ಬಜೆಟ್‌ ಮಂಡನೆಗೆ ಸಿದ್ದು ಭರ್ಜರಿ ಸಿದ್ಧತೆ - ಮೊದಲ ದಿನ 13 ಇಲಾಖೆಗಳ ಜತೆ 9 + ಗಂಟೆ ಕಾಲ ಸಭೆ

Published : Feb 07, 2025, 11:20 AM IST
Siddaramaiah and DK Shivakumar

ಸಾರಾಂಶ

ಮಾರ್ಚ್‌ನಲ್ಲಿ ದಾಖಲೆಯ 16ನೇ ಬಜೆಟ್‌ ಮಂಡಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗುರುವಾರದಿಂದ ಇಲಾಖಾವಾರು ಬಜೆಟ್‌ ಪೂರ್ವಭಾವಿ ಸಭೆ ಆರಂಭಿಸಿದ್ದಾರೆ.

 ಬೆಂಗಳೂರು :  ಮಾರ್ಚ್‌ನಲ್ಲಿ ದಾಖಲೆಯ 16ನೇ ಬಜೆಟ್‌ ಮಂಡಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗುರುವಾರದಿಂದ ಇಲಾಖಾವಾರು ಬಜೆಟ್‌ ಪೂರ್ವಭಾವಿ ಸಭೆ ಆರಂಭಿಸಿದ್ದಾರೆ. ಮೊದಲ ದಿನ ಒಂಬತ್ತು ಗಂಟೆಗೂ ಹೆಚ್ಚು ಕಾಲ 13 ಇಲಾಖೆಗಳಿಗೆ ಸಂಬಂಧಿಸಿದ ಹೊಸ ಯೋಜನೆಗಳ ಪ್ರಸ್ತಾವನೆ ಮತ್ತು ಅನುದಾನ ಬೇಡಿಕೆಗಳನ್ನು ಪರಿಶೀಲಿಸಿದರು.

ಸ್ನಾನಗೃಹದಲ್ಲಿ ಜಾರಿದ ಪರಿಣಾಮ ಕಂಡುಬಂದ ಮಂಡಿನೋವಿಗೆ ಚಿಕಿತ್ಸೆ ಪಡೆದ ಬಳಿಕ ವೈದ್ಯರ ಸಲಹೆಯಂತೆ ಅಧಿಕೃತ ನಿವಾಸ ಕಾವೇರಿಯಲ್ಲೇ ವಿಶ್ರಾಂತಿ ಪಡೆಯುತ್ತಿರುವ ಮುಖ್ಯಮಂತ್ರಿ ಅವರು, ತಮ್ಮ ನಿವಾಸದಲ್ಲೇ ಬಜೆಟ್‌ ಪೂರ್ವಭಾವ ಸಭೆ ಶುರು ಮಾಡಿದ್ದಾರೆ.

ಬೆಳಗ್ಗೆ 11.15ಕ್ಕೆ ಆರಂಭಗೊಂಡ ಸಭೆ ಸಂಜೆ 7.45ಕ್ಕೆ ಮುಕ್ತಾಯಗೊಂಡಿದೆ. ನಡುವೆ ಮಧ್ಯಾಹ್ನ ಅರ್ಧ ಮುಕ್ಕಾಲುಗಂಟೆ ಊಟಕ್ಕೆ ವಿರಾಮ ನೀಡಿದ್ದು ಬಿಟ್ಟರೆ ಉಳಿದ ಸಮಯದಲ್ಲಿ ನಿಗದಿಯಾಗಿದ್ದ ಎಲ್ಲಾ 12 ಇಲಾಖೆಗಳ ಸಭೆಯನ್ನು ಒಂದರ ನಂತರ ಒಂದರಂತೆ ನಡೆಸಿ ಮುಗಿಸಿದರು.

ನಿಗದಿಯಂತೆ ಮೊದಲು ಗೃಹ ಅಥವಾ ಒಳಾಡಳಿತ ಇಲಾಖೆ, ನಂತರ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ, ಸಣ್ಣ ಕೈಗಾರಿಕೆ, ಇಂಧನ, ಕಾರ್ಮಿಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ, ವಿಶೇಷ ಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಸಹಕಾರ, ರೇಷ್ಮೆ, ಪಶುಸಂಗೋಪನಾ ಇಲಾಖೆಗಳಿಗೆ ಸಂಬಂಧಿಸಿದ ಸಭೆಗಳನ್ನು ನಡೆಸಿದರು.

ಪ್ರತಿ ಇಲಾಖೆಗೆ ಸುಮಾರು 30 ನಿಮಿಷಗಳ ಸಮಯಾವಕಾಶ ನೀಡಲಾಗಿತ್ತು. ಡಾ.ಜಿ.ಪರಮೇಶ್ವರ್‌, ಎಂ.ಬಿ.ಪಾಟೀಲ್‌, ಸತೀಶ್‌ ಜಾರಕಿಹೊಳಿ, ಕೆ.ಜೆ.ಜಾರ್ಜ್‌, ಮಧು ಬಂಗಾರಪ್ಪ, ಕೆ.ಎಚ್‌.ಮುನಿಯಪ್ಪ, ಕೆ.ಎನ್‌.ರಾಜಣ್ಣ, ಕೆ.ವೆಂಕಟೇಶ್‌ ಸೇರಿ ಸಂಬಂಧಪಟ್ಟ ಇಲಾಖಾ ಸಚಿವರ ಸಮ್ಮುಖದಲ್ಲಿ ಉನ್ನತ ಅಧಿಕಾರಿಗಳು ತಮ್ಮ ಇಲಾಖೆಗೆ ಮುಂದಿನ ಬಜೆಟ್‌ನಲ್ಲಿ ಘೋಷಿಸಬಹುದೆಂದು ಸಿದ್ಧಪಡಿಸಿಕೊಂಡು ಬಂದಿದ್ದ ಹೊಸ ಯೋಜನೆಗಳು ಹಾಗೂ ಅವುಗಳಿಗೆ ಪೂರಕವಾದ ಅನುದಾನ, ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆಗಳ ಅನುಷ್ಠಾನ, ಹಾಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಬೇಕಿರುವ ಅನುದಾನ, ಬಾಕಿ ಬಿಲ್ಲುಗಳನ್ನು ನೀಡಲು ಅಗತ್ಯವಿರುವ ಹಣ ಹೀಗೆ ಅಗತ್ಯ ಪ್ರಸ್ತಾವನೆ, ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದೆ ಇಟ್ಟರು. ಇದನ್ನು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿಗಳು ಸಭೆಯಲ್ಲಿ ಹಾಜರಿದ್ದ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಪರಿಶೀಲಿಸಲು ಸೂಚನೆ ನೀಡಿದರು ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.

ಇಂದೂ ಸಭೆ: 2ನೇ ದಿನವಾದ ಶುಕ್ರವಾರ ಸಮಾಜ ಕಲ್ಯಾಣ, ಯೋಜನೆ, ಕಾರ್ಯಕ್ರಮ, ಸಂಯೋಜನೆ ಹಾಗೂ ಸಾಂಖ್ಯಿಕ, ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಣ, ಬೆಂಗಳೂರು ನಗರಾಭಿವೃದ್ಧಿ, ಜಲಸಂಪನ್ಮೂಲ, ಕಂದಾಯ, ಕೃಷಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್‌, ವಸತಿ ಇಲಾಖೆಗಳಿಗೆ ಸಂಬಂಧಿಸಿದ ಬಜೆಟ್‌ ಪೂರ್ವಸಭಾವಿ ಸಭೆಯನ್ನು ಸಿಎಂ ನಡೆಸಲಿದ್ದಾರೆ.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ