ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಲು ಕೈ ಗೆಲುವು ಅನಿವಾರ್ಯ: ಮನ್ಸೂರ್‌

KannadaprabhaNewsNetwork |  
Published : Apr 19, 2024, 01:31 AM ISTUpdated : Apr 19, 2024, 04:52 AM IST
ಸಿ.ವಿ ರಾಮನ್ ನಗರದಲ್ಲಿ ಮನ್ಸೂರ್ ಅಲಿ ಖಾನ್ ರೋಡ್ ಶೋ. | Kannada Prabha

ಸಾರಾಂಶ

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಡವರು, ಮಧ್ಯಮ ವರ್ಗಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ ನಾಗರಿಕರ ಸರ್ವತೋಮುಖ ಅಭಿವೃದ್ಧಿಯಾಗಲಿದೆ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಹೇಳಿದರು.

 ಬೆಂಗಳೂರು :  ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಡವರು, ಮಧ್ಯಮ ವರ್ಗಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ. ಔದ್ಯೋಗಿಕ ವಲಯದಲ್ಲಿ ಮಹತ್ವದ ಬದಲಾವಣೆ ಮತ್ತು ಸುಧಾರಣೆಗಳಾಗಿ ಉದ್ಯೋಗಗಳು ಸೃಷ್ಟಿಯಾಗಲಿವೆ. ನಾಗರಿಕರ ಸರ್ವತೋಮುಖ ಅಭಿವೃದ್ಧಿಯಾಗಲಿದೆ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಹೇಳಿದರು.

ಗುರುವಾರ ಸಿ.ವಿ.ರಾಮನ್ ನಗರದ ವಿವಿಧೆಡೆ ನೂರಾರು ಬೆಂಬಲಿಗರೊಂದಿಗೆ ಭರ್ಜರಿ ರೋಡ್‌ ಶೋ ನಡೆಸಿ, ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ ವೇಳೆ ಮಾತನಾಡಿದ ಅವರು, ಹಿಂದಿನ ಚುನಾವಣೆ ವೇಳೆ ಬಿಜೆಪಿ ಪ್ರಣಾಳಿಕೆಯಲ್ಲಿ 600 ಭರವಸೆಗಳನ್ನು ನೀಡಿ 60 ಭರವಸೆಗಳನ್ನು ಕೂಡ ಈಡೇರಿಸಿಲ್ಲ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗೃಹಜ್ಯೋತಿ ಯೋಜನೆಯ ಮೂಲಕ ಬಡವರು ಮತ್ತು ಮಧ್ಯಮ ವರ್ಗಗಳಿಗೆ ಆರ್ಥಿಕವಾಗಿ ನೆರವಾಗಿದೆ. ಗೃಹಲಕ್ಷ್ಮೀ ಯೋಜನೆಯಡಿ 1.17 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರು. ನೆರವು ನೀಡಲಾಗುತ್ತಿದೆ. ಅನ್ನಭಾಗ್ಯ, ಯುವನಿಧಿಯಂತಹ ಯೋಜನೆಗಳು ಕುಟುಂಬಗಳ ಆರ್ಥಿಕ ಶಕ್ತಿಯನ್ನು ಹೆಚ್ಚಿಸಿವೆ. ಶಕ್ತಿ ಯೋಜನೆಯಿಂದ ಮಹಿಳೆಯರ ಸ್ವಾವಲಂಬನೆ ಆಗುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಮುಂದಿನ ಐದು ವರ್ಷ ಕಾಲ ನಿರಂತರವಾಗಿ ಮುಂದುವರೆಯುತ್ತವೆ. ಕಾಂಗ್ರೆಸ್ ಪಕ್ಷ ಜನರ ಬದುಕಿಗೆ ಆಧಾರ ಸ್ತಂಭವಾಗಿದೆ. ಆದರೆ, ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳನ್ನು ಟೀಕೆ ಮಾಡುವ ಬಿಜೆಪಿಯವರಿಗೆ ಇಂತಹ ಒಂದೇ ಒಂದು ಯೋಜನೆಯನ್ನೂ ಜಾರಿಗೆ ತರಲು ಏಕೆ ಸಾಧ್ಯವಾಗಿಲ್ಲ ಎಂದು ಅವರು ಪ್ರಶ್ನಿಸಿದರು.

ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಲು ಕಾಂಗ್ರೆಸ್‌ ಪಕ್ಷದ ಗೆಲುವು ಅನಿವಾರ್ಯ. ಸಂವಿಧಾನ, ಪ್ರಜಾಪ್ರಭುತ್ವ, ಜನಜೀವನ ಮತ್ತು ಭಾವೈಕ್ಯತೆಗೆ ಬಿಜೆಪಿ ಮಾರಕವಾಗಿದೆ. ಕೋಮು ಸಂಘರ್ಷ ವಿಚಾರಗಳ ಮೂಲಕ ಜನರ ದಿಕ್ಕು ತಪ್ಪಿಸಿ ಆ ಮೂಲಕ ಮತಗಳಿಸುವುದು ಬಿಜೆಪಿಯ ಹುನ್ನಾರವಾಗಿದೆ ಎಂದು ಮನ್ಸೂರ್ ಅಲಿ ಖಾನ್ ಆರೋಪಿಸಿದರು.

ಅಧಿಕಾರಕ್ಕೆ ಬಂದರೆ ಮಹಿಳಾ ನ್ಯಾಯ ಯೋಜನೆ ಮೂಲಕ ಬಡ ಕುಟುಂಬಗಳಿಗೆ ವರ್ಷಕ್ಕೆ 1 ಲಕ್ಷ ರು. ಆರ್ಥಿಕ ನೆರವು ನೀಡಲಾಗುತ್ತದೆ. ಯುವ ನ್ಯಾಯದ ಮೂಲಕ ಉದ್ಯೋಗ ಗ್ಯಾರಂಟಿ, ಜನಸ್ನೇಹಿ ತೆರಿಗೆ ವ್ಯವಸ್ಥೆ, ಬೆಲೆ ಏರಿಕೆ ನಿಯಂತ್ರಣ, ರೈತರ ಸಾಲಮನ್ನಾದಂತಹ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ ಎಂದು ಅವರು ಹೇಳಿದರು.

ಜೀವನ್‌ ಬಿಮಾ ನಗರ, ಬಾಬಾಸಾಹೇಬ್ ಕಾಲೋನಿ ಮತ್ತು ಕೋಡಿಹಳ್ಳಿ, ಬಿಡಿಎ ಲೇಔಟ್‌, ಎಚ್‌ಎಎಲ್ ವಿಮಾ ನಿಲ್ದಾಣ ರಸ್ತೆ, ವಿನಾಯಕ ನಗರ ಸೇರಿದಂತೆ ಹಲವೆಡೆ ಭರ್ಜರಿ ಪ್ರಚಾರ ನಡೆಯಿತು. ಪ್ರಚಾರದ ಮಧ್ಯೆ ಸಂವಿಧಾನ ಶಿಲ್ಪಿ ಡಾ। ಬಿ.ಆರ್‌.ಅಂಬೇಡ್ಕರ್‌ ಮತ್ತು ದಿವಂಗತ ನಟ ಪುನೀತ್ ರಾಜ್‍ಕುಮಾರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು.

ಪ್ರಚಾರದ ವೇಳೆ ಸಿವಿ ರಾಮನ್‌ನಗರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ ನಾಯಕರಾದ ಎಸ್‌.ಆನಂದಕುಮಾರ್‌, ಬ್ಲಾಕ್‌ ಅಧ್ಯಕ್ಷರು, ವಾರ್ಡ್‌ ಅಧ್ಯಕ್ಷರು, ಸ್ಥಳೀಯ ಮುಖಂಡರು ಹಾಗೂ ಅಪಾರ ಸಂಖ್ಯೆಯ ಕಾಂಗ್ರೆಸ್‌ ಕಾರ್ಯಕರ್ತರು ಜೊತೆಗಿದ್ದರು.

PREV

Recommended Stories

ಧರ್ಮಸ್ಥಳ ಪರವಾಗಿ ರಾಜ್ಯಾದ್ಯಂತ ಹಿಂದೂಗಳು ಪ್ರತಿಭಟನೆ
ಆರ್‌ಸಿಬಿ ಕಾಲ್ತುಳಿತ ಆಕಸ್ಮಿಕ, ಆದರೂ ಕ್ರಮ: ಗೃಹ ಸಚಿವ ಡಾ.ಜಿ.ಪರಮೇಶ್ವರ್‌