ಗುಟ್ಕಾ ನಿಷೇಧದಿಂದ ಅಡಕೆ ಬೆಳೆಗಾರರು ತಲ್ಲಣ

Published : Aug 15, 2026, 05:26 AM IST
pan masala gutka  ban

ಸಾರಾಂಶ

ರಾಜ್ಯದಲ್ಲಿ ಅಡಕೆಯಿಂದ ತಯಾರಾಗುವ ಗುಟ್ಕಾ-ಪಾನ್‌ ಮಸಾಲಾ ನಿಷೇಧಿಸಿ ಹೊರಡಿಸಿರುವ ಆದೇಶ ಹಿಂಪಡೆಯುವಂತೆ ಬಿಜೆಪಿ ಹಿರಿಯ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಬಿಜೆಪಿ-ಜೆಡಿಎಸ್‌ ಶಾಸಕರ ನಿಯೋಗ ಶುಕ್ರವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗಿ ಮನವಿ

 ಬೆಂಗಳೂರು : ರಾಜ್ಯದಲ್ಲಿ ಅಡಕೆಯಿಂದ ತಯಾರಾಗುವ ಗುಟ್ಕಾ-ಪಾನ್‌ ಮಸಾಲಾ ನಿಷೇಧಿಸಿ ಹೊರಡಿಸಿರುವ ಆದೇಶ ಹಿಂಪಡೆಯುವಂತೆ ಬಿಜೆಪಿ ಹಿರಿಯ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಬಿಜೆಪಿ-ಜೆಡಿಎಸ್‌ ಶಾಸಕರ ನಿಯೋಗ ಶುಕ್ರವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗಿ ಮನವಿ ಮಾಡಿದೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ, ರಾಜ್ಯದಲ್ಲಿ 145 ತಾಲೂಕುಗಳಲ್ಲಿ ಸುಮಾರು 5 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಸುಮಾರು 10 ಲಕ್ಷ ರೈತ ಕುಟುಂಬ ಅಡಕೆ ಬೆಳೆಯುತ್ತಿವೆ. ರಾಜ್ಯ ಸರ್ಕಾರ ಇತ್ತೀಚೆಗೆ ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧಿಸಿ ಅಧಿಸೂಚನೆ ಹೊರಡಿಸಿದೆ. ಇದರಿಂದ ಅಡಕೆ ದರ 2-3 ಸಾವಿರ ರು. ಕುಸಿದಿದೆ. ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ. ರೈತರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಗಮನಕ್ಕೆ ತಂದಿದ್ದೇವೆ ಎಂದರು.

ರಾಜ್ಯದ ರೈತರು, ಅಡಕೆ ಸಹಕಾರ ಸಂಘ-ಸಂಸ್ಥೆಗಳ ದೊಡ್ಡ ನಿಯೋಗವು ಸೋಮವಾರ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದೆ. ದೇಶದ ಶೇ.60ಕ್ಕಿಂತ ಹೆಚ್ಚು ಅಡಕೆ ನಮ್ಮ ರಾಜ್ಯದಲ್ಲಿ ಬೆಳೆಯುತ್ತಿದ್ದೇವೆ. ಈ ಅಡಕೆ ಬೆಳೆಯುವ ರೈತರ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ. ಹೀಗಾಗಿ ಅಧಿಸೂಚನೆ ಹಿಂಪಡೆದು ರೈತರನ್ನು ರಕ್ಷಿಸಲು ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳು ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಹೇಳಿದ್ದಾರೆ. ಹೀಗಾಗಿ ರೈತರ ರಕ್ಷಣೆ ಮಾಡುತ್ತಾರೆ ಎಂಬ ಭರಸೆ ಇದೆ ಎಂದು ಹೇಳಿದರು.

ನಿರ್ಧಾರ ವಾಪಸ್‌ ಪಡೆಯಬೇಕು-ಮಂಜು:

ಜೆಡಿಎಸ್‌ ಶಾಸಕ ಎ.ಮಂಜು ಮಾತನಾಡಿ, ರಾಜ್ಯ ಸರ್ಕಾರ ಅಡಕೆ ಉತ್ಪನ್ನ ನಿಷೇಧಕ್ಕೆ ಹೊರಟಿದೆ. ಇದು ಕರ್ನಾಟಕದಲ್ಲಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತದೆ. ಮಲೆನಾಡಿನ ಭಾಗದಲ್ಲಿ ರೈತರು ಅಡಕೆ ಬೆಳೆಗೆ ಹೆಚ್ಚು ಅವಲಂಬಿತರಾಗಿದ್ದಾರೆ. ಈ ನಿರ್ಧಾರದಿಂದ ಸರ್ಕಾರಕ್ಕೆ ಕೆಟ್ಟು ಹೆಸರು ಬರುತ್ತದೆ. ಇದರ ವಿರುದ್ಧ ರೈತರು ಹೋರಾಟಕ್ಕೆ ನಿಂತರೆ ನಾವು ಕೈಜೋಡಿಸುತ್ತೇವೆ. ಅಡಕೆಯಲ್ಲಿ ನಿಕೋಟಿನ್‌ ಇದೆ ಎಂದು ಹೇಳುತ್ತಾರೆ. ಸರ್ಕಾರಕ್ಕೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. ಸರ್ಕಾರ ಈ ನಿರ್ಧಾರ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು.

ಬೆಳೆಗಾರರ ಮೇಲೆ ಗದಾಪ್ರಹಾರ-ಬಿವೈವಿ:

ಕಾಂಗ್ರೆಸ್ ಸರ್ಕಾರ ಮತ್ತು ರಾಜ್ಯದ ಮುಖ್ಯಮಂತ್ರಿಗಳು ರೈತರು ಮತ್ತು ಅಡಕೆ ಬೆಳೆಗಾರರ ಮೇಲೆ ಗದಾಪ್ರಹಾರ ಮಾಡುವ ಪ್ರಯತ್ನ ಅಥವಾ ಷಡ್ಯಂತ್ರ ಮಾಡುತ್ತಿರುವ ಗುಮಾನಿ ಮೂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಅತಿ ಹೆಚ್ಚು ಅಡಕೆ ಬೆಳೆಯುತ್ತಾರೆ. ಇಡೀ ದೇಶದಲ್ಲಿ ಸುಮಾರು 9.49 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತದೆ. ಈ ಪೈಕಿ ಕರ್ನಾಟಕದಲ್ಲಿ 6.76 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯುತ್ತಾರೆ. ಕರ್ನಾಟಕದಲ್ಲಿ ಈ ಬೆಳೆಯನ್ನು ಶೇ.76ರಷ್ಟು ಬೆಳೆಯಲಾಗುತ್ತದೆ. ಆದರೂ ಈ ಸರ್ಕಾರಿಂದ ಗುಟ್ಕಾ ನಿಷೇಧ ಮಾಡುವುದಾಗಿ ಹಾವು ಬಿಡುವ ಕೆಲಸವಾಗಿದೆ ಎಂದು ಟೀಕಿಸಿದರು.

ಅಡಕೆ ಬೆಳೆಗಾರರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಕ್ಯಾಂಪ್ಕೋ, ಇತರ ಸಂಘಗಳ ನಿಯೋಗ ಬರಲಿದ್ದು, ಸೋಮವಾರ ಅಥವಾ ಮಂಗಳವಾರ ಸಭೆ ನಿಗದಿ ಮಾಡಲು ಕೋರಿದ್ದೇನೆ. ಅಡಕೆ ಬೆಳೆಗಾರರಿಗೆ ತೊಂದರೆ ಆಗುವಂಥ ನಿರ್ಧಾರ ಸರ್ಕಾರ ಕೈಗೊಳ್ಳಬಾರದು ಎಂದು ಆಗ್ರಹಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಗುಟ್ಕಾ, ಪಾನ್‌ ಮಸಾಲಾ ನಿಷೇಧ ಆದೇಶ ವಾಪಸಿಲ್ಲ: ಸಚಿವ ಖಾದರ್‌ ಸ್ಪಷ್ಟೋಕ್ತಿ
ಕಾಂಗ್ರೆಸ್‌, ಬಿಜೆಪಿ ಮಧ್ಯೆ ಆರ್‌ಎಸ್‌ಎಸ್‌ ಜಟಾಪಟಿ