ ರೈತರನ್ನು, ನವೋದ್ಯಮಿಗಳನ್ನು ಹಾಗೂ ಈ ಹಿಂದೆ ರೇಷ್ಮೆ ಮಂಡಳಿಗೆ ಸೇವೆ ಸಲ್ಲಿಸಿದ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ. ಶಿವಕುಮಾರ, ರಾಷ್ಟ್ರೀಯ ರೇಷ್ಮೆ ಹುಳು ಬೀಜ ಸಂಸ್ಥೆ ನಿರ್ದೇಶಕ ಡಾ.ಎಸ್. ಮಂಥಿರಾಮೂರ್ತಿ ಸೇರಿ ಮೊದಲಾದವರಿದ್ದರು.

PREV
Read more Articles on

Recommended Stories

ನಿತೀಶ್‌ ನೇತೃತ್ವದಲ್ಲಿ ಈ ಸಲ ದಾಖಲೆಯ ಜಯ : ಮೋದಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಮತ್ತಷ್ಟು ಪ್ರದೇಶ ಸೇರ್ಪಡೆ : ಡಿ.ಕೆ. ಶಿವಕುಮಾರ್‌