ಗಾಂಧಿನಗರ (ಗುಜರಾತ್) : ಗುಜರಾತ್‌ನ ಭೂಪೇಂದ್ರ ಪಟೇಲ್ ನೇತೃತ್ವದ ಸಚಿವ ಸಂಪುಟದ 16 ಸಚಿವರು ಗುರುವಾರ ರಾಜೀನಾಮೆ ನೀಡಿದ ಬೆನ್ನಲ್ಲೇ, ಶುಕ್ರವಾರ 26 ಸಚಿವರನ್ನೊಳಗೊಂಡ ನೂತನ ಸಂಪುಟವನ್ನು ಪುನಾರಚಿಸಲಾಗಿದೆ. ಗೃಹ ಖಾತೆ ರಾಜ್ಯ ಸಚಿವರಾಗಿದ್ದ ಹರ್ಷ ಸಾಂಘ್ವಿ ಅವರನ್ನು ನೂತನ ಉಪಮುಖ್ಯಮಂತ್ರಿಯಾಗಿ ನೇಮಿಸಲಾಗಿದೆ. ಅಚ್ಚರಿಯ ವಿದ್ಯಮಾನದಲ್ಲಿ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರಿಗೂ ರಾಜ್ಯ ಮಂತ್ರಿ ಸ್ಥಾನ ಕೊಡಲಾಗಿದೆ.
ಗುಜರಾತ್ ವಿಧಾನಸಭೆಯು 182 ಸದಸ್ಯಬಲವನ್ನು ಹೊಂದಿದ್ದು, 27 ಸಚಿವರನ್ನು ಹೊಂದಲು ಅವಕಾಶವಿದೆ. ಈ ಹಿಂದೆ 17 ಇದ್ದ ಸಚಿವರ ಸಂಖ್ಯೆಯನ್ನು ಈಗ ಸಿಎಂ ಸೇರಿ 27ಕ್ಕೆ ಹೆಚ್ಚಿಸಲಾಗಿದ್ದು, ಮಂತ್ರಿಮಂಡಲವನ್ನು ಪೂರ್ಣ ಭರ್ತಿ ಮಾಡಲಾಗಿದೆ.
ಹೊಸ ಮುಖಗಳು:
ಶುಕ್ರವಾರ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ 26 ಮಂದಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಸಂಪುಟ ಪುನಾರಚನೆಯಲ್ಲಿ ಹಲವು ಹೊಸ ಮುಖಗಳಿಗೆ ಮಣೆ ಹಾಕಲಾಗಿದ್ದು, ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಮೊದಲ ಬಾರಿಗೆ ಸಚಿವರಾಗಿರುವುದು ಪ್ರಮುಖ ಆಕರ್ಷಣೆಯಾಗಿದೆ. ಗೃಹ ಖಾತೆ ರಾಜ್ಯ ಸಚಿವರಾಗಿದ್ದ ಹರ್ಷ ಸಾಂಘ್ವಿಯವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಹಿಂದಿನ ಸಂಪುಟದಲ್ಲಿದ್ದ ಅರ್ಜುನ್ ಮೋಧ್ವಾಡಿಯಾ, ಕುನ್ವರ್ಜಿ ಬವಾಲಿಯಾ, ಹೃಷಿಕೇಶ ಪಟೇಲ್, ಕಣುಭಾಯಿ ದೇಸಾಯಿ ಸೇರಿ 6 ಜನರಿಗೆ ಮತ್ತೆ ಸ್ಥಾನ ನೀಡಲಾಗಿದೆ.
ಭಾರತದಿಂದ ಮತ್ತೆ ಯುದ್ಧ ಸಂಭವ, ನಾವು ರೆಡಿ: ಪಾಕ್
‘ಅಫ್ಘಾನಿಸ್ತಾನ ಜತೆ ಪಾಕಿಸ್ತಾನ ಸಂಘರ್ಷಕ್ಕೆ ಇಳಿದಿರುವ ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಭಾರತವು ಪಾಕಿಸ್ತಾನದ ಮೇಲೆ ಪುನಃ ದಾಳಿ ನಡೆಸುವ ಕೊಳಕು ಆಟ ಆಡುವ ಸಂಭವವಿದೆ. ಆದರೆ ಇದಕ್ಕೆ ಎದಿರೇಟು ನೀಡಲು ನಾವು ಸರ್ವಸನ್ನದ್ಧರಾಗಿದ್ದೇವೆ’ ಎಂದು ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ.
ಈ ಮೂಲಕ ಅಫ್ಘಾನಿಸ್ತಾನದ ಜತೆಗಿನ ಸಂಘರ್ಷದ ವಿಚಾರದಲ್ಲಿ ಇದೀಗ ಭಾರತವನ್ನೂ ಎಳೆದುತರುವ ಪ್ರಯತ್ನವನ್ನು ನಡೆಸಿದ್ದಾರೆ.
ಪಾಕಿಸ್ತಾನದ ಖಾಸಗಿ ವಾಹಿನಿಯೊಂದರ ಜತೆ ಮಾತನಾಡಿದ ಅವರು, ‘ಏನೇ ಇದ್ದರೂ ಪಾಕಿಸ್ತಾನವು ಅಫ್ಘಾನಿಸ್ತಾನ ಮತ್ತು ಭಾರತ ಎರಡೂ ದೇಶಗಳ ಜತೆಗೆ ಏಕಕಾಲದಲ್ಲಿ ಯುದ್ಧಕ್ಕೆ ಸಿದ್ಧವಾಗಿದೆ’ ಎಂದು ಹೇಳಿದರು.
‘ಆಪ್ಘನ್ ಜತೆಗಿನ ಸಂಘರ್ಷದ ಸಂದರ್ಭದಲ್ಲಿ ಭಾರತವು ಗಡಿಭಾಗದಲ್ಲಿ ಸೇನೆ ನಿಯೋಜಿಸುವ ಮೂಲಕ ಪ್ರಚೋದನೆ ನೀಡುವ ಸಾಧ್ಯತೆ ಇದೆಯೇ? ಅದನ್ನು ಹೇಗೆ ನಿಭಾಯಿಸುವಿರಿ? ಈ ಬಗ್ಗೆ ಪ್ರಧಾನಿ ಜತೆ ಮಾತನಾಡಿದ್ದೀರಾ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಂಥ ಸಾಧ್ಯತೆ ದಟ್ಟವಾಗಿದೆ. ‘ಹೌದು, ಈ ಸಂಬಂಧ ವ್ಯೂಹತಂತ್ರಗಳನ್ನು ಹೆಣೆಯಲಾಗಿದೆ. ಆದರೆ ಇದನ್ನು ಬಹಿರಂಗವಾಗಿ ಚರ್ಚೆ ಮಾಡಲು ಸಾಧ್ಯವಿಲ್ಲ. ನಾವು ಯಾವುದೇ ಪರಿಸ್ಥಿತಿ ಎದುರಿಸಲೂ ಸಿದ್ಧವಾಗಿದ್ದೇವೆ’ ಎಂದರು.
ವಂಚಕ ಚೋಕ್ಸಿ ಗಡೀಪಾರಿಗೆ ಬೆಲ್ಜಿಯಂ ಕೋರ್ಟ್ ಅನುಮತಿ
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿನ 13,000 ಕೋಟಿ ರು. ಅಕ್ರಮಕ್ಕೆ ಸಂಬಂಧಿಸಿದಂತೆ ಬೆಲ್ಜಿಯಂ ದೇಶದಲ್ಲಿ ಬಂಧಿತನಾಗಿರುವ ವಂಚಕ ಮೆಹುಲ್ ಚೋಕ್ಸಿ ಗಡೀಪಾರಿಗೆ ಅಲ್ಲಿನ ನ್ಯಾಯಾಲಯ ಅನುಮತಿ ಕೊಟ್ಟಿದೆ. ಭಾರತ ಸಲ್ಲಿಸಿರುವ ಮನವಿಯು ಮಾನ್ಯವಾಗಿದೆ ಎಂದು ಕೋರ್ಟ್ ಹೇಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಬ್ಬ ವಂಚಕ ನೀರವ್ ಮೋದಿ ಜತೆ ವಂಚನೆ ಪ್ರಕರಣದಲ್ಲಿ ಬೇಕಾಗಿರುವ ಚೋಕ್ಸಿಯನ್ನು ಬೆಲ್ಜಿಯಂ ಸರ್ಕಾರವು ಭಾರತದ ಮನವಿ ಮೇರೆಗೆ ಬೆಲ್ಜಿಯಂನಲ್ಲಿ ಬಂಧಿಸಿತ್ತು. ಭಾರತಕ್ಕೆ ಗಡೀಪಾರು ಮಾಡುವಂತೆ ಭಾರತದ ವಿದೇಶಾಂಗ ಸಚಿವಾಲಯ ಮತ್ತು ಸಿಬಿಐ ಬೆಲ್ಜಿಯಂ ಕೋರ್ಟ್‌ನಲ್ಲಿ ನಿರಂತರವಾಗಿ ವಾದ ಮಂಡಿಸಿತ್ತು. ಈ ಎಲ್ಲಾ ವಾದಗಳನ್ನು ಪುರಸ್ಕರಿಸಿದ ಕೋರ್ಟ್, ಭಾರತದ ಮನವಿಯು ಸರಿಯಾಗಿದೆ ಎಂದಿದೆ. ಇದರಿಂದ ಭಾರತಕ್ಕೆ ಬಹುದೊಡ್ಡ ರಾಜತಾಂತ್ರಿಕ ಗೆಲುವಾಗಿದೆ.
ಆದರೆ ಈ ತೀರ್ಪನ್ನು ಪ್ರಶ್ನಿಸಿ ಚೋಕ್ಸಿ ಬೆಲ್ಜಿಯಂ ಉನ್ನತ ಮೇಲ್ಮನವಿ ಮಾಡಬಹುದಾಗಿದೆ.