ಸಿದ್ದರಾಮಯ್ಯ ಬೆನ್ನಿಗೆ ಹೈಕಮಾಂಡ್‌ : ಪ್ರಾಸಿಕ್ಯೂಷನ್‌ ವಿರುದ್ಧ ಸಿಎಂಗೆ ರಾಹುಲ್ ಅಭಯ

Published : Aug 24, 2024, 06:40 AM IST
Siddaramaiah

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ವಿರುದ್ಧ ರಾಜ್ಯಾದ್ಯಂತ ಹೋರಾಟ ರೂಪಿಸುವ ಜತೆಗೆ ರಾಷ್ಟ್ರ ಮಟ್ಟದಲ್ಲೂ ಪ್ರಬಲ ಹೋರಾಟ ನಡೆಸಲು ದೆಹಲಿಯಲ್ಲಿ ಶುಕ್ರವಾರ ನಡೆದ ಎಐಸಿಸಿ ವರಿಷ್ಠರ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಬೆಂಗಳೂರು :  ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ವಿರುದ್ಧ ರಾಜ್ಯಾದ್ಯಂತ ಹೋರಾಟ ರೂಪಿಸುವ ಜತೆಗೆ ರಾಷ್ಟ್ರ ಮಟ್ಟದಲ್ಲೂ ಪ್ರಬಲ ಹೋರಾಟ ನಡೆಸಲು ದೆಹಲಿಯಲ್ಲಿ ಶುಕ್ರವಾರ ನಡೆದ ಎಐಸಿಸಿ ವರಿಷ್ಠರ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಇದೇ ವೇಳೆ, ‘ಪ್ರಕರಣದಲ್ಲಿ ಹೈಕಮಾಂಡ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ಗಟ್ಟಿಯಾಗಿ ನಿಲ್ಲಲಿದೆ’ ಎಂದು ಖುದ್ದು ರಾಹುಲ್‌ ಗಾಂಧಿ ಅವರೇ ಭರವಸೆ ನೀಡಿದ್ದಾರೆ. ಯಾವುದೇ ಆತಂಕ ಇಲ್ಲದೆ ನಿರಾಳವಾಗಿ ಆಡಳಿತ ನಡೆಸುವಂತೆಯೂ ಸಲಹೆ ನೀಡಿದ್ದಾರೆ’ ಎಂದು ತಿಳಿದುಬಂದಿದೆ.

ದಿಲ್ಲಿಯಲ್ಲಿ ಸವಿಸ್ತಾರ ಚರ್ಚೆ:

ದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಹೈಕಮಾಂಡ್‌ ನಾಯಕರ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡೆಸಿದ ಸಭೆಯಲ್ಲಿ ಮುಡಾ (ಮೈಸೂರು ಅಭಿವೃದ್ಧಿ ಪ್ರಾಧಿಕಾರ) ಸೈಟ್‌ ಹಂಚಿಕೆ ಹಗರಣದ ಪ್ರಾಸಿಕ್ಯೂಷನ್‌ ಹಾಗೂ ಬಿಜೆಪಿ ಹಗರಣಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು.

ರಾಜ್ಯಪಾಲರು ಕಾನೂನು ಬಾಹಿರವಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂಬ ಆರೋಪದ ಬಗ್ಗೆ ಹಾಗೂ ಪ್ರತಿಪಕ್ಷಗಳ ನಾಯಕರ ಮೇಲಿನ ದೂರುಗಳ ಬಗ್ಗೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಬಗ್ಗೆಯೂ ಚರ್ಚಿಸಲಾಯಿತು.

ಈ ವೇಳೆ ರಾಜ್ಯಪಾಲರ ಕಾನೂನು ಬಾಹಿರ ಕ್ರಮ ಹಾಗೂ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ, ಜೆಡಿಎಸ್‌ ವಿರುದ್ಧ ರಾಜ್ಯಾದ್ಯಂತ ಪ್ರಬಲ ಹೋರಾಟ ರೂಪಿಸಿ ಎಂದು ರಾಹುಲ್‌ ಗಾಂಧಿ ಅವರು ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದರು.

‘ಇದು ಕೇವಲ ಕರ್ನಾಟಕ ರಾಜ್ಯಕ್ಕೆ ಸೀಮಿತವಾದ ವಿಷಯವಲ್ಲ. ಇದನ್ನು ರಾಜ್ಯಕ್ಕೆ ಸೀಮಿತಗೊಳಿಸಿದರೆ ಬೇರೆ ರಾಜ್ಯಗಳಲ್ಲೂ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಬಹುದು. ಹೀಗಾಗಿ ಇಂಡಿಯಾ ಒಕ್ಕೂಟದ ಜತೆ ಚರ್ಚಿಸಿ ರಾಷ್ಟ್ರಮಟ್ಟದಲ್ಲಿ ರಾಜ್ಯಪಾಲರ ಕ್ರಮದ ವಿರುದ್ಧ ಹೋರಾಟ ರೂಪಿಸೋಣ’ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ತಿಳಿದುಬಂದಿದೆ.

ಬಿಜೆಪಿ ಹಗರಣಗಳ ಬಗ್ಗೆ ಚರ್ಚೆ:

ಇನ್ನು ಬಿಜೆಪಿ ಅವಧಿಯಲ್ಲಿ ನಡೆದಿರುವ ಹಗರಣಗಳ ತನಿಖೆಯ ಸ್ಥಿತಿಗತಿಯನ್ನು ಮುಖ್ಯಮಂತ್ರಿಗಳು ವರಿಷ್ಠರಿಗೆ ವಿವರಿಸಿದರು. 25ಕ್ಕೂ ಹೆಚ್ಚು ಹಗರಣಗಳ ಬಗ್ಗೆ ಮಾಹಿತಿ ನೀಡಿದ್ದು, ಎಲ್ಲಾ ಪ್ರಕರಣಗಳಲ್ಲಿಯೂ ತನಿಖಾ ಸಂಸ್ಥೆಗಳನ್ನು ನೇಮಿಸಲಾಗಿದೆ ಎಂದು ತನಿಖೆಯ ಸ್ಥಿತಿಗತಿ ವಿವರಿಸಿದರು. ಈ ವೇಳೆ ತ್ವರಿತಗತಿಯಲ್ಲಿ ತನಿಖೆ ಪೂರ್ಣಗೊಳಿಸಿ ಬಿಜೆಪಿಗೆ ತಿರುಗೇಟು ನೀಡುವಂತೆ ವರಿಷ್ಠರು ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಪಂಚ ಗ್ಯಾರಂಟಿಗಳ ಮೇಲಿನ ದಾಳಿ- ಸುರ್ಜೆವಾಲ:

ಸಭೆ ಬಳಿಕ ಸುದ್ದಿಗಾರರರೊಂದಿಗೆ ಮಾತನಾಡಿದ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು, ‘ಕೇಂದ್ರ ಬಿಜೆಪಿ ಸರ್ಕಾರವು ಕರ್ನಾಟಕದಲ್ಲಿ ರಾಜ್ಯಪಾಲರನ್ನು ಕೈಗೊಂಬೆ ಮಾಡಿಕೊಂಡು ರಾಜಕಾರಣ ಮಾಡುತ್ತಿದೆ. ಇದು ಮುಖ್ಯಮಂತ್ರಿಗಳ ಮೇಲಿನ ದಾಳಿಯಲ್ಲ. ಬಡವರಿಗೆ ನೀಡುತ್ತಿರುವ 5 ಗ್ಯಾರಂಟಿಗಳ ಮೇಲಿನ ದಾಳಿ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೂಲಕ ರಾಜ್ಯಪಾಲರನ್ನು ಬಳಸಿಕೊಂಡು ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆ ಸೃಷ್ಟಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ ನಾವೆಲ್ಲ ಮುಖ್ಯಮಂತ್ರಿ ಬೆನ್ನಿಗೆ ನಿಂತಿದ್ದೇವೆ’ ಎಂದರು.

‘ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಆದೇಶ ನೀಡಿರುವ ರಾಜ್ಯಪಾಲರು, ವರ್ಷದ ಹಿಂದಿನ ಬಿಜೆಪಿ-ಜೆಡಿಎಸ್‌ನವರ ಮೇಲಿನ ಪ್ರಕರಣಗಳ ಕುರಿತು ತನಿಖೆಗೆ ಯಾಕೆ ಸಮ್ಮತಿ ನೀಡಿಲ್ಲ? ಸಚಿವ ಸಂಪುಟದ ನಿರ್ಣಯದ ಕುರಿತು ಯಾಕೆ ಉತ್ತರ ನೀಡಿಲ್ಲ’ ಎಂದು ಸುರ್ಜೆವಾಲ ಪ್ರಶ್ನಿಸಿದರು.

‘ಮುಡಾ ವಿಚಾರದಲ್ಲಿ ಮುಖ್ಯಮಂತ್ರಿಗಳ ಜತೆಗೆ ನಾವೆಲ್ಲರೂ ಒಂದಾಗಿ ನಿಂತಿದ್ದೇವೆ. ಇದು ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ಅವರ ಮೇಲೆ ನಡೆದ ದಾಳಿಯಲ್ಲ, ಬದಲಾಗಿ ಕರ್ನಾಟಕದ ಜನರ ಮೇಲಿನ ದಾಳಿ’ ಎಂದು ಕಿಡಿಕಾರಿದರು.

 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು
ಮತಚೋರಿ ಬಗ್ಗೆ ದಿಲ್ಲೀಲಿ ಕೈ ನಾಯಕರ ರಣಕಹಳೆ