ಜ್ಞಾನೇಶ್‌ ಏಕಪಕ್ಷೀಯ ನಡೆ ವಿವಾದ - ಸಿಇಸಿಗೆ ಎನ್‌ಡಿಎ ಮೈತ್ರಿಪಕ್ಷಗಳಿಂದ ಈಗ ಒತ್ತಡ ತೀವ್ರ

Published : Sep 26, 2026, 05:20 AM IST
Gyanesh Kumar CEC

ಸಾರಾಂಶ

ಇಬ್ಬರು ಚುನಾವಣಾ ಆಯುಕ್ತರು ಎಸ್‌ಐಆರ್‌ ಪ್ರಕ್ರಿಯೆ ಬಗ್ಗೆ ಆಕ್ಷೇಪಿಸಿದ್ದ ವಿವಾದ ಭುಗಿಲೆದ್ದ ಬೆನ್ನಲ್ಲೇ ಎನ್‌ಡಿಎ ಅಂಗಪಕ್ಷಗಳಾದ ತೆಲುಗುದೇಶಂ, ಲೋಕಜನಶಕ್ತಿ ಪಕ್ಷ (ಆರ್‌ವಿ) ಹಾಗೂ ರಾಷ್ಟ್ರೀಯ ಲೋಕ ಮೋರ್ಚಾ (ಆರ್‌ಎಲ್‌ಎಂ), ಚುನಾವಣಾ ಆಯೋಗವು ಜನರ ಅನುಮಾನ ಬಗೆಹರಿಸಬೇಕು ಎಂದು ಆಗ್ರಹಿಸಿವೆ

ಪಟನಾ : ಇಬ್ಬರು ಚುನಾವಣಾ ಆಯುಕ್ತರು ಎಸ್‌ಐಆರ್‌ ಪ್ರಕ್ರಿಯೆ ಬಗ್ಗೆ ಆಕ್ಷೇಪಿಸಿದ್ದ ವಿವಾದ ಭುಗಿಲೆದ್ದ ಬೆನ್ನಲ್ಲೇ ಎನ್‌ಡಿಎ ಅಂಗಪಕ್ಷಗಳಾದ ತೆಲುಗುದೇಶಂ, ಲೋಕಜನಶಕ್ತಿ ಪಕ್ಷ (ಆರ್‌ವಿ) ಹಾಗೂ ರಾಷ್ಟ್ರೀಯ ಲೋಕ ಮೋರ್ಚಾ (ಆರ್‌ಎಲ್‌ಎಂ), ಚುನಾವಣಾ ಆಯೋಗವು ಜನರ ಅನುಮಾನ ಬಗೆಹರಿಸಬೇಕು ಎಂದು ಆಗ್ರಹಿಸಿವೆ. ಎನ್‌ಡಿಎ ಅಂಗಪಕ್ಷಗಳು ಆಯೋಗದ ಸ್ಪಷ್ಟನೆಗೆ ಆಗ್ರಹಿಸುತ್ತಿರುವುದು ವಿವಾದದ ಬಳಿಕ ಇದೇ ಮೊದಲು.

ಕೇಂದ್ರ ಸಚಿವ ಹಾಗೂ ಎಲ್‌ಜೆಪಿ (ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್ ಪ್ರತಿಕ್ರಿಯಿಸಿದ್ದು, ‘ಪ್ರಜಾಪ್ರಭುತ್ವದ ಮೇಲಿನ ಜನರ ನಂಬಿಕೆ ಉಳಿಯುವಂತಾಗಲು ಚುನಾವಣಾ ಆಯೋಗವು ತನ್ನ ಮೇಲಿನ ಆರೋಪಗಳಿಗೆ ಸೂಕ್ತ ಸ್ಪಷ್ಟನೆ ನೀಡಬೇಕು ಹಾಗೂ ತನ್ನ ನಿಲುವನ್ನು ಸಾರ್ವಜನಿಕವಾಗಿ ದೃಢಪಡಿಸಬೇಕು’ ಎಂದು ಒತ್ತಾಯಿಸಿದರು.

‘ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಆರೋಪ ಮಾಡುವುದು ಸಹಜ. ಆದರೆ ಚುನಾವಣಾ ಪ್ರಕ್ರಿಯೆಯ ಬಗ್ಗೆ ಜನರ ಮನಸ್ಸಿನಲ್ಲಿ ಅನುಮಾನ ಉದ್ಭವಿಸಿದರೆ ಅದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಆದ್ದರಿಂದ ಯಾವುದೇ ಸಂದೇಹಗಳಿಗೆ ಆಸ್ಪದವಿಲ್ಲದಂತೆ ಆಯೋಗವು ತಕ್ಷಣವೇ ಅನುಮಾನಗಳನ್ನು ಪರಿಹರಿಸಬೇಕು’ ಎಂದು ಆಗ್ರಹಿಸಿದರು.

ಟಿಡಿಪಿಯ ಲೋಕಸಭಾ ನಾಯಕ ಲಾವು ಶ್ರೀಕೃಷ್ಣ ದೇವರಾಯಲು ಮಾತನಾಡಿ, ‘ಆಂಧ್ರದಲ್ಲಿ ಎಸ್ಐಆರ್‌ ಪಾರದರ್ಶಕವಾಗಿದೆ. ಆದರೆ ಚುನಾವಣಾ ಆಯೋಗವು ನಮ್ಮ ಪ್ರಜಾಪ್ರಭುತ್ವದಲ್ಲಿ ನಿರ್ಣಾಯಕ ಹೊಣೆ ಹೊಂದಿರುವ ಸಾಂವಿಧಾನಿಕ ಸಂಸ್ಥೆ. ಆದ್ದರಿಂದ, ಯಾರಾದರೂ ಪ್ರಶ್ನೆ ಎತ್ತಿದಾಗ ಸೂಕ್ತ ಸ್ಪಷ್ಟೀಕರಣ ನೀಡುವುದು ಮತ್ತು ಪಾರದರ್ಶಕತೆ ಕಾಪಾಡುವುದು ಸಂಸ್ಥೆಯ ಬಗ್ಗೆ ಸಾರ್ವಜನಿಕ ವಿಶ್ವಾಸ ಬಲಪಡಿಸಲು ಸಹಾಯ ಮಾಡುತ್ತದೆ’ ಎಂದರು.

ರಾಷ್ಟ್ರೀಯ ಲೋಕ ಮೋರ್ಚಾ (ಆರ್‌ಎಲ್‌ಎಂ) ಮುಖ್ಯಸ್ಥ ಮತ್ತು ರಾಜ್ಯಸಭಾ ಸಂಸದ ಉಪೇಂದ್ರ ಕುಶ್ವಾಹ ಮಾತನಾಡಿ, ‘ವಿದ್ಯಮಾನ ಗಮನಿಸಿದರೆ ಚುನಾವಣಾ ಆಯೋಗದ ಕಾರ್ಯನಿರ್ವಹಣೆಯಲ್ಲಿ ಖಂಡಿತವಾಗಿಯೂ ಸಮಸ್ಯೆ ಇದೆ. ಏನೇ ಇರಲಿ, ಚುನಾವಣಾ ಆಯೋಗ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎತ್ತಲಾದ ಪ್ರಶ್ನೆ ಮತ್ತು ಕಳವಳಗಳ ಬಗ್ಗೆ ಸ್ಪಷ್ಟಪಡಿಸಬೇಕು’ ಎಂದರು.

 ಜ್ಞಾನೇಶ್‌ ಉತ್ತರ ಪ್ರದೇಶ ಭೇಟಿ ದಿಢೀರ್‌ ರದ್ದು

ನವದೆಹಲಿ: ಇಬ್ಬರು ಚುನಾವಣಾ ಆಯುಕ್ತರು ಎಸ್‌ಐಆರ್‌ ಪ್ರಕ್ರಿಯೆ ಬಗ್ಗೆ ಆಕ್ಷೇಪಿಸಿದ್ದ ವಿವಾದ ಭುಗಿಲೆದ್ದ ಬೆನ್ನಲ್ಲೇ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಉತ್ತರ ಪ್ರದೇಶ ಭೇಟಿ ರದ್ದಾಗಿದೆ. ಜ್ಞಾನೇಶ್‌ ಅವರು ಗುರುವಾರ ಮೇರಠ್‌ ಮತ್ತು ಸೆಪ್ಟೆಂಬರ್ 28ರಂದು ವಾರಣಾಸಿಗೆ ಭೇಟಿ ನೀಡಬೇಕಿತ್ತು. ಅಲ್ಲಿ ಕೆಲವು ಯುವಕರ ಜತೆ ಸಂವಾದ ಸೇರಿ ಸಭೆ-ಸಮಾರಂಭಗಳಲ್ಲಿ ಭಾಗವಹಿಸಬೇಕಿತ್ತು. ಆದರೆ ವಿವಾದದ ನಡುವೆ ಭೇಟಿ ರದ್ದಾಗಿದೆ. ಈ ಬಗ್ಗೆ ಆಯೋಗದ ಮೂಲಗಳು ಸ್ಪಷ್ಟನೆ ನೀಡಿ, ‘ಮುಂದೂಡಿಕೆ ಒಂದು ಮಾಮೂಲಿ ಪ್ರಕ್ರಿಯೆ. ವಿಶೇಷ ಕಾರಣವಿಲ್ಲ’ ಎಂದಿದೆ.

ಚು.ಆಯುಕ್ತ ಜ್ಞಾನೇಶ್‌ ಕುಮಾರ್‌ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ

ನವದೆಹಲಿ : ಎಸ್ಐಆರ್‌ ಸೇರಿ ಹಲವು ವಿಚಾರಗಳಲ್ಲಿ ಇನ್ನಿಬ್ಬರು ಚುನಾವಣಾ ಆಯುಕ್ತರ ಅಭಿಪ್ರಾಯ ಕಡೆಗಣಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರು ಕೈಗೊಂಡಿದ್ದಾರೆ ಎನ್ನಲಾದ ನಿರ್ಧಾರಗಳು, ರೂಪಿಸಿದ ನಿಯಮಾವಳಿಗಳು, ಸಾಫ್ಟ್‌ವೇರ್‌ನಲ್ಲಿ ತಂದ ಬದಲಾವಣೆಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ಈ ಮೂಲಕ ಚುನಾವಣಾ ಆಯೋಗದ ವಿರುದ್ಧ ಆರೋಪವು ಇದೀಗ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದಂತಾಗಿದೆ.

ಜ್ಞಾನೇಶ್‌ ಕುಮಾರ್‌ ಅವರ ಏಕಪಕ್ಷೀಯ ನಿರ್ಧಾರಗಳು ಸಹಮತದ ಅಭಿಪ್ರಾಯದ ಆಧಾರದಲ್ಲಿ ಆಯೋಗವು ನಿರ್ಧಾರ ಕೈಗೊಳ್ಳಬೇಕೆಂಬ ನಿಯಮವನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಅವರು ಈ ಅರ್ಜಿ ಸಲ್ಲಿಸಿದ್ದು, ‘ಜ್ಞಾನೇಶ್‌ ಅವರ ನಿರ್ಧಾರವು ಸಂವಿಧಾನ ವಿರೋಧಿ, ಸಿಇಸಿ ಅವರ ಅಧಿಕಾರಗಳನ್ನು ಮೀರಿದ್ದಾಗಿದೆ. ಆಯೋಗವು ಪೂರ್ಣಒಪ್ಪಿಗೆ ಇಲ್ಲದೆ ಅಥವಾ ಬಹುಮತದ ಆಧಾರದಲ್ಲಿ ತೆಗೆದುಕೊಂಡ ಯಾವುದೇ ನಿರ್ಧಾರಗಳು ಅಸಿಂಧುವಾಗುತ್ತವೆ’ ಎಂದಿದೆ.

ಕ್ರಿಮಿನಲ್‌ ವಿಚಾರಣೆಗೆ ಕೋರಿಕೆ:

ಅಂತೆಯೇ ಸಿಇಸಿ ಮತ್ತು ಇತರೆ ಅಧಿಕಾರಿಗಳ ವಿರುದ್ಧ ಕರ್ತವ್ಯ ಲೋಪದ ಆರೋಪದ ಮೇರೆಗೆ ಕ್ರಿಮಿನಲ್‌ ವಿಚಾರಣೆ ಆರಂಭಿಸುವಂತೆಯೂ ಒತ್ತಾಯಿಸಲಾಗಿದೆ.

ವಿವಾದ ಏನು?:

ಚುನಾವಣಾ ಆಯುಕ್ತ ಸುಖ್‌ಬೀರ್‌ ಸಿಂಗ್‌ ಸಂಧು ಮತ್ತು ವಿವೇಕ್‌ ಜೋಶಿ ಅವರು ಎಸ್ಐಆರ್‌ ಸೇರಿ ಕೆಲವು ವಿಚಾರಗಳಲ್ಲಿ ಸಿಇಸಿ ಜ್ಞಾನೇಶ್‌ ಕೈಗೊಂಡ ಹಲವು ನಿರ್ಧಾರಗಳ ವಿರುದ್ಧ ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದರು ಎಂಬ ವಿಚಾರ ‘ಇಂಡಿಯನ್‌ ಎಕ್ಸ್‌ಪ್ರೆಸ್’ನಲ್ಲಿ ಪ್ರಕಟವಾಗಿತ್ತು.

ಫಾರ್ಮ್‌ 6ರಲ್ಲಿನ (ಹೊಸ ಮತದಾರರ ಸೇರ್ಪಡೆ ಫಾರ್ಮ್‌) ಬದಲಾವಣೆ ಮತ್ತು ಮತದಾರರ ಪಟ್ಟಿ ಡೇಟಾಗಳ ಕೇಂದ್ರೀಕರಣಕ್ಕೆ ಸಂಬಂಧಿಸಿದ ಹಲವು ನಿರ್ಧಾರಗಳನ್ನು ಮುಖ್ಯ ಚುನಾವಣಾ ಆಯುಕ್ತರು ಏಕಪಕ್ಷೀಯವಾಗಿ ತೆಗೆದುಕೊಂಡಿದ್ದಾರೆ ಎಂದು ಪತ್ರಿಕಾ ವರದಿ ಹೇಳಿತ್ತು.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ಕಾಯ್ದೆ 2023ರ ಸೆಕ್ಷನ್‌ 18ರ ಪ್ರಕಾರ ಸಿಇಸಿ ಮತ್ತು ಇತರೆ ಚುನಾವಣಾ ಆಯುಕ್ತರ ನಡುವೆ ಯಾವುದೇ ನಿರ್ಧಾರದ ವಿಚಾರದಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾದಾಗ ಬಹುಮತದ ಆಧಾರದ ಮೇಲೆ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಇದರ ಆಧಾರದ ಮೇಲೆ ಜ್ಞಾನೇಶ್‌ ಕುಮಾರ್‌ ಅವರ ನಿರ್ಧಾರ ಪ್ರಶ್ನಿಸಿ ಅರ್ಜಿ ಸಲ್ಲಿಕೆಯಾಗಿದೆ.

ಜ್ಞಾನೇಶ್‌ ವಜಾಕ್ಕೆ ಆಗ್ರಹಿಸಿ ಕಾಂಗ್ರೆಸ್‌ ದೇಶಾದ್ಯಂತ ರ್‍ಯಾಲಿ

ನವದೆಹಲಿ: ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿದ್ದ ಆರೋಪ ಎದುರಿಸುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರನ್ನು ಆ ಸ್ಥಾನದಿಂದ ವಜಾ ಮಾಡಿ ಬಂಧಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್‌ ಶುಕ್ರವಾರ ದೇಶಾದ್ಯಂತ ಪ್ರತಿಭಟನೆ ನಡೆಸಿದೆ. ದೆಹಲಿ, ಅಸ್ಸಾಂ, ಪಶ್ಚಿಮ ಬಂಗಾಳ, ಒಡಿಶಾ, ಜಮ್ಮು-ಕಾಶ್ಮೀರ, ಪಂಜಾಬ್‌, ಅರುಣಾಚಲಪ್ರದೇಶ, ಬಿಹಾರ, ಮಣಿಪುರ ಸೇರಿ ಹಲವು ರಾಜ್ಯಗಳಲ್ಲಿ ರ್‍ಯಾಲಿ ನಡೆದಿವೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮೋದಿ, ಅಮಿತ್‌, ಯೋಗಿ, ಯತ್ನಾಳ್‌, ರವಿ, ಪ್ರತಾಪ್‌ ಹತ್ಯೆಗೆ ಉಗ್ರ ಸಂಚು!
ಹಲವು ಶಾಸಕರು ಬೆಂಗ್ಳೂರಿಗೆ ಬಂದು 2 ಮದ್ವೆ ಆಗಿದ್ದಾರೆ: ಡಿಕೆ ಶಿವಕುಮಾರ್‌