ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್
ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆ ಜಾಲದಲ್ಲಿ ಬಾರದ ಸುಮಾರು 15 ಲಕ್ಷ ಆಸ್ತಿಗಳನ್ನು ತೆರಿಗೆಗೆ ಒಳಪಡಿಸುವ ದೂರಗಾಮಿ ಉದ್ದೇಶದಿಂದ ಆಸ್ತಿ ತೆರಿಗೆ ಬಾಕಿ ಮೇಲಿನ ದಂಡದಲ್ಲಿ ಶೇಕಡ 50ರಷ್ಟು ವಿನಾಯಿತಿ ನೀಡುವ ಮೂಲಕ ಹೊರೆ ಕಡಿಮೆ ಮಾಡುವ 2024ನೇ ಸಾಲಿನ ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ತಿದ್ದುಪಡಿ) ವಿಧೇಯಕ’ಕ್ಕೆ ಮೇಲ್ಮನೆ ಅಂಗೀಕಾರ ನೀಡಿತು.ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಅಂಗೀಕೃತ ರೂಪದಲ್ಲಿರುವ ವಿಧೇಯಕ ಮಂಡಿಸಿದರು.
ಈ ವೇಳೆ ಹಿಂದೆ ಕಾನೂನಿನಲ್ಲಿ ಲೋಪದೋಷಗಳಿದ್ದವು. ಹೀಗಾಗಿ ಅವುಗಳನ್ನು ಸರಿಪಡಿಸಲು ವಿಧೇಯಕ ತರಲಾಗಿದೆ. ಹಿಂದೆ ಶೇ.24ರಷ್ಟು ಬಡ್ಡಿ ಹಾಕುತ್ತಿರುವುದನ್ನು ಈಗ ಶೇ.9ಕ್ಕೆ ಇಳಿಸಲಾಗಿದೆ. ಮಾರ್ಗಸೂಚಿ ದರ ಆಧರಿಸಿ ಆಸ್ತಿ ತೆರಿಗೆ ವಿಧಿಸಲಾಗುವುದು. ಒಂದು ಬಾರಿಗೆ ಅನ್ವಯವಾಗುವಂತೆ ವಿನಾಯಿತಿ ನೀಡಿ ತೆರಿಗೆ ಕಟ್ಟುವ ವ್ಯವಸ್ಥೆ ಜಾರಿಗೆ ತರಲಾಗುವುದು. ಒಟ್ಟಾರೆ ಸುಮಾರು 13-15 ಲಕ್ಷ ಜನರಿಗೆ ಇದರಿಂದ ಅನುಕೂಲವಾಗಲಿದೆ. ಸರ್ಕಾರಕ್ಕೆ ಸುಮಾರು ₹2000 ಕೋಟಿ ತೆರಿಗೆ ಸಂಗ್ರಹವಾಗಬಹುದು. ಜತೆಗೆ ಜನರಿಗೂ ಸುಮಾರು ₹2000 ಕೋಟಿಗಿಂತ ಹೆಚ್ಚು ಉಳಿತಾಯವಾಗಲಿದೆ. ಬರುವ ಏಪ್ರಿಲ್ 1ರಿಂದಲೇ ವಿಧೇಯಕ ಜಾರಿಗೆ ಬರಲಿದೆ ಎಂದರು.ವಿಧೇಯಕ ಮೇಲೆ ಬಿಜೆಪಿಯ ನವೀನ್, ಗೋಪಿನಾಥ್, ತೇಜಸ್ವಿನಿಗೌಡ, ರವಿಕುಮಾರ್, ಮುನಿರಾಜುಗೌಡ, ಭಾರತಿ ಶೆಟ್ಟಿ, ಕೇಶವಪ್ರಸಾದ್, ಜೆಡಿಎಸ್‌ನ ಕೆ.ಎ.ತಿಪ್ಪೇಸ್ವಾಮಿ, ಮರಿತಿಬ್ಬೇಗೌಡ, ಗೋವಿಂದರಾಜು. ಬಿ.ಎಂ.ಫಾರೂಕ್, ಕಾಂಗ್ರೆಸ್‌ನ ಎಂ.ನಾಗರಾಜು, ಎಸ್.ರವಿ ಮಾತನಾಡಿದರು.-ಬಾಕ್ಸ್-
ಪ್ರಾಮಾಣಿಕ ತೆರಿಗೆದಾರರಿಗೆತೊಂದರೆ ಕೊಡಬೇಡಿ: ಶರವಣ
ಪ್ರಾಮಾಣಿಕವಾಗಿ ತೆರಿಗೆ ಕಟ್ಟುವವರು ಕಟ್ಟುತ್ತಲೇ ಬರುತ್ತಿದ್ದಾರೆ. ಆದರೆ, ಕೋಟ್ಯಂತರ ರುಪಾಯಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ದಂಡದಿಂದ ವಿನಾಯಿತಿ ನೀಡಲು ಹೊರಟಿದ್ದೀರಿ ಎಂದು ಜೆಡಿಎಸ್ ಸದಸ್ಯ ಟಿ.ಎ.ಶರವಣ ಹೇಳಿದರು.ತೆರಿಗೆ ಪಾವತಿಸಿಲ್ಲವೆಂದು ಸುಮಾರು 70 ಸಾವಿರಕ್ಕಿಂತ ಹೆಚ್ಚು ಜನರಿಗೆ ನೋಟಿಸ್ ನೀಡಿದ್ದೀರಿ, ಆದರೆ ಈಗ ವಿಧೇಯಕದ ಮೂಲಕ ಶೇ.50ರಷ್ಟು ದಂಡ ವಿಧಿಸುವುದಾಗಿ ಹೇಳಿದ್ದೀರಿ. ಸ್ವಯಂ ಘೋಷಿತ ಆಸ್ತಿ ತೆರಿಗೆ ಅಡಿ 2014ರಿಂದ ಈವರೆಗೆ ₹100 ಬದಲು ₹200 ತೆರಿಗೆ ಕಟ್ಟಿಸಿಕೊಂಡಿದ್ದೀರಿ. ಇತ್ತೀಚೆಗೆ ‘ರಾಕ್‌ಲೈನ್ ಮಾಲ್’ ತೆರಿಗೆ ಉಳಿಸಿಕೊಂಡಿದೆ ಎಂದು ಪಾಲಿಕೆ ಬೀಗ ಹಾಕಿತ್ತು. ಪಾಲಿಕೆ ಕ್ರಮ ಪ್ರಶ್ನಿಸಿ ಮಾಲ್ ಮಾಲೀಕರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ಕೊನೆಗೆ ಹೈಕೋರ್ಟ್ ಮಾಲ್‌ಗೆ ಹಾಕಿರುವ ಬೀಗ ತೆಗೆಯುವಂತೆ ಸೂಚಿಸಿದ ಪ್ರಸಂಗ ನಡೆದಿದೆ. ಪಾಲಿಕೆ ಅಧಿಕಾರಿಗಳು ತಮಗೆ ಬೇಕಾದಂತೆ ವರ್ತಿಸುತ್ತಿದ್ದಾರೆ. ತೆರಿಗೆ ಪಾವತಿಸದಿದ್ದರೆ ಆಸ್ತಿ ಜಪ್ತಿ ಮಾಡುವುದಾಗಿ ಎಚ್ಚರಿಕೆ ಕೊಡುತ್ತಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂದು ಸಚಿವ ಶಿವಕುಮಾರ್ ಅವರಿಗೆ ಮನವಿ ಮಾಡಿದರು.
--