ಕನ್ನಡಪ್ರಭ ವಾರ್ತೆ ಕೋಲಾರ
ಬರ ಮತ್ತು ನೆರೆ ಸಂದರ್ಭದಲ್ಲಿ ಹಿಂದಿನ ಬಿಜೆಪಿ ಸರ್ಕಾರ ರೈತರಿಗೆ ಮೂರು, ನಾಲ್ಕು ಪಟ್ಟು ಅಧಿಕ ಪರಿಹಾರ ನೀಡಿತ್ತು. ಅದೇ ಮಾನದಂಡದಲ್ಲಿ ಸಿದ್ದರಾಮಯ್ಯ ಸರ್ಕಾರ ಪರಿಹಾರ ನೀಡಲಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.ನಗರದಲ್ಲಿ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೊದಲು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬರಗಾಲ ಬಂದು ಏಳು ತಿಂಗಳಾದರೂ ರೈತರಿಗೆ ಪರಿಹಾರ ನೀಡಿಲ್ಲ, ಬೆಳಗಾವಿ ಅಧಿವೇಶನ ಕಳೆದು ತಿಂಗಳಾದರೂ ಪರಿಹಾರ ಕೊಟ್ಟಿಲ್ಲ. ರೈತರು ಚಾತಕ ಪಕ್ಷಿಗಳಂತೆ ಪರಿಹಾರಕ್ಕೆ ಕಾಯುತ್ತಿದ್ದಾರೆ ಎಂದರು.
ಮುಸ್ಲಿಮರಿಗೆ ಸಾವಿರ ಕೋಟಿ ಅನುದಾನರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಮೇವಿನ ಸಮಸ್ಯೆ ಇದೆ. ಆದರೂ ಒಂದೇ ಒಂದು ಗೋಶಾಲೆ ತೆರೆದಿಲ್ಲ. ಅಲ್ಪಸಂಖ್ಯಾತ ಇಲಾಖೆ ಸಚಿವರು ಮನವಿ ಕೊಟ್ಟ ಮೂರು ದಿನಗಳಲ್ಲಿ ಮುಸ್ಲಿಮರಿಗೆ ೧ ಸಾವಿರ ಕೋಟಿ ರು.ಗಳ ಅನುದಾನವನ್ನು ಕಾಲನಿ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರವಾಹ ಬಂದಾಗ ಎನ್‌ಡಿಆರ್‌ಎಫ್ ಮಾನದಂಡಕ್ಕಿಂತ ದುಪ್ಪಟ್ಟು ಪರಿಹಾರ ನೀಡಲಾಗಿತ್ತು, ಮೂರು ಸಾವಿರ ಕೋಟಿ ರು.ಗಳಿಗೂ ಅಧಿಕ ಪರಿಹಾರ ಒಂದೇ ತಿಂಗಳಲ್ಲಿ ರೈತರ ಖಾತೆಗಳಿಗೆ ಬಿಡುಗಡೆ ಮಾಡಿದ್ದೇವು. ಕೇಂದ್ರ ಸರ್ಕಾರ ಆಗಲೂ ತಡವಾಗಿ ನಮ್ಮ ಪಾಲಿನ ಹಣ ನೀಡಿತ್ತು. ಕೇಂದ್ರದಲ್ಲಿ ಯಾವುದೇ ಪಕ್ಷವಿದ್ದರೂ ಸಹಜವಾಗಿಯೇ ಹಣ ಬಿಡುಗಡೆ ತಡವಾಗುತ್ತದೆ ಎಂದರು.ನಿರಂತರ ವಿದ್ಯುತ್ ಕಡಿತ
ಏಳು ತಾಸು ಮೂರು ಫೇಸ್ ಕರೆಂಟ್ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಪ್ರಕಟಿಸಿದ್ದರು, ಆದರೆ ಮೂರು ತಾಸು ನೀಡುತ್ತಿಲ್ಲ, ನಿರಂತರವಾಗಿ ವಿದ್ಯುತ್ ಕಡಿತ ಮಾಡುತ್ತಿದ್ದು, ಅದನ್ನು ರಿಪೇರಿ ಕೆಲಸ ಎಂದು ತೇಪೆ ಹಚ್ಚಲಾಗುತ್ತಿದೆ, ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ಕೊಡದಿದ್ದರೂ ಕಾಂಗ್ರೆಸ್ ಕಾರ್ಯಕರ್ತರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಲಾಗುತ್ತಿದೆ, ಕಾರ್ಯಕರ್ತರಿಗೆ ಬಿರಿಯಾನಿ ತಿನ್ನಿಸಲು ಇವರ ಬಳಿ ಹಣವಿದೆ, ರೈತರಿಗೆ ನೀಡಲು ಹಣ ಇಲ್ಲವೇ, ಹಾಗಿದ್ದರೆ ಕುರ್ಚಿ ಖಾಲಿ ಮಾಡಿ ಎಂದು ಒತ್ತಾಯಿಸಿದರು.ಲೋಕಸಭಾ ಚುನಾವಣೆ ಬಳಿಕ ಎಲ್ಲ ಗ್ಯಾರಂಟಿಗಳು ಗೋವಿಂದ ಆಗಲಿದೆ, ಮೂಗಿಗೆ ತುಪ್ಪ ಸವರಲು ತಿರುಗಿಬಿದ್ದ ಕಾಂಗ್ರೆಸ್ ಶಾಸಕರಿಗೆ ಅನುಕೂಲ ಮಾಡಲಾಗುತ್ತಿದೆ, ಕೆಲವು ಶಾಸಕರು ಬಿಟ್ಟು ಹೋಗುತ್ತಾರೆ ಎಂದು ತಿಳಿದುಬಂದಿರುವುದರಿಂದ ಕಾಂಗ್ರೆಸ್ ಹೈಕಮಾಂಡ್ ಈ ರೀತಿ ನಾಟವಾಡುತ್ತಿದೆ ಎಂದರು.
ಕಾಂಗ್ರೆಸ್ ಸರ್ಕಾರ ಎಟಿಎಂನಂತೆ ಲೂಟಿ ಮಾಡುತ್ತಿದೆ, ಅಧಿಕಾರಿಗಳು ಲಂಚ ತಿನ್ನುತ್ತಿದ್ದು, ನಮಗೆ ಲೋಕಸಭಾ ಚುನಾವಣೆಯಲ್ಲಿ ಅಧಿಕಾರ ಕೊಟ್ಟರೆ ಇಂತಹವರನ್ನು ಐದು ನಿಮಿಷದಲ್ಲಿ ಎತ್ತಂಗಡಿ ಮಾಡುತ್ತೇವೆ ಎಂದರು.ಕೋಟ್........
ಪ್ರತಿ ರೈತರಿಗೆ ಸರ್ಕಾರ ೨೫ ಸಾವಿರ ರು.ಗಳ ಪರಿಹಾರ ನೀಡಬೇಕು, ಪಾಪರ್ ಆಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ನಾವೇ ಹಣ ಕೊಡುತ್ತೇವೆ, ನಮ್ಮ ರೈತರಿಂದಲೇ ನೀವು ಭಿಕ್ಷೆ ಪಡೆಯಿರಿ, ಎಲ್ಲ ರೈತರೇ ಸರ್ಕಾರಕ್ಕೆ ೨ ಸಾವಿರ ರು.ಗಳನ್ನು ನೀಡುತ್ತಾರೆ. ಇಂತಹ ಸ್ಥಿತಿಗೆ ಸರ್ಕಾರಕ್ಕೆ ನಾಚಿಕೆಯಾಗಬೇಕು.--- ಆರ್.ಅಶೋಕ್, ಪ್ರತಿಪಕ್ಷ ನಾಯಕ