ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ವಕ್ಕಲಿಗರ ಕಲ್ಯಾಣ ಮಂಟಪದ ಬಳಿಯಿಂದ ಪ್ರಾರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆ ಅಂಬೇಡ್ಕರ್ ವೃತ್ತದ ವರೆಗೂ ಸಾಗಿ ಬಂದು ಪ್ರತಿಭಟನೆ ನಡೆಸಿದರು. ಅಂಬೇಡ್ಕರ್ ವೃತ್ತದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಪ್ರತಿಭಟನಾ ಕಾರರನ್ನುದ್ದೇಶಿಸಿ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ವಕ್ಫ್ ಮಂಡಳಿ ರೈತರ ಜಮೀನು, ಶಾಲೆಗಳ ಜಮೀನು,ದೇವಸ್ಥಾನಗಳ ಆಸ್ತಿಗಳನ್ನು ಕಬಳಿಸುತ್ತಿದೆ.ಮುಂದಿನ ಸಂಸತ್ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಕ್ಫ್ ಬೋರ್ಡ್ ಎಂಬ ರಾಕ್ಷಸನನ್ನ ಸಂಹಾರ ಮಾಡ್ತಾರೆ ಎಂದರು.
ವಕ್ಫ್ ಬೋರ್ಡ್‌ಗೆ ತಿಮಿಂಗಲ ಬೋರ್ಡ್ ಅಂತ ಹೆಸರಿಡಬೇಕು. ತಿಮಿಂಗಲದ ಕೆಲಸ ಎಲ್ಲವನ್ನೂ ನುಂಗಿ ಹಾಕೋದು. ಅದೇ ರೀತಿ ವಕ್ಫ್ ಬೋರ್ಡ್ ಸಹ ರೈತರ ಎಲ್ಲರ ಜಮೀನು ನುಂಗಿ ಹಾಕುತ್ತಿದೆ. ಹಾಗಾಗಿ ಅಧಿವೇಶನದ ಸಮಯದಲ್ಲಿ ಜನ ಬೀದಿಗಿಳಿದು ಹೋರಾಟ ಮಾಡಿ, ಸಂಸತ್ ಅಧಿವೇಶನದಲ್ಲಿ ವಕ್ಫ್ ಬೋರ್ಡ್ ರಾಕ್ಷಸನನ್ನ ಮೋದಿ ಸಂಹಾರ ಮಾಡ್ತಾರೆ ಎಂದು ನುಡಿದರು.ಸಂಸದ ಡಾ.ಕೆ ಸುಧಾಕರ್ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಲ್ಯಾಂಡ್ ಜಿಹಾದ್ ಘೋಷಣೆ ಮಾಡಿದೆ. ರೈತರ ಜಮೀನು ಉಳಿಸುವ ಸಲುವಾಗಿ ಬಿಜೆಪಿ ವತಿಯಿಂದ ಹೋರಾಟ ಮಾಡ್ತಿದ್ದೇವೆ. ಮರಳಿ ರೈತರಿಗೆ ವಾಪಾಸ್ ಕೊಡಿಸುವ ಕ್ರಮ ವಹಿಸುತ್ತಿದ್ದೇವೆ. ಬ್ರಿಟಿಷರು ಹೊಡೆದು ಆಳುತ್ತಿದ್ದರು ಅದನ್ನೇ ಕಾಂಗ್ರೆಸ್ ಸರ್ಕಾರ ಕಲಿತಿದೆ. ಜನರನ್ನ ಹೊಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಮಾಜಿ ಸಂಸದ ಮುನಿಸ್ವಾಮಿ,ಜಿ.ಪಂ.ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಖಾದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ನಗರಸಭೆ ಅಧ್ಯಕ್ಷ ಎ. ಗಜೇಂದ್ರ,ಬಿಜೆಪಿ ಮುಖಂಡರಾದ ಸೀಕಲ್ ರಾಮಚಂದ್ರಗೌಡ, ಕೃಷ್ಣಮೂರ್ತಿ, ಸುರೇಂದ್ರಗೌಡ, ಬಾಲು,ಅನು ಆನಂದ್, ಮಧುಚಂದ್ರ, ಜೆಡಿಎಸ್ ಮುಖಂಡ ಹರಿನಾಥರೆಡ್ಡಿ, ಮತ್ತಿತರರು ಇದ್ದರು.