ಲೋಕಸಭಾ ಕ್ಷೇತ್ರ ಮರುವಿಂಗಡಣೆ ವಿರುದ್ಧ ಹೋರಾಡಿ : ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಕರೆ

KannadaprabhaNewsNetwork | Updated : Apr 12 2025, 11:17 AM IST

ಸಾರಾಂಶ

ದಕ್ಷಿಣ ಭಾರತದ ರಾಜ್ಯಗಳು ತ್ರಿಭಾಷಾ ಸೂತ್ರ ತಿರಸ್ಕರಿಸಬೇಕು. ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವಿರೋಧಿಸುವ ತೀರ್ಮಾನ ಕೈಗೊಂಡು ಹೋರಾಟ ರೂಪಿಸಬೇಕೆಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಒತ್ತಾಯಿಸಿದರು.

 ಬೆಂಗಳೂರು :  ದಕ್ಷಿಣ ಭಾರತದ ರಾಜ್ಯಗಳು ತ್ರಿಭಾಷಾ ಸೂತ್ರ ತಿರಸ್ಕರಿಸಬೇಕು. ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವಿರೋಧಿಸುವ ತೀರ್ಮಾನ ಕೈಗೊಂಡು ಹೋರಾಟ ರೂಪಿಸಬೇಕೆಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಒತ್ತಾಯಿಸಿದರು.

ಬುಧವಾರ ನಗರದ ಭಾರತ್‌ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಸಭಾಂಗಣದಲ್ಲಿ ನವ ಕರ್ನಾಟಕ ನಿರ್ಮಾಣ ಆಂದೋಲನ ನೇತೃತ್ವದಲ್ಲಿ ತ್ರಿಭಾಷಾ ಸೂತ್ರ ಮತ್ತು ಕ್ಷೇತ್ರಗಳ ಮರುವಿಂಗಡಣೆ ವಿರೋಧಿಸಿ ಸ್ವಾಭಿಮಾನಿ ಚಳವಳಿ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

2026ರಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ನಡೆದರೆ ದಕ್ಷಿಣ ರಾಜ್ಯಗಳು 26 ಸ್ಥಾನಗಳನ್ನು ಕಳೆದುಕೊಳ್ಳಲಿವೆ. ಸಂಸತ್ತಿನಲ್ಲಿರುವ ಹಾಲಿ 543 ಸ್ಥಾನಗಳ ಪೈಕಿ 226 ಕ್ಷೇತ್ರಗಳನ್ನು ಹೊಂದಿರುವ ಹಿಂದಿ ಭಾಷಿಕ ರಾಜ್ಯಗಳ ಕ್ಷೇತ್ರಗಳ ಸಂಖ್ಯೆ 259ಕ್ಕೆ ಏರಿಕೆಯಾಗಲಿದೆ. ಇದೇ ವೇಳೆ 132 ಸ್ಥಾನಗಳನ್ನು ಹೊಂದಿರುವ ದಕ್ಷಿಣ ರಾಜ್ಯಗಳು 26 ಸ್ಥಾನಗಳನ್ನು ಕಳೆದುಕೊಳ್ಳುತ್ತವೆ. ಇದು ದಕ್ಷಿಣ ರಾಜ್ಯಗಳ ಅಸ್ತಿತ್ವಕ್ಕೆ ಮಾರಕವಾಗಲಿದ್ದು, ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದರು.

ಉತ್ತರದ ರಾಜ್ಯಗಳು ಎರಡು ಭಾಷೆಯನ್ನು ಕಲಿಯುತ್ತಿವೆ. ನಾವೇಕೆ ತ್ರಿಭಾಷಾ ಸೂತ್ರದಲ್ಲಿ ಹಿಂದಿ ಕಲಿಯಬೇಕು. ‘ಈಗಾಗಲೇ ರಾಜ್ಯದಲ್ಲಿ ಹಿಂದಿ ಹೇರಿಕೆ ಆರಂಭವಾಗಿದೆ. ಇದನ್ನು ತಡೆಯಲು ನಿರಂತರ ಹೋರಾಟ ಮಾಡಬೇಕು. ರಾಜ್ಯದಲ್ಲೂ ದ್ವಿಭಾಷಾ ಸೂತ್ರವನ್ನು ಅನುಷ್ಠಾನಕ್ಕೆ ತರಬೇಕು. ಈ ನಿಟ್ಟಿನಲ್ಲಿ ದಕ್ಷಿಣ ಭಾರತದ ರಾಜ್ಯಗಳ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಹೋರಾಟಕ್ಕೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.

ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಮಾತನಾಡಿ, ತ್ರಿಭಾಷಾ ಸೂತ್ರ ಮತ್ತು ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆಯನ್ನು ವಿರೋಧಿಸಿ, ದಕ್ಷಿಣ ಭಾರತದ ಎಲ್ಲ ನಾಯಕರು ಸೇರಿ ಸಭೆ ನಡೆಸಿ ಸೂಕ್ತ ತೀರ್ಮಾನಕೈಗೊಂಡು ಹೋರಾಟ ರೂಪಿಸಬೇಕು. ಕರ್ನಾಟಕದಲ್ಲಿ ಪರ್ಯಾಯವಾದ ಮೂರನೇ ರಾಜಕೀಯ ಶಕ್ತಿ ನಿರ್ಮಾಣ ಮಾಡಬೇಕು. ಅದಕ್ಕೆ ನಾನು ಸಹಕಾರ ನೀಡುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಆಲ್‌ ಇಂಡಿಯಾ ಬಹುಜನ ಪಕ್ಷದ ರಾಷ್ಟ್ರೀಯ ಸಂಯೋಜಕ ಗೋಪಿನಾಥ್‌, ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ರಾಜ್ಯ ಸಂಯೋಜಕ ಆರ್.ಮುನಿಯಪ್ಪ, ಆರ್‌ಪಿಐ(ಬಿ) ರಾಷ್ಟ್ರೀಯ ಅಧ್ಯಕ್ಷ ಎನ್.ಮೂರ್ತಿ, ಆರ್‌ಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಆರ್.ಮೋಹನ್ ರಾಜ್, ಜಯ ಕರ್ನಾಟಕದ ಮುಖಂಡ ರಾಧಾಕೃಷ್ಣ, ಬೈಲ ಹೊನ್ನಯ್ಯ, ಪ್ರಾಧ್ಯಾಪಕ ಸಿ.ಜಿ.ಲಕ್ಷ್ಮಿಪತಿ ಉಪಸ್ಥಿತರಿದ್ದರು.

Share this article