ನಾಳೆ, ನಾಡಿದ್ದು ಕಾಂಗ್ರೆಸ್ಸಿಂದ ಲೋಕಸಭೆ ತಂತ್ರಗಾರಿಕೆ ಸಭೆ

KannadaprabhaNewsNetwork |  
Published : Jan 08, 2024, 01:45 AM ISTUpdated : Jan 08, 2024, 12:01 PM IST
Randeep_Singh_Surjewala

ಸಾರಾಂಶ

ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತಯಾರಿ ಆರಂಭಿಸಿದ್ದು, ರಾಜ್ಯದಲ್ಲಿ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ನೇತೃತ್ವದಲ್ಲಿ ತಂತ್ರಗಾರಿಕೆ ಸಭೆ ನಡೆಸಲು ಪಕ್ಷ ತೀರ್ಮಾನಿಸಿದೆ.

ಕನ್ನಡಪ್ರಭ ವಾರ್ತೆ 

ಬೆಂಗಳೂರು: ಲೋಕಸಭೆ ಚುನಾವಣೆ ಸಿದ್ಧತೆ ಕುರಿತು ವಿವಿಧ ಹಂತದ ರಾಜ್ಯ ಕಾಂಗ್ರೆಸ್‌ ನಾಯಕರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸುವ ಸಲುವಾಗಿ ಸೋಮವಾರ ಮಧ್ಯಾಹ್ನ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಸುರ್ಜೇವಾಲಾ ಅವರು ಜ.9ರ ಮಂಗಳವಾರ ಕಾಂಗ್ರೆಸ್‌ ಹಿರಿಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.ಬಳಿಕ ಜ.10ರ ಬುಧವಾರ ಕಾಂಗ್ರೆಸ್‌ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ. ಈ ವೇಳೆ ಕೆಪಿಸಿಸಿಯು ವೀಕ್ಷಕರನ್ನಾಗಿ ನೇಮಿಸಿರುವ ಸಚಿವರು ತಮಗೆ ಸೂಚಿಸಿರುವ ಲೋಕಸಭೆ ಕ್ಷೇತ್ರದಲ್ಲಿ ಸಂಭಾವ್ಯರ ಪಟ್ಟಿ ಸಿದ್ಧಪಡಿಸಲು ಯಾವೆಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಪರಿಶೀಲಿಸುವ ಸಾಧ್ಯತೆಯಿದೆ.

ಇನ್ನು ಅದೇ ದಿನ ಸಂಜೆ 4 ಗಂಟೆಗೆ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಸೇರಿದಂತೆ ಪಕ್ಷದ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.ಲೋಕಸಭೆ ಚುನಾವಣೆ ಹಿನ್ನೆಲೆ ಸಂಭಾವ್ಯ ಅಭ್ಯರ್ಥಿಗಳನ್ನು ಸೂಚಿಸಲು ಕೆಪಿಸಿಸಿಯು 2023ರ ಸೆಪ್ಟೆಂಬರ್‌ನಲ್ಲಿ ವಿವಿಧ ಸಚಿವರನ್ನು ಲೋಕಸಭೆ ವೀಕ್ಷಕರನ್ನಾಗಿ ನೇಮಿಸಿತ್ತು. 

ಇದೀಗ ಎಐಸಿಸಿಯು ಸಚಿವರನ್ನು ವಿವಿಧ ಲೋಕಸಭೆ ಕ್ಷೇತ್ರಗಳ ಸಮನ್ವಯಕಾರರನ್ನಾಗಿ ನೇಮಿಸಿದೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಲಿದೆ. ಪ್ರತಿ ಕ್ಷೇತ್ರದಲ್ಲೂ ಬಹುತೇಕ ಒಮ್ಮತದ ಅಭ್ಯರ್ಥಿಯ ಆಯ್ಕೆಯಾಗಬೇಕು. ಯಾರಿಗೇ ಪಕ್ಷ ಅವಕಾಶ ನೀಡಿದರೂ ಪಕ್ಷದ ಅಭ್ಯರ್ಥಿಯ ಪರ ಕೆಲಸ ಮಾಡಿ ಗೆಲ್ಲಿಸಬೇಕು ಎಂಬಿತ್ಯಾದಿ ಸೂಚನೆ ನೀಡುವ ಸಾಧ್ಯತೆಯಿದೆ.

ನಿಗಮ-ಮಂಡಳಿಗೆ ಕಾರ್ಯಕರ್ತರ ನೇಮಕ ಬಗ್ಗೆಯೂ ಚರ್ಚೆ?

ನಿಗಮ-ಮಂಡಳಿ ಅಧ್ಯಕ್ಷರ ನೇಮಕದ ವೇಳೆ ಕಾರ್ಯಕರ್ತರಿಗೆ ಅವಕಾಶ ನೀಡುವ ಬಗ್ಗೆಯೂ ರಾಜ್ಯ ನಾಯಕರೊಂದಿಗೆ ಸುರ್ಜೇವಾಲಾ ಚರ್ಚಿಸಲಿದ್ದಾರೆ. ಶಾಸಕರ ಜತೆಗೆ ಕಾರ್ಯಕರ್ತರಿಗೂ ಅವಕಾಶ ನೀಡುವಂತೆ ಹೈಕಮಾಂಡ್‌ ಸೂಚಿಸಿರುವ ಹಿನ್ನೆಲೆಯಲ್ಲಿ ಆದಷ್ಟು ಬೇಗ ಕಾರ್ಯಕರ್ತರನ್ನು ಸೂಚಿಸುವ ಕುರಿತು ಮಾರ್ಗದರ್ಶನ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ