ಹರಿಪ್ರಸಾದ್‌ ಕೆಪಿಸಿಸಿ ಅಧ್ಯಕ್ಷ

Published : Jun 04, 2026, 05:18 AM IST
KPCC President BK Hariprasad

ಸಾರಾಂಶ

ಹಲವು ಪ್ರಭಾವಿ ನಾಯಕರು ಬಯಸಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ರಾಜ್ಯಾಧ್ಯಕ್ಷ ಹುದ್ದೆಯು ರಾಷ್ಟ್ರಮಟ್ಟದ ಸಂಘಟಕ, ಹಿಂದುಳಿದ ವರ್ಗಗಳ ನಾಯಕ, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರಿಗೆ ಒಲಿದಿದೆ.

  ಬೆಂಗಳೂರು: ಹಲವು ಪ್ರಭಾವಿ ನಾಯಕರು ಬಯಸಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ರಾಜ್ಯಾಧ್ಯಕ್ಷ ಹುದ್ದೆಯು ರಾಷ್ಟ್ರಮಟ್ಟದ ಸಂಘಟಕ, ಹಿಂದುಳಿದ ವರ್ಗಗಳ ನಾಯಕ, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರಿಗೆ ಒಲಿದಿದೆ.

ಪ್ರಭಾವಿಗಳಾದ ಸತೀಶ್‌ ಜಾರಕಿಹೊಳಿ, ಈಶ್ವರ ಖಂಡ್ರೆ, ಡಾ.ಜಿ.ಪರಮೇಶ್ವರ್‌, ಸಂತೋಷ ಲಾಡ್, ಶಿವರಾಜ ತಂಗಡಗಿ ಮೊದಲಾದವರು ತೀವ್ರ ಪ್ರಯತ್ನ ನಡೆಸಿದ್ದ ಈ ಹುದ್ದೆಗೆ ಹೈಕಮಾಂಡ್‌ನ ಆಯ್ಕೆಯಾಗಿ ಬಿ.ಕೆ.ಹರಿಪ್ರಸಾದ್‌ ಹೊರ ಹೊಮ್ಮಿದ್ದಾರೆ.

ಹಿಂದುಳಿದ ವರ್ಗಗಳ ಮೇರು ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ಆ ಹುದ್ದೆಯು ಮೇಲ್ವರ್ಗ (ಒಕ್ಕಲಿಗ)ದ ಡಿ.ಕೆ.ಶಿವಕುಮಾರ್ ಅವರಿಗೆ ಲಭಿಸಿದ ನಂತರ ಕೆಪಿಸಿಸಿ ಹುದ್ದೆಗೆ ಒಬಿಸಿ ವರ್ಗದಿಂದಲೇ ಪ್ರಮುಖ ಸಂಘಟಕರನ್ನು ಆಯ್ಕೆ ಮಾಡುವ ಇರಾದೆ ಹೈಕಮಾಂಡ್‌ ಹೊಂದಿತ್ತು.

ರೇಸಲ್ಲಿದ್ದ ಜಾರಕಿಹೊಳಿ:

ಹೀಗಾಗಿ ನಾಯಕ ಸಮುದಾಯದ ಸತೀಶ್ ಜಾರಕಿಹೊಳಿ ಅವರ ಹೆಸರು ಪ್ರಧಾನವಾಗಿ ಈ ಹುದ್ದೆಗೆ ಕೇಳಿ ಬಂದಿತ್ತು. ಆದರೆ, ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಹುದ್ದೆಯೊಂದಿಗೆ ಸಚಿವ ಖಾತೆಯನ್ನೂ ಬಯಸಿದ್ದರು. ಇದೇ ಉದ್ದೇಶ ಇತರ ಆಕಾಂಕ್ಷಿಗಳಾದ ಪರಮೇಶ್ವರ್‌, ಈಶ್ವರ್‌ ಖಂಡ್ರೆ, ತಂಗಡಗಿ ಅವರಿಗೂ ಇತ್ತು.

ಆದರೆ, ಹೈಕಮಾಂಡ್ ಒಬ್ಬರಿಗೆ ಒಂದು ಹುದ್ದೆ ಎಂಬ ನಿಯಮ ವಿಧಿಸಿದ್ದು ಈ ನಾಯಕರಿಗೆ ತೊಡಕಾಯಿತು. ಆದರೂ ಪಟ್ಟು ಬಿಡದ ಜಾರಕಿಹೊಳಿ ಅವರು ಮಾಜಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಹೀಗೆ ಮೂರು ಹುದ್ದೆಗಳನ್ನು ಹೊಂದಿದ್ದನ್ನು ಮುಂದಿಟ್ಟುಕೊಂಡು ಹೈಕಮಾಂಡ್‌ ತಮಗೆ ಸಚಿವ ಸ್ಥಾನ ಹಾಗೂ ಕೆಪಿಸಿಸಿ ಹುದ್ದೆ ನೀಡುವಂತೆ ಕಡೆ ಕ್ಷಣದವರೆಗೂ ಪ್ರಬಲ ಲಾಬಿ ನಡೆಸಿದರು.

ಒಂದು ಹುದ್ದೆ ಆಯ್ಕೆಗೆ ಸೂಚನೆ:

ಆದರೆ, ಹೈಕಮಾಂಡ್ ಎರಡು ವರ್ಷಗಳ ನಂತರ ಮತ್ತೆ ವಿಧಾನಸಭಾ ಚುನಾವಣೆಯು ಮುಖ್ಯವಾಗಿರುವುದರಿಂದ ಪೂರ್ಣಪ್ರಮಾಣದಲ್ಲಿ ಪಕ್ಷ ಸಂಘಟನೆ ಮಾಡುವವರನ್ನು ಅಧ್ಯಕ್ಷರನ್ನಾಗಿ ಮಾಡುವುದು ಅತ್ಯಗತ್ಯ. ಆದ್ದರಿಂದ ಕೆಪಿಸಿಸಿ ಅಧ್ಯಕ್ಷ ಹುದ್ದೆ ಅಥವಾ ಸಚಿವ ಸ್ಥಾನ ಎರಡರಲ್ಲಿ ಒಂದನ್ನು ಆಯ್ಕೆ ಖಡಾಖಂಡಿತವಾಗಿ ತಿಳಿಸಿತ್ತು.

ಆದರೆ, ಸಚಿವ ಖಾತೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಹೊಣೆ ಕೈ ಬಿಡಲು ತಯಾರಿಲ್ಲದ ಸತೀಶ್‌ ಅವರು ಅಂತಿಮವಾಗಿ ಕೆಪಿಸಿಸಿ ಹುದ್ದೆಯಿಂದ ಹಿಂದಕ್ಕೆ ಸರಿದರು ಎನ್ನಲಾಗಿದೆ. ಇದಾದ ನಂತರ ಹೈಕಮಾಂಡ್‌ ಹಠಾತ್ ಆಗಿ ಸಿದ್ದರಾಮಯ್ಯ ಸರ್ಕಾರದಲ್ಲಿ ಯುವ ಸಚಿವರಾಗಿದ್ದ ಸಂತೋಷ್ ಲಾಡ್ ಅವರ ಹೆಸರನ್ನು ಪರಿಗಣಿಸಿ, ರಾಜ್ಯ ನಾಯಕರ ಅಭಿಪ್ರಾಯ ಕೇಳಿದೆ.

ಇದಕ್ಕೆ ರಾಜ್ಯ ಕಾಂಗ್ರೆಸ್ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದರು ಎನ್ನಲಾಗಿದೆ. ಲಾಡ್ ಚಿಕ್ಕ ಕೋಮಿನಿಂದ ಬಂದವರಾಗಿದ್ದು, ಪಕ್ಷಕ್ಕೆ ಅಂಥ ದೊಡ್ಡ ಲಾಭವಾಗದು ಎಂದು ಮನವರಿಕೆ ಮಾಡಿಕೊಟ್ಟ ನಂತರ ಹರಿಪ್ರಸಾದ್‌ ಅವರ ಹೆಸರು ಅಂತಿಮಗೊಂಡಿದೆ.

ವಾಸ್ತವವಾಗಿ ಹರಿಪ್ರಸಾದ್‌ ಅವರು ಸಚಿವ ಸ್ಥಾನಕ್ಕಾಗಿ ತೀವ್ರ ಪ್ರಯತ್ನ ನಡೆಸಿದ್ದರು. ಕೆಪಿಸಿಸಿ ಹುದ್ದೆ ಅವರು ಬಯಸಿಯೂ ಇರಲಿಲ್ಲ. ಆದರೆ, ಬದಲಾದ ಪರಿಸ್ಥಿತಿಯಿಂದಾಗಿ ಹೈಕಮಾಂಡ್‌ ಹರಿಪ್ರಸಾದ್‌ ಅವರು ಕೆಪಿಸಿಸಿ ಅಧ್ಯಕ್ಷ ಗಾದಿಗೆ ಆಯ್ಕೆ ಮಾಡಿದೆ.

4 ಬಾರಿ ರಾಜ್ಯಸಭೆ, ಒಂದು ಬಾರಿ ವಿಧಾನ ಪರಿಷತ್‌ ಸದಸ್ಯ

ಬೆಂಗಳೂರಿನಲ್ಲಿ 29-7-1954ರಲ್ಲಿ ಕೆಂಪಯ್ಯ- ಗುಣವತಿ ಅವರ ಮಗನಾಗಿ ಬಿ.ಕೆ.ಹರಿಪ್ರಸಾದ್‌ ಜನನ. ನಾಲ್ಕು ಬಾರಿ ರಾಜ್ಯ ಸಭಾ ಸದಸ್ಯ, ಒಂದು ಬಾರಿ ವಿಧಾನ ಪರಿಷತ್‌ ಸದಸ್ಯ. ಹಾಲಿ ಹರ್ಯಾಣ ರಾಜ್ಯ ಕಾಂಗ್ರೆಸ್ ಎಐಸಿಸಿ ಉಸ್ತುವಾರಿ. ಇದಲ್ಲದೆ, ಗುಜರಾತ್‌, ಪುದುಚೇರಿ, ದಿಯು ಮತ್ತು ದಮನ್‌, ಗೋವಾ, ದಾದರ್‌ ನಗರ್‌ ಹವೇಲಿ, ಹರ್ಯಾಣ, ಮಧ್ಯಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್‌, ಒಡಿಶಾ, ಬಿಹಾರ, ರಾಜಸ್ಥಾನ, ಪಂಜಾಬ್‌, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ತ್ರಿಪುರ, ಮಣಿಪುರ ಮತ್ತು ಉತ್ತರ ಪ್ರದೇಶ ಎಐಸಿಸಿ ಉಸ್ತುವಾರಿಯಾಗಿ ಕೆಲಸ ಮಾಡಿದ ಅನುಭವ.

ಹರಿಪ್ರಸಾದ್‌ಗೆ ಸಿಕ್ಕಿದ್ದೇಗೆ?

- ಹಿಂದುಳಿದ ವರ್ಗಗಳ ಮೇರು ನಾಯಕ ಸಿದ್ದರಾಮಯ್ಯರಿಂದ ತೆರವಾದ ಸಿಎಂ ಸ್ಥಾನ ಮೇಲ್ವರ್ಗ (ಒಕ್ಕಲಿಗ)ಕ್ಕೆ ಹಂಚಿಕೆ

- ಹೀಗಾಗಿ ಒಬಿಸಿ ವರ್ಗದ, ಸಂಘಟನೆಯಲ್ಲಿ ಅನುಭವ ಹೊಂದಿರುವ ನಾಯಕರಿಗೆ ಹೊಣೆ ವಹಿಸಲು ವರಿಷ್ಠರ ಒಲವು

- ಪ್ರಭಾವಿ ನಾಯಕರಾದ ಸತೀಶ್‌ ಜಾರಕಿಹೊಳಿ, ಈಶ್ವರ ಖಂಡ್ರೆ, ಪರಮೇಶ್ವರ್‌ ಸೇರಿ ಹಲವರು ರೇಸ್‌ನಲ್ಲಿದ್ದರು

- ಸಚಿವ ಸ್ಥಾನದ ಜತೆ ಅಧ್ಯಕ್ಷ ಪಟ್ಟ ಬಯಸಿದ್ದ ನಾಯಕರು. ‘ಒಬ್ಬರಿಗೆ ಒಂದೇ ಹುದ್ದೆ’ ನಿಯಮ ಹೇರಿದ ಹೈಕಮಾಂಡ್‌

- ಡಿಕೆಶಿ ಅವರು ಉಪಮುಖ್ಯಮಂತ್ರಿಯಾಗಿದ್ದುಕೊಂಡು, ಅಧ್ಯಕ್ಷ ಸ್ಥಾನ ನಿರ್ವಹಿಸಿದ್ದ ಮಾದರಿ ಜಾರಿಗೆ ಒತ್ತಾಯ

- 2 ವರ್ಷಗಳಲ್ಲಿ ಚುನಾವಣೆ ಬರುವ ಕಾರಣ ಎರಡು ಹುದ್ದೆ ನೀಡಲು ವರಿಷ್ಠರ ನಕಾರ. ಹೀಗಾಗಿ ಹಲವರು ರೇಸಿಂದ ಔಟ್‌

- ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸಿದ್ದ ಹರಿಪ್ರಸಾದ್‌ ಅವರಿಗೆ ದೊರಕಿತು ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಜವಾಬ್ದಾರಿ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮೊದಲ ಸಂಪುಟ ಸಭೆಯಲ್ಲೇ ಡಿಕೆಶಿ ಸಿಕ್ಸರ್‌!
ಇಬ್ಭಾಗದತ್ತ ಮಮತಾ ಪಕ್ಷ ಟಿಎಂಸಿ!