ಕಲಬುರಗಿಯಲ್ಲಿ ಖರ್ಗೆಗೆ ಬೃಹತ್‌ ಸನ್ಮಾನಕ್ಕೆ ಸಿದ್ಧತೆ

KannadaprabhaNewsNetwork |  
Published : Jun 23, 2024, 02:01 AM ISTUpdated : Jun 23, 2024, 04:35 AM IST
ಮಲ್ಲಿಕಾರ್ಜುನ ಖರ್ಗೆ | Kannada Prabha

ಸಾರಾಂಶ

 ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಲಬುರಗಿಯಲ್ಲಿ ಬೃಹತ್‌ ಸನ್ಮಾನ ಸಮಾರಂಭ ಆಯೋಜಿಸಲು ಅವರ ಅಭಿಮಾನಿ ಬಳಗ ನಿರ್ಧರಿಸಿದೆ.

 ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಸಂವಿಧಾನದ 371(ಜೆ) ಕಲಂ ತಿದ್ದುಪಡಿ ಮೂಲಕ ವಿಶೇಷ ಸ್ಥಾನಮಾನ ದೊರೆತ ದಶಕದ ಸಂಭ್ರಮ ಹಾಗೂ ಲೋಕಸಭಾ ಚುನಾವಣೆಯಲ್ಲಿ ಈ ಭಾಗದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಗೆಲುವು ದೊರೆತ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಲಬುರಗಿಯಲ್ಲಿ ಬೃಹತ್‌ ಸನ್ಮಾನ ಸಮಾರಂಭ ಆಯೋಜಿಸಲು ಅವರ ಅಭಿಮಾನಿ ಬಳಗ ನಿರ್ಧರಿಸಿದೆ.

ಮುಂಬರುವ ಸಂಸತ್‌ ಅಧಿವೇಶನ ಹಾಗೂ ರಾಜ್ಯ ವಿಧಾನಮಂಡಲದ ಅಧಿವೇಶನಗಳು ಮುಕ್ತಾಯಗೊಂಡ ಬಳಿಕ ಸನ್ಮಾನ ಸಮಾರಂಭವನ್ನು ಏರ್ಪಡಿಸಲು ಖರ್ಗೆ ಅವರ ಅಭಿಮಾನಿಗಳು ಮತ್ತು ಅವರ ಹಿತೈಷಿ ಶಾಸಕರು ಉದ್ದೇಶಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಚರ್ಚಿಸಿ ಸನ್ಮಾನ ಸಮಾರಂಭಕ್ಕೆ ದಿನಾಂಕ ನಿಗದಿಪಡಿಸಲು ನಿರ್ಧರಿಸಿದ್ದಾರೆ. ತನ್ಮೂಲಕ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹಾಗೂ ಆ ಭಾಗದಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಮೆರೆಯಲು ಕಾರಣಕರ್ತರಾದ ಖರ್ಗೆ ಅವರಿಗೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವಂತೆ ಕಾರ್ಯಕ್ರಮ ಆಯೋಜಿಸಿ ಅಭಿನಂದಿಸಲು ತೀರ್ಮಾನಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶವಾದ ಕಲ್ಯಾಣ ಕರ್ನಾಟಕದ (ಹಿಂದಿನ ಹೈದರಾಬಾದ್‌ ಕರ್ನಾಟಕ) ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಹಿಂದಿನ ಕಾಂಗ್ರೆಸ್‌ ನೇತೃತ್ವದ ಕೇಂದ್ರ ಯುಪಿಎ ಸರ್ಕಾರ 2012ರಲ್ಲಿ ಸಂವಿಧಾನದ 371(ಜೆ) ಕಲಂಗೆ ತಿದ್ದುಪಡಿ ತಂದು ವಿಶೇಷ ಸ್ಥಾನಮಾನ ಕಲ್ಪಿಸಿತ್ತು. ಆ ನಂತರ ಇದನ್ನು ಒಪ್ಪಿಗೆ ರಾಜ್ಯ ಸರ್ಕಾರ ಜಾರಿಗೊಳಿಸಿತ್ತು. ತಿದ್ದುಪಡಿಯನ್ವಯ ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿ ಪ್ರತೀ ವರ್ಷ ವಿಶೇಷ ಅನುದಾನ ನೀಡುತ್ತಿದೆ.

ಕಲ್ಯಾಣ ಕರ್ನಾಟಕ್ಕೆ ವಿಶೇಷ ಸ್ಥಾನಮಾನ ದೊರೆಯಲು ಅಂದು ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರೇ ಪ್ರಮುಖ ಕಾರಣಕರ್ತರಾಗಿದ್ದರು. ವಿಶೇಷ ಸ್ಥಾನಮಾನ ದೊರೆತು ಇದೀಗ 10 ವರ್ಷಗಳು ಪೂರ್ಣಗೊಂಡಿವೆ.

ಜೊತೆಗೆ ಇತ್ತೀಚೆಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ 9 ಸ್ಥಾನಗಳ ಪೈಕಿ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಾಬಲ್ಯವಿರುವ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಬೀದರ್‌ ಈ ಐದು ಕ್ಷೇತ್ರಗಳಲ್ಲಿ ಭರ್ಜರಿ ಜಯಗಳಿಸಿದೆ. ಇದರೊಂದಿಗೆ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆ ಭಾಗದ ಜನರು ಆನೆ ಬಲ ತಂದುಕೊಟ್ಟಿದ್ದರು. ಈ ಎಲ್ಲ ಹಿನ್ನೆಲೆಯಲ್ಲಿ ಖರ್ಗೆ ಅವರಿಗೆ ಬೃಹತ್ ಸನ್ಮಾನ ಆಯೋಜಿಸಲು ಅವರ ಆಪ್ತ ಬಳಗ ಮುಂದಾಗಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಪರಂ ಸಿಎಂ ಆಗಲಿ : 25ಕ್ಕೂ ಹೆಚ್ಚು ಮಠಾಧೀಶರ ಆಗ್ರಹ
ಎಸ್ಕಾಂಗಳಿಂದ ₹110 ಕೋಟಿ ಹೆಚ್ಚುವರಿ ವೆಚ್ಚ : ಸಿಎಜಿ ವರದಿ