ಪೀಣ್ಯ ದಾಸರಹಳ್ಳಿ : ಈಗಾಗಲೇ ಎಲ್ಲಾ ವಾರ್ಡ್‌ಗಳಲ್ಲಿ ಎರಡು ಪಕ್ಷಗಳ ಸಮನ್ವಯ ಸಭೆ ಮಾಡಲಾಗಿದ್ದು, ಇದೇ 20ರಂದು ಅರಮನೆ ಮೈದಾನಕ್ಕೆ ನರೇಂದ್ರ ಮೋದಿ ಅಗಮಿಸಲಿದ್ದಾರೆ. ಕ್ಷೇತ್ರದಿಂದ 10 ಸಾವಿರ ಕಾರ್ಯಕರ್ತರನ್ನು ಸೇರಿಸಲು ತಿರ್ಮಾನಿಸಲಾಗಿದೆ ಎಂದು ಶಾಸಕ ಎಸ್.ಮುನಿರಾಜು ಹೇಳಿದರು.
ಬಾಗಲಗುಂಟೆಯ ಎನ್‌ಡಿಎ ಚುನಾವಣಾ ಕಚೇರಿಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ಸಮನ್ವಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 21ರಂದು ಎನ್‌ಡಿಎ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ, ವಿಧಾನಸಭಾ ವಿರೋಧ ಪಕ್ಷದ ನಾಯಕ ಅರ್.ಅಶೋಕ್, ಕೇಂದ್ರದ ಮಾಜಿ ಸಚಿವ ಸದಾನಂದಗೌಡ, ಅಭ್ಯರ್ಥಿ ಶೋಭಾ ಕರಂದ್ಲಾಜೆ ಸೇರಿದಂತೆ ಪಾಟಿದಾರ್ ಸಮಾಜದಲ್ಲಿ 4 ಗಂಟೆಯಿಂದ 5.30ರವರೆಗೂ ಸಭೆ ಸೇರಲಿದ್ದಾರೆ. ಚೊಕ್ಕಸಂದ್ರ ಹೆಬ್ಬಾಗಿಲಿನಿಂದ ಮಾಗಡಿ ರಸ್ತೆ, ಸುಂಕದಕಟ್ಟೆವರೆಗೂ 100 ಬೈಕ್ ಹಾಗೂ ಕಾರುಗಳ ಮುಖಾಂತರ ರೋಡ್ ಶೋ ಹಮ್ಮಿಕೊಳ್ಳಲಾಗಿದೆ ಎಂದರು.
22ರಂದು ಅಭ್ಯರ್ಥಿ ಶೋಭ ಕರಂದ್ಲಾಜೆ ಹೆಗ್ಗನಹಳ್ಳಿ, ರಾಜಗೋಪಾಲನಗರ, ಪೀಣ್ಯ ಕೈಗಾರಿಕಾ ಪ್ರದೇಶ, ಚೊಕ್ಕಸಂದ್ರದವರೆಗೂ ಪ್ರವಾಸ ನಡೆಸಲಿದ್ದಾರೆ. ಎರಡು ಪಕ್ಷಗಳ ಕಾರ್ಯಕರ್ತರು ಬೂತ್ ಮುಖಂಡರು, ಬೆಳಗ್ಗೆ ಮತ್ತು ಸಂಜೆ ತಲಾ 2 ಗಂಟೆ ಮನೆ ಮನೆ ಪ್ರಚಾರ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ ಮಾತನಾಡಿ, ನರೇಂದ್ರ ಮೋದಿ ಅವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಬೇಕು ಎಂಬ ನಿಟ್ಟಿನಲ್ಲಿ ಎರಡು ಪಕ್ಷಗಳು ಒಗ್ಗಟ್ಟಾಗಿ ಸೇರಿ ದಾಸರಹಳ್ಳಿ ಕ್ಷೇತ್ರದಿಂದ 1 ಲಕ್ಷಕ್ಕೂ ಅಧಿಕ ಮತಗಳಿಂದ ಎನ್‌ಡಿಎ ಅಭ್ಯರ್ಥಿ ಗೆಲ್ಲಿಸಬೇಕೆಂದು ಉಭಯ ಪಕ್ಷಗಳ ನಾಯಕರು ತೀರ್ಮಾನಿಸಿದ್ದಾರೆ. ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಅದನ್ನು ಬದಿಗೊತ್ತಿ ಅಭ್ಯರ್ಥಿಗಿಂತ ಮೋದಿ ಅವರನ್ನು ಪ್ರಧಾನಿ ಮಾಡುವುದೇ ನಮ್ಮ ಗುರಿ ಎಂದರು.
ಸಭೆಯಲ್ಲಿ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಎಂ.ಮುನಿಸ್ವಾಮಿ, ರಾಜ್ಯ ಹಿರಿಯ ಉಪಾಧ್ಯಕ್ಷ ಅಂದಾನಪ್ಪ, ಮಂಡಲ ಬಿಜೆಪಿ ಅಧ್ಯಕ್ಷ ಸೋಮಶೇಖರ್, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮರಿಸ್ವಾಮಿ, ಟಿ.ಎಸ್.ಗಂಗರಾಜು, ಕೃಷ್ಣಮೂರ್ತಿ ಭಾಗವಹಿಸಿದ್ದರು.