ಬೀದರ್‌ನಲ್ಲಿ ಒಳ್ಳೆ ಅಭ್ಯರ್ಥಿಗೆ ಟಿಕೆಟ್‌ ನೀಡಿ: ವಿಜಯೇಂದ್ರ ಕಾಲಿಗೆ ಬಿದ್ದು ಚವ್ಹಾಣ್‌ ಮನವಿ

KannadaprabhaNewsNetwork |  
Published : Jan 30, 2024, 02:04 AM ISTUpdated : Jan 30, 2024, 02:30 PM IST
Vijayendra

ಸಾರಾಂಶ

ಬೀದರ್‌ನಲ್ಲಿ ಒಳ್ಳೆ ಅಭ್ಯರ್ಥಿಗೆ ಟಿಕೆಟ್‌ ನೀಡಿ: ವಿಜಯೇಂದ್ರ ಕಾಲಿಗೆ ಬಿದ್ದು ಚವ್ಹಾಣ್‌ ಮನವಿ

ಕನ್ನಡಪ್ರಭ ವಾರ್ತೆ ಬೀದರ್‌

ನಗರದ ಗಣೇಶ ಮೈದಾನದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಶಾಸಕ ಪ್ರಭು ಚವ್ಹಾಣ್‌ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸಾಷ್ಟಾಂಗ ನಮಸ್ಕಾರ ಹಾಕಿ, ಈ ಬಾರಿ ಉತ್ತಮ ವ್ಯಕ್ತಿಗೆ ಲೋಕಸಭೆ ಟಿಕೆಟ್‌ ನೀಡುವಂತೆ ಮನವಿ ಮಾಡಿದರು. 

ಈ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಹಾಲಿ ಸಂಸದ ಭಗವಂತ ಖೂಬಾ ಅವರಿಗೆ ಮತ್ತೆ ಟಿಕೆಟ್‌ ನೀಡಬೇಡಿ ಎಂದು ಬಹಿರಂಗ ವೇದಿಕೆಯಲ್ಲೇ ಪರೋಕ್ಷವಾಗಿ ಮನವಿ ಮಾಡಿದರು.

ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಬೇಕಿದ್ದರೆ ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರ ಗೆಲ್ಲಿಸಿಕೊಡಬೇಕು. ಅದಕ್ಕಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೀದರ್‌ನಿಂದ ಉತ್ತಮ ವ್ಯಕ್ತಿಗೆ ಟಿಕೆಟ್‌ ನೀಡಬೇಕು. 

ನೀವು ಉತ್ತಮ ವ್ಯಕ್ತಿಯನ್ನು ನೀಡಿದ್ದೇ ಆದಲ್ಲಿ ಭಾರೀ ಮತಗಳಿಂದ ಗೆಲ್ಲಲಿದ್ದೇವೆ, ಬೀದರ್‌ ಕೂಡ ಅಭಿವೃದ್ಧಿ ಆಗುತ್ತದೆ. ಇದಕ್ಕಾಗಿ ನಿಮಗೆ ನಾನು ಕೈಮುಗಿಯುತ್ತೇನೆ,ಕಾಲಿಗೆ ಬಿದ್ದು ನಮಸ್ಕರಿಸುತ್ತೇನೆ ಎಂದು ಹೇಳಿ ವೇದಿಕೆ ಮೇಲೆಯೇ ವಿಜಯೇಂದ್ರ ಅವರಿಗೆ ಸಾಷ್ಟಾಂಗ ನಮಸ್ಕಾರ ಹಾಕಿದರು. 

ಕ್ಷೇತ್ರದ ಹಾಲಿ ಬಿಜೆಪಿ ಸಂಸದ ಭಗವಂತ ಖೂಬಾ ಅ‍ವರ ಉಪಸ್ಥಿತಿಯಲ್ಲೇ ಈ ಚವ್ಹಾಣ್‌ ಅವರು ಇಂಥದ್ದೊಂದು ಮನವಿ ಮಾಡಿದರು.

ಕಾರ್ಯಕರ್ತರಿಂದಾಗಿ ನಾವು ಬೆಳೆದಿದ್ದೇವೆ ಎಂಬುದನ್ನು ಮರೆಯಬಾರದು: ವಿಜಯೇಂದ್ರ

ಮಾಜಿ ಸಂಸದ ದಿ.ರಾಮಚಂದ್ರ ವೀರಪ್ಪನಂಥವರು ಐದು ಬಾರಿ ಸಂಸದರಾಗಿ ಬೀದರ್‌ನಲ್ಲಿ ಪಕ್ಷಕ್ಕೆ ಭದ್ರ ಬುನಾದಿ ಹಾಕಿದ್ದಾರೆ ಎಂಬುದನ್ನು ಯಾರೂ ಮರೆಯಬಾರದು. 

ಆದರೆ ಇಲ್ಲಿನ ಕೆಲ ಮುಖಂಡರಿಗೆ ತಾವು ಗೆದ್ದ ಮೇಲೆಯೇ ಬಿಜೆಪಿ ಹುಟ್ಟಿದೆ, ತಮ್ಮಿಂದಲೇ ಬಿಜೆಪಿ ಎಂದು ಅನಿಸಿರಬಹುದು. ಪಕ್ಷದ ಕಾರ್ಯಕರ್ತರು ನಮ್ಮನ್ನೆಲ್ಲ ಬೆಳೆಸಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದ ಗಣೇಶ ಮೈದಾನದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಸೋಮವಾರ ಮಾತನಾಡಿ, ವೇದಿಕೆ ಮೇಲೆ ಕುಳಿತಿರುವ ಮುಖಂಡರು ಕಾರ್ಯಕರ್ತರ ಬೆಲೆ ಏನೆಂಬುದನ್ನು ಮರೆತಿದ್ದಾರೆ. 

ಮುಖಂಡರೆಲ್ಲ ಕಾರ್ಯಕರ್ತರಿಂದಲೇ ಬೆಳೆದಿದ್ದೇವೆ. ನಮ್ಮನ್ನೆಲ್ಲ ಕಾರ್ಯಕರ್ತರು ಗೌರವ ಕೊಟ್ಟು ವೇದಿಕೆ ಮೇಲೆ ಕೂರಿಸಿದ್ದಾರೆ ಎಂಬುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.

ಪಕ್ಷದ ಮುಖಂಡರಾದ ಪ್ರಭುಚವ್ಹಾಣ್‌ ಮತ್ತು ಭಗವಂತ ಖೂಬಾ ಅವರು ತಮ್ಮ ಭಾಷಣದಲ್ಲಿ ಪರಸ್ಪರ ವಾಗ್ದಾಳಿ ನಡೆಸಿದ ಬಳಿಕ ಅವರು ಕಿವಿಮಾತು ಹೇಳಿದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ