‘ಬೆಳಗಾವಿ ಅಧಿವೇಶನದ ವೇಳೆ ಟಾರ್ಗೆಟ್‌ ವಿಪಕ್ಷ : ಸಮರ್ಥ ತಿರುಗೇಟು ನೀಡುವುದರ ಜತೆಗೆ ಪ್ರತ್ಯಸ್ತ್ರ ಪ್ರಯೋಗಿಸಲು ಸಿದ್ಧತೆ

KannadaprabhaNewsNetwork | Updated : Nov 19 2024, 04:28 AM IST

ಸಾರಾಂಶ

  ಮುಡಾ, ವಕ್ಫ್‌ ಆಸ್ತಿ ವಿವಾದ, ಬಿಪಿಎಲ್‌ ಕಾರ್ಡ್ ರದ್ದು, ವಾಲ್ಮೀಕಿ ಹಗರಣದಂತಹ ವಿಚಾರ ಮುಂದಿಟ್ಟು ಸರ್ಕಾರದ ವಿರುದ್ಧ ಮುಗಿಬೀಳಲು ಸಜ್ಜಾಗಿರುವ ಪ್ರತಿಪಕ್ಷಗಳಿಗೆ   ತಿರುಗೇಟು ನೀಡುವುದರ ಜತೆ  ಪ್ರತ್ಯಸ್ತ್ರ ಪ್ರಯೋಗಿಸಿ ಬಿಜೆಪಿ-ಜೆಡಿಎಸ್‌   ಇಕ್ಕಟ್ಟಿಗೆ ಸಿಲುಕಿಸಲು ಸರ್ಕಾರವೂ ಸಿದ್ಧತೆ  

 ಬೆಂಗಳೂರು : ‘ಬೆಳಗಾವಿ ಅಧಿವೇಶನದ ವೇಳೆ ಮುಡಾ, ವಕ್ಫ್‌ ಆಸ್ತಿ ವಿವಾದ, ಬಿಪಿಎಲ್‌ ಕಾರ್ಡ್ ರದ್ದು, ವಾಲ್ಮೀಕಿ ಹಗರಣದಂತಹ ವಿಚಾರ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳಲು ಸಜ್ಜಾಗಿರುವ ಪ್ರತಿಪಕ್ಷಗಳಿಗೆ ಸಮರ್ಥ ತಿರುಗೇಟು ನೀಡುವುದರ ಜತೆಗೆ ಪ್ರತ್ಯಸ್ತ್ರ ಪ್ರಯೋಗಿಸಿ ಬಿಜೆಪಿ-ಜೆಡಿಎಸ್‌ ಅನ್ನು ಇಕ್ಕಟ್ಟಿಗೆ ಸಿಲುಕಿಸಲು ಸರ್ಕಾರವೂ ಸಿದ್ಧತೆ ನಡೆಸಿದೆ.

ಪ್ರತಿಪಕ್ಷಗಳು ಸದನದಲ್ಲಿ ಪ್ರಸ್ತಾಪಿಸುವ ವಿಷಯಗಳ ಬಗ್ಗೆ ನಿರ್ದಿಷ್ಟ ಸಚಿವರು ಸಂಪೂರ್ಣ ತಯಾರಿ ಜತೆ ಬಂದು ಪ್ರತ್ಯುತ್ತರ ನೀಡಬೇಕು. ಈ ಸಚಿವರಿಗೆ ಯಾವ ಶಾಸಕರು ಬೆಂಬಲವಾಗಿ ಮಾತನಾಡಬೇಕು ಎಂಬ ಬಗ್ಗೆಯೂ ಹೊಣೆಗಾರಿಕೆ ನಿಗದಿ ಮಾಡಿದ್ದು, ಪ್ರತಿಪಕ್ಷಗಳ ಮೇಲೆ ಯೋಜಿತ ಪ್ರತಿದಾಳಿಗೆ ಸರ್ಕಾರ ಸರ್ವ ರೀತಿಯಲ್ಲೂ ಸಜ್ಜಾಗಿದೆ.

ಇದಕ್ಕಾಗಿ ಸೋಮವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತ ನಿವಾಸ ಕಾವೇರಿಯಲ್ಲಿ ಸಚಿವರೊಂದಿಗೆ ಮಹತ್ವದ ಚರ್ಚೆ ನಡೆಸಿದರು.

ವಕ್ಫ್‌ ಆಸ್ತಿ ಬಗ್ಗೆ ಬಿಜೆಪಿ ಅಪಪ್ರಚಾರ ನಡೆಸುತ್ತಿದೆ. ಹೀಗಾಗಿ ಬಿಜೆಪಿ ಅವಧಿಯಲ್ಲಿ ರೈತರ ಆಸ್ತಿ ವಕ್ಫ್‌ ಎಂದು ಬದಲಿಸಿರುವ ಅಂಕಿ-ಅಂಶಗಳ ಸಹಿತ ಸಚಿವರು ಉತ್ತರ ನೀಡಬೇಕು. ಇದೇ ರೀತಿ ಬಿಜೆಪಿಯವರು ಪ್ರಸ್ತಾಪಿಸಬಹುದಾದ ವಿಷಯಗಳ ಬಗ್ಗೆ ಸಮರ್ಥವಾಗಿ ತಿರುಗೇಟು ನೀಡಲು ಸೂಕ್ತ ಹೋಂ ವರ್ಕ್‌ ಜತೆ ಬರಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂದು ಸಭೆ ವೇಳೆ ಸೂಚಿಸಲಾಗಿದೆ ಎನ್ನಲಾಗಿದೆ.

ಕೋವಿಡ್‌ ಅಸ್ತ್ರ ಬಳಸಲು ನಿರ್ಧಾರ:

ಮೈಕಲ್‌ ಕುನ್ಹಾ ವರದಿಯಲ್ಲಿ ಬಿಜೆಪಿಯ ಕೋವಿಡ್‌ ಹಗರಣ ಬಹುತೇಕ ಸಾಬೀತಾಗಿದೆ. ಹೀಗಾಗಿ ಬಿಜೆಪಿಯ ಕೋವಿಡ್‌ ಹಗರಣವನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕು. ಆಕ್ರಮಣಕಾರಿಯಾಗಿ ಪ್ರಚಾರ ಮಾಡಿ ಬಿಜೆಪಿಯನ್ನು ನೈತಿಕವಾಗಿ ಕುಗ್ಗಿಸಬೇಕು. ಅಧಿವೇಶನದ ವೇಳೆಗೆ ಎಸ್‌ಐಟಿ ರಚನೆ ಮಾಡಿ ತನಿಖೆ ಕೈಗೆತ್ತಿಕೊಳ್ಳಬೇಕು. ತನ್ಮೂಲಕ ಬಿಜೆಪಿ ಮೇಲೆ ಒತ್ತಡ ಸೃಷ್ಟಿಸುವ ಜತೆಗೆ ರಾಜ್ಯಾದ್ಯಂತ ಕೋವಿಡ್‌ ಹಗರಣದ ಬಗ್ಗೆ ಪ್ರಚಾರ ನಡೆಸಬೇಕು ಎಂದು ಚರ್ಚೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

ರೇಷನ್‌ ಕಾರ್ಡ್‌ ಗೊಂದಲ ಬಗೆಹರಿಸಿ:

ಸಭೆಯಲ್ಲಿ ಪಡಿತರ ಚೀಟಿ ರದ್ದು ಕುರಿತ ಗೊಂದಲದ ಬಗ್ಗೆಯೂ ಚರ್ಚಿಸಿದ್ದು, ಕೂಡಲೇ ಗೊಂದಲ ನಿವಾರಣೆ ಮಾಡಬೇಕು. 11 ಲಕ್ಷ ಬಿಪಿಎಲ್‌ ಕಾರ್ಡ್‌ ರದ್ದಾಗಿದೆ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಇದಕ್ಕೆ ವಸ್ತುನಿಷ್ಠವಾಗಿ ಉತ್ತರ ನೀಡಿ ಅನರ್ಹರಿಗೆ ಮಾತ್ರ ಬಿಪಿಎಲ್‌ ರದ್ದುಪಡಿಸಿ ಎಪಿಎಲ್‌ಗೆ ವರ್ಗಾಯಿಸಲಾಗಿದೆ. ಯಾವುದೇ ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡ್‌ ರದ್ದಾಗಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸೂಚಿಸಿದರು.

ಎಸ್‌ಐಟಿ ರಚನೆ ಅಧಿಕಾರ ಗೃಹ ಸಚಿವ ಪರಂಗೆ

ಕೋವಿಡ್ ಅಕ್ರಮಗಳ ತನಿಖೆಗೆ ಎಸ್ಐಟಿ ರಚನೆಗೆ ಸಚಿವ ಸಂಪುಟ ಸಭೆಯಲ್ಲಿ ಈಗಾಗಲೇ ನಿರ್ಧರಿಸಿದ್ದು, ಎಸ್‌ಐಟಿ ಮುಖ್ಯಸ್ಥರನ್ನಾಗಿ ಯಾರನ್ನು ನೇಮಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಈ ವೇಳೆ ಎಸ್‌ಐಟಿ ಮುಖ್ಯಸ್ಥರ ನೇಮಕದ ಜವಾಬ್ದಾರಿಯನ್ನು ಗೃಹ ಸಚಿವ ಪರಮೇಶ್ವರ್‌ ಅವರಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಖಾಸಗಿ ವಿ.ವಿ.ಗಳ ತಿದ್ದುಪಡಿ ವಿಧೇಯಕ

ಅಧಿವೇಶನದ ವೇಳೆ ಖಾಸಗಿ ವಿಶ್ವವಿದ್ಯಾಲಯಗಳಿಗೆ ಸರ್ಕಾರದಿಂದ ತಜ್ಞರ ನೇಮಕ ಮಾಡುವ ಬಗ್ಗೆ ತಿದ್ದುಪಡಿ ವಿಧೇಯಕ ಮಂಡನೆ ಮಾಡಲು ಚರ್ಚಿಸಲಾಗಿದೆ. ಜತೆಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ, ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಸೇರಿದಂತೆ ಹಲವು ವಿಧೇಯಕಗಳ ಮಂಡಿಸಲು ಚರ್ಚಿಸಲಾಗಿದೆ.

Share this article