ಕನ್ನಡಪ್ರಭ ವಾರ್ತೆ ಮಂಡ್ಯ
ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿಯಲ್ಲಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರದಿಂದಲೇ ಲೋಕಸಭಾ ಚುನಾವಣಾ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ನಿರ್ಧರಿಸಿರುವ ಕುಮಾರಸ್ವಾಮಿ ಅವರು ಕಾಂಗ್ರೆಸ್‌ನ ತಂತ್ರಗಳಿಗೆ ಪ್ರತಿತಂತ್ರ ಹೆಣೆಯಲಾರಂಭಿಸಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಮುನಿಸು ಪ್ರದರ್ಶಿಸುತ್ತಾ ಪಕ್ಷದ ಎಲ್ಲ ಕಾರ್ಯ ಚಟುವಟಿಕೆಗಳಿಂದ ಮಾಜಿ ಸಚಿವ ಕೆ.ಸಿ. ನಾರಾಯಣಗೌಡ ಅವರು ದೂರವೇ ಉಳಿದಿದ್ದರು. ಹಾಲಿ ಸಂಸದೆ ಸುಮಲತಾ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು, ಜೆಡಿಎಸ್‌ಗೆ ಮಂಡ್ಯ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದು ಎಂಬ ಬಗ್ಗೆ ಪ್ರಬಲವಾದ ದನಿ ಎತ್ತಿದ್ದರು. ಸುಮಲತಾ ಅವರಿಗೆ ಟಿಕೆಟ್ ನೀಡುವಂತೆ ಹಾಲಿ ಸಂಸದರ ಪರ ಬ್ಯಾಟಿಂಗ್ ನಡೆಸಿದ್ದರು. ಮೈತ್ರಿಯಿಂದ ಬೇಸರಗೊಂಡಿದ್ದ ನಾರಾಯಣಗೌಡರುಉ ನೆಪಮಾತ್ರಕ್ಕೆ ಅಲ್ಲೊಂದು ಇಲ್ಲೊಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಬಹುತೇಕ ನಾರಾಯಣಗೌಡರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆಂಬ ಕೂಗು ರಾಜಕೀಯ ವಲಯದಲ್ಲಿ ದಟ್ಟವಾಗಿ ಕೇಳಿಬಂದಿತ್ತು.ಬಿಜೆಪಿಯೊಳಗೆ ಅತೃಪ್ತರಾಗಿದ್ದ ಕೆ.ಸಿ.ನಾರಾಯಣಗೌಡ ಮತ್ತವರ ಬೆಂಬಲಿಗರನ್ನು ಸೆಳೆಯುವುದಕ್ಕೆ ಕಾಂಗ್ರೆಸ್ ವ್ಯೂಹ ರಚನೆ ಮಾಡಿತ್ತು. ಶೀಘ್ರದಲ್ಲೇ ನಾರಾಯಣಗೌಡರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಕೂಡ ಹೇಳಿದ್ದರು. ಅಷ್ಟರಲ್ಲಿಯೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ನಾರಾಯಣಗೌಡರ ಮನೆಗೆ ತೆರಳಿ ನಡೆಸಿದ ಸಂಧಾನ ಮಾತುಕತೆ ಯಶಸ್ವಿಯಾಗಿದೆ. ಇದೀಗ ಗೌಡರು ಪಕ್ಷ ತೊರೆಯುವ ಆಲೋಚನೆಯಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಕುಮಾರಸ್ವಾಮಿ ಮಂಡ್ಯ ಅಖಾಡ ಪ್ರವೇಶಿಸುವ ಮುನ್ನವೇ ಚುನಾವಣೆ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ.
ಒಟ್ಟಾರೆ ಕೆ.ಸಿ.ನಾರಾಯಣಗೌಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆಂಬ ವದಂತಿಗೆ ಸಧ್ಯ ತೆರೆ ಬಿದ್ದಿದೆ. ಇಷ್ಟಕ್ಕೇ ಕಾಂಗ್ರೆಸ್ ತನ್ನ ಪ್ರಯತ್ನ ಬಿಟ್ಟಿಲ್ಲ. ರಾಜಕೀಯ ಚಾಣಾಕ್ಷರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಜೆಡಿಎಸ್‌ನಿಂದ ಬೇರ್ಪಟ್ಟು ಬಿಜೆಪಿ ಸೇರ್ಪಡೆಗೊಂಡಿರುವ ಎಲ್ಲ ಮುಖಂಡರಿಗೂ ಗಾಳ ಹಾಕುವ ಕಾರ್ಯಾಚರಣೆ ಕೈಗೊಂಡಿದ್ದಾರೆ. ಸದ್ದಿಲ್ಲದೇ ಒಂದೊಂದೇ ದಾಳವನ್ನು ಉರುಳಿಸುತ್ತಿದ್ದಾರೆ. ಮುಂದೆ ಏನಾಗಬಹುದು ಎಂಬುದನ್ನು ಕಾದುನೋಡಬೇಕಿದೆ.