;Resize=(412,232))
ಕೋಲ್ಕತಾ: ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ, ಯುವನಿಧಿ ಮತ್ತು ಶಕ್ತಿ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ಬಿಜೆಪಿ, ಮುಂಬರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಇದೇ ರೀತಿಯ ಯೋಜನೆಗಳನ್ನು ಜಾರಿ ಮಾಡುವ ಭರವಸೆ ನೀಡಿದೆ. ಇದರ ಜೊತೆಗೆ ಅಧಿಕಾರಕ್ಕೆ ಬಂದರೆ 6 ತಿಂಗಳಲ್ಲಿ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಅನುಷ್ಠಾನದ ಭರವಸೆಯನ್ನೂ ಪಕ್ಷ ನೀಡಿದೆ. ಏ.23 ಮತ್ತು ಏ.29ರಂದು 2 ಹಂತದಲ್ಲಿ ನಡೆಯುವ ಚುನಾವಣೆಗೆ ಬಂಗಾಳ ಬಿಜೆಪಿ ಘಟಕ ಶುಕ್ರವಾರ ಪ್ರಣಾಳಿಕೆ ಬಿಡುಗಡೆ ಮಾಡಿದ್ದು ಅದರಲ್ಲಿ ಅಂಶಗಳಿವೆ.
‘ಸಂಕಲ್ಪ ಪತ್ರ’ ಎಂದು ಕರೆಯಲಾದ ಪಕ್ಷದ ಪ್ರಣಾಳಿಕೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಇಲ್ಲಿ ಬಿಡುಗಡೆ ಮಾಡಿದರು. ಈ ಪ್ರಣಾಳಿಕೆಯನ್ನು ಅವರು ಸೋನಾರ್ ಬಾಂಗ್ಲಾ (ಸುವರ್ಣ ಬಾಂಗ್ಲಾ) ಕನಸಿನ ಕಡೆಗಿನ ದಾರಿದೀಪ ಎಂದು ಕರೆದಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ ಮಾದರಿಯಲ್ಲಿ ಮಹಿಳೆಯರಿಗೆ ಮಾಸಿಕ 3000 ರು. ನೆರವು, ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ, ಸರ್ಕಾರಿ ನೌಕರಿಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲು, ನಿರುದ್ಯೋಗಿ ಯುವಕರಿಗೆ ಮಾಸಿಕ 3000 ರು. ನೆರವು ಸೇರಿದಂತೆ ಹಲವು ಜನಪ್ರಿಯ ಅಂಶಗಳನ್ನು ಬಿಜೆಪಿ ಪ್ರಣಾಳಿಕೆ ಒಳಗೊಂಡಿದೆ.
ಜೊತೆಗೆ, ಜಾನುವಾರುಗಳ ಕಳ್ಳಸಾಗಣೆ ತಡೆ, ಒತ್ತುವರಿದಾರರು, ಒಳನುಸುಳುಕೋರರಿಗೆ ನೀಡಿದ್ದ ಸೌಲಭ್ಯ ಕಟ್ ಮತ್ತು ಅವರಿಂದ ಸರ್ಕಾರಿ ಜಮೀನು ವಾಪಸ್ ಪಡೆಯಲು ಕ್ರಮ, ದುರ್ಗಾ ಸುರಕ್ಷಾ ಹೆಸರಲ್ಲಿ ವಿಶೇಷ ಮಹಿಳಾ ಪೊಲೀಸ್ ಘಟಕ, 1 ಕೋಟಿ ಜನರಿಗೆ ಉದ್ಯೋಗ/ ಸ್ವಯಂ ಉದ್ಯೋಗ ಸೃಷ್ಟಿಯ ಅವಕಾಶ, 7ನೇ ವೇತನ ಆಯೋಗ ಜಾರಿ, ಟಿಎಂಸಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಶ್ವೇತಪತ್ರ ಹೊರಡಿಸುವ ಅಂಶಗಳನ್ನೂ ಪ್ರಣಾಳಿಕೆ ಒಳಗೊಂಡಿದೆ.
ಈಗಾಗಲೇ ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳಲ್ಲಿ ಏಕರೂಪದ ನಾಗರಿಕ ಸಂಹಿತೆ (ಯುಸಿಸಿ) ಜಾರಿ ಮಾಡಲಾಗಿದೆ. ಪಶ್ಟಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಆರೇ ತಿಂಗಳಲ್ಲಿ ಏಕರೂಪದ ನಾಗರಿಕ ಸಂಹಿತೆ ಜಾರಿ ಮಾಡಲಾಗುವುದು. ರಾಜ್ಯದ ಎಲ್ಲಾ ನಾಗರಿಕರಿಗೆ ಏಕರೀತಿಯ ಕಾನೂನು ಜಾರಿ ಮಾಡಲಾಗುವುದು ಎಂದು ಶಾ ತಿಳಿಸಿದರು. ಜೊತೆಗೆ ಯುಸಿಸಿಗೆ ಅಲ್ಪಸಂಖ್ಯಾತರಿಂದ ವ್ಯಕ್ತವಾಗುತ್ತಿರುವ ಟೀಕೆಗಳ ಹಿನ್ನೆಲೆಯಲ್ಲಿ, ಪ್ರತಿಯೊಬ್ಬ ನಾಗರಿಕನಿಗೂ ತಮ್ಮ ಧರ್ಮವನ್ನು ಪಾಲಿಸುವ ಸ್ವಾತಂತ್ರ್ಯ ಕಲ್ಪಿಸುವ ಕಾನೂನನ್ನು ಬಿಜೆಪಿ ಜಾರಿ ತರಲಿದೆ ಎಂದರು.
ಇತರೆ ಪ್ರಮುಖ ಘೋಷಣೆಗಳು
- ನಿರುದ್ಯೋಗಿ ಯುವಜನರಿಗೆ ಮಾಸಿಕ 3 ಸಾವಿರ ರು, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರಿಗೆ ಹೆಚ್ಚುವರಿ 15 ಸಾವಿರ ರು. ನೆರವು
- ಶಾಲಾ ನೇಮಕ ಹಗರಣ, ಇತರೆ ಭ್ರಷ್ಟಾಚಾರ ಪ್ರಕರಣಗಳಿಂದಾಗಿ ಕೆಲಸ ಕಳೆದುಕೊಂಡವರಿಗೆ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು 5 ವರ್ಷ ವಯೋಮಿತಿ ಸಡಿಲಿಕೆ
- ಸರ್ಕಾರಿ ನೇಮಕಾತಿಯಲ್ಲಿ ಪಾರದರ್ಶಕ ಹಾಗೂ ಮೆರಿಟ್ ಆಧಾರಿತ ಕ್ರಮಗಳ ಜಾರಿ, ಅರ್ಹ ಅಭ್ಯರ್ಥಿಗಳಿಗಷ್ಟೇ ಸರ್ಕಾರಿ ನೌಕರಿ ಸಿಗುವಂತೆ ನೋಡಿಕೊಳ್ಳುವುದು
- ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ವಾರ್ಷಿಕ 9 ಸಾವಿರ ರು. ಸಹಾಯಧನ. ವಂದೇ ಮಾತರಂ ಮ್ಯೂಸಿಯಂ ಸ್ಥಾಪನೆ
- ಎಐಐಎಂಎಸ್, ಐಐಟಿ, ಐಐಎಂ ಹಾಗೂ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಡಿಸೈನಿಂಗ್ ಅನ್ನು ಉತ್ತರ ಬಂಗಾಳದ ಜಿಲ್ಲೆಗಳಲ್ಲಿ ಸ್ಥಾಪನೆ
- ಸಂದೇಶ್‌ಖಾಲಿಯಂಥ ಘಟನೆ ಸೇರಿ ಮಹಿಳೆಯರ ಮೇಲಿನ ದೌರ್ಜನ್ಯ, ರಾಜಕೀಯ ಹಿಂಸೆ ತನಿಖೆಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಮಿತಿ ರಚನೆ
- ಅತ್ಯಾಧುನಿಕ ಕ್ಯಾನ್ಸರ್ ಆಸ್ಪತ್ರೆ, ರಾಜ್ಯಾದ್ಯಂತ ಹೊಸ ಟೌನ್‌ಶಿಪ್ ಆರಂಭ
- ಡಾರ್ಜಲಿಂಗ್ ಅನ್ನು ಪಾರಂಪರಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿ
- ರವೀಂದ್ರ ನಾಥ ಠಾಗೋರ್ ಹೆಸರಿನಲ್ಲಿ ಸಾಂಸ್ಕೃತಿಕ ಕೇಂದ್ರ ಸ್ಥಾಪನೆ
ಇತರೆ ಭರವಸೆ
1. ಅಧಿಕಾರಕ್ಕೆ ಬಂದ 6 ತಿಂಗಳಿನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ
2. ಒಳನುಸುಳುಕೋರರಿಗೆ ಸೌಲಭ್ಯ ಕಟ್, ಜಾನುವಾರು ಕಳ್ಳಸಾಗಣೆಗೆ ತಡೆ
3. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರಿಗೆ ಹೆಚ್ಚುವರಿ ₹15 ಸಾವಿರ ನೆರವು