ಬಿಜೆಪಿ ಒಕ್ಕಲಿಗರ ಮುಗಿಸಲು ಎಚ್‌ಡಿಕೆ ಯತ್ನ: ಯೋಗಿ ಕಿಡಿ - ಬಿಜೆಪಿಗೆ ದಳ ಅನಿವಾರ್ಯವಲ್ಲ, ದಳಕ್ಕೆ ಬಿಜೆಪಿ ಅನಿವಾರ್ಯ

ಸಾರಾಂಶ

ರಾಜ್ಯದಲ್ಲಿ ತೀವ್ರ ರಂಗೇರಲಿರುವ ಮುಂಬರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಎನ್‌ಡಿಎ ಕೂಟದ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಬಿರುಕು ಮೂಡಿಸುವ ಸಾಧ್ಯತೆ ತಲೆದೋರುತ್ತಿದೆ.

ವಿಜಯ್ ಮಲಗಿಹಾಳ

 ಬೆಂಗಳೂರು : ರಾಜ್ಯದಲ್ಲಿ ತೀವ್ರ ರಂಗೇರಲಿರುವ ಮುಂಬರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಎನ್‌ಡಿಎ ಕೂಟದ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಬಿರುಕು ಮೂಡಿಸುವ ಸಾಧ್ಯತೆ ತಲೆದೋರುತ್ತಿದೆ.

‘ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಮತ್ತು ಬಿಜೆಪಿಯ ಒಕ್ಕಲಿಗ ನಾಯಕರನ್ನು ವ್ಯವಸ್ಥಿತವಾಗಿ ಮುಗಿಸಲು ಹೊರಟಿದ್ದಾರೆ’ ಎಂದು ಚನ್ನಪಟ್ಟಣ ಕ್ಷೇತ್ರದ ಪ್ರಬಲ ಆಕಾಂಕ್ಷಿಯೂ ಆಗಿರುವ ಬಿಜೆಪಿಯ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಗಂಭೀರವಾಗಿ ಆಪಾದಿಸಿದ್ದಾರೆ.

‘ಬಿಜೆಪಿಗೆ ಜೆಡಿಎಸ್‌ ಅನಿವಾರ್ಯವಲ್ಲ. ಆದರೆ, ಜೆಡಿಎಸ್‌ಗೆ ಬಿಜೆಪಿ ಅನಿವಾರ್ಯ ಎನ್ನುವುದನ್ನು ಮನಗಾಣಬೇಕು’ ಎಂದೂ ಅವರು ತೀಕ್ಷ್ಣವಾಗಿ ಹೇಳಿದ್ದಾರೆ.

ಸೋಮವಾರ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು ಜೆಡಿಎಸ್ ನಾಯಕ ಕುಮಾರಸ್ವಾಮಿ ನಡೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘ನಾನು ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಕುಮಾರಸ್ವಾಮಿ ನನಗೆ ಮೋಸ ಮಾಡಿದ ಮೇಲೆ ನಾನು ಸ್ಪರ್ಧಿಸಲೇಬೇಕು. ಬುಧವಾರ ಚನ್ನಪಟ್ಟಣದಲ್ಲಿ ಪಕ್ಷದ ಪ್ರಮುಖರ ಸಭೆ ಕರೆದಿದ್ದೇನೆ. ಅಲ್ಲಿ ನನ್ನ ಮುಂದಿನ ರಾಜಕೀಯ ಹೆಜ್ಜೆಯ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ’ ಎಂದು ತಿಳಿಸಿದರು.

ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಮತ್ತು ಬಿಜೆಪಿಯ ಒಕ್ಕಲಿಗ ಸಮುದಾಯದ ನಾಯಕರನ್ನು ಮುಗಿಸಬೇಕು ಎಂಬುದೇ ಕುಮಾರಸ್ವಾಮಿ ಅವರ ಮುಖ್ಯ ಉದ್ದೇಶವಾಗಿದೆ. ಮಂಡ್ಯದಲ್ಲಿ ಸುಮಲತಾ ಅಂಬರೀಷ್‌, ಹಾಸನದಲ್ಲಿ ಪ್ರೀತಂಗೌಡ, ಮೈಸೂರಿನಲ್ಲಿ ಪ್ರತಾಪ್ ಸಿಂಹ, ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಮುಗಿಸಿದ ಮೇಲೆ ಈಗ ರಾಮನಗರದಲ್ಲಿ ನನ್ನನ್ನು ಮುಗಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯೋಗೇಶ್ವರ್‌, ಈ ಸಮಸ್ಯೆ ನಗರ ಪ್ರದೇಶದಲ್ಲಿರುವ ಬಿಜೆಪಿಯ ಒಕ್ಕಲಿಗ ನಾಯಕರಾದ ಆರ್‌.ಅಶೋಕ್, ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರಿಗೆ ಎದುರಾಗುವುದಿಲ್ಲ. ಕುಮಾರಸ್ವಾಮಿ ಅವರಿಗೆ ನಗರ ಪ್ರದೇಶದಲ್ಲಿನ ಒಕ್ಕಲಿಗ ನಾಯಕರನ್ನು ಮುಗಿಸುವುದು ಸಾಧ್ಯವಿಲ್ಲ ಎಂಬುದು ಗೊತ್ತಿದೆ. ಆದರೆ, ಗ್ರಾಮೀಣ ಪ್ರದೇಶದ ಬಿಜೆಪಿಯ ಒಕ್ಕಲಿಗ ನಾಯಕರಿಗೆ ಈಗ ಸಮಸ್ಯೆ ಉಂಟಾಗಿದೆ. ಬಿಜೆಪಿ ನಾಶ ಮಾಡಿ ಜೆಡಿಎಸ್‌ ಗಟ್ಟಿಗೊಳಿಸಲು ಹೊರಟರೆ ಪಕ್ಷದ ನೂರಾರು ಆಕಾಂಕ್ಷಿಗಳ ರಾಜಕೀಯ ಭವಿಷ್ಯ ಏನು ಎಂದು ಹರಿಹಾಯ್ದರು.

ಇದು ಹೀಗೆಯೇ ಮುಂದುವರೆದರೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಕತೆ ಮುಗಿದೇ ಹೋಗುತ್ತದೆ. ನಾನು ಐದು ಸಲ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಇದರಲ್ಲಿ ಒಂದು ಬಾರಿ ಗೆದ್ದು, ನಾಲ್ಕು ಬಾರಿ ಸೋತಿದ್ದೇನೆ. ರಾಮನಗರ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆ ಇರುವ ಕ್ಷೇತ್ರ ಯಾವುದಾದರೂ ಇದ್ದರೆ ಅದು ಚನ್ನಪಟ್ಟಣ ಮಾತ್ರ. ಮಿತ್ರ ಪಕ್ಷವಾಗಿರುವ ಜೆಡಿಎಸ್ ನಾಯಕ ಕುಮಾರಸ್ವಾಮಿ ಈ ಬಗ್ಗೆ ಯೋಚಿಸಿ ಬಿಟ್ಟು ಕೊಡಬೇಕು ಎಂದು ಒತ್ತಾಯಿಸಿದರು.

ಚನ್ನಪಟ್ಟಣ ಕ್ಷೇತ್ರವನ್ನು ತಮ್ಮ ಜೆಡಿಎಸ್‌ಗೆ ಉಳಿಸಿಕೊಳ್ಳಲು ಕುಮಾರಸ್ವಾಮಿ ತೀರ್ಮಾನಿಸಿದ್ದಾರಂತೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯೋಗೇಶ್ವರ್‌, ಅವರು ತೀರ್ಮಾನ ಮಾಡಿದ್ದರೆ ಸಂತೋಷ. ಟಿಕೆಟ್ ಯಾರು ಬೇಕಾದರೂ ತೀರ್ಮಾನ ಮಾಡಬಹುದು. ಆದರೆ, ಫಲಿತಾಂಶ ತೀರ್ಮಾನ ಮಾಡುವುದು ಕ್ಷೇತ್ರದ ಜನರು ಮಾತ್ರ ಎಂದು ತಿರುಗೇಟು ನೀಡಿದರು.

ನೀವು ಸ್ಪರ್ಧೆ ಮಾಡುವುದು ನಿಶ್ಚಿತವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು. ನಾನು ಸ್ಪರ್ಧೆ ಮಾಡುವುದು ಖಚಿತ. ಬೇಡ ಎಂದರೂ ಜನ ಬಿಡಬೇಕಲ್ಲ. ಇಲ್ಲಿ ಪಕ್ಷ ದುರ್ಬಲವಾಗಿತ್ತು. ಇಷ್ಟೆಲ್ಲ ಹೋರಾಟ ಮಾಡಿ ಪಕ್ಷ‍ವನ್ನು ಕಟ್ಟಿ ಬೆಳೆಸಿದ್ದೇನೆ. ಎನ್‌ಡಿಎ ಕೂಟದಿಂದಲೇ ಸ್ಪರ್ಧಿಸುವುದು ನನ್ನ ಮೊದಲ ಆದ್ಯತೆ. ಟಿಕೆಟ್ ಸಿಗದಿದ್ದರೆ ಬೇರೆ ಹಾದಿ ತುಳಿಯುತ್ತೇನೆ ಎಂದರು.

ಇದೇ ವೇಳೆ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುವುದಿಲ್ಲ ಎಂದೂ ಯೋಗೇಶ್ವರ್ ಸ್ಪಷ್ಟಪಡಿಸಿದರು.

ಮಿತ್ರ ಪಕ್ಷ ತೆರವುಗೊಳಿಸಿದ ಕ್ಷೇತ್ರವಾಗಿದ್ದರಿಂದ ಜೆಡಿಎಸ್‌ ಪಕ್ಷವೇ ಸ್ಪರ್ಧಿಸಲಿ ಎಂಬ ಅಭಿಪ್ರಾಯವನ್ನು ಬಿಜೆಪಿಯ ವರಿಷ್ಠರು ವ್ಯಕ್ತಪಡಿಸಿದ್ದಾರೆ ಎಂಬ ಮಾಧ್ಯಮಗಳ ವರದಿಯನ್ನು ಪ್ರಸ್ತಾಪಿಸಿದ ಯೋಗೇಶ್ವರ್‌, ಮಿತ್ರ ಪಕ್ಷವಾಗಿದ್ದರೂ ಪರವಾಗಿಲ್ಲ. ಫ್ರೆಂಡ್ಲಿ ಫೈಟ್‌ ಆಗಲಿ. ಜೆಡಿಎಸ್ ಅಭ್ಯರ್ಥಿ ಕೂಡ ಸ್ಪರ್ಧಿಸಲಿ. ಬಿಜೆಪಿಯಿಂದ ನಾನು ಸ್ಪರ್ಧಿಸುವೆ. ಎನ್‌ಡಿಎ ಕೂಟದಲ್ಲದ್ದರೂ ಸ್ವತಂತ್ರವಾಗಿ ಬೆಳೆದುಕೊಂಡು ಹೋಗೋಣ. ಪರಸ್ಪರ ದ್ವೇಷ ಮಾಡುವುದು ಬೇಡ ಎಂದು ಸಲಹೆ ನೀಡಿದರು.

Share this article