ಪಾಂಡವಪುರದ ಆರ್‌ಎಸ್‌ಎಸ್‌ ಕಚೇರಿಗೆ ಪೊಲೀಸರು ನುಗ್ಗಿದಕ್ಕೆ ಹಿಂದೂ ಸಂಘಟನೆಗಳ ಆಕ್ರೋಶ

KannadaprabhaNewsNetwork |  
Published : Sep 17, 2024, 12:46 AM ISTUpdated : Sep 17, 2024, 04:32 AM IST
Rajasthan rss

ಸಾರಾಂಶ

ಪಾಂಡವಪುರದಲ್ಲಿ ಆರ್‌ಎಸ್‌ಎಸ್‌ ಕಚೇರಿಗೆ ಪೊಲೀಸರು ನುಗ್ಗಿ ವಿಎಚ್‌ಪಿ ಮುಖಂಡರನ್ನು ವಶಕ್ಕೆ ಪಡೆಯಲು ಯತ್ನಿಸಿದ ಘಟನೆ ನಡೆದಿದ್ದು, ಈ ಬೆಳವಣಿಗೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ.  

 ಮಂಡ್ಯ/ ಪಾಂಡವಪುರ :  ಪಾಂಡವಪುರದ ಆರ್‌ಎಸ್‌ಎಸ್‌ ಕಚೇರಿಗೆ ಭಾನುವಾರ ತಡರಾತ್ರಿ ಪೊಲೀಸರು ಏಕಾಏಕಿ ನುಗ್ಗಿ ವಿಎಚ್‌ಪಿ ಮುಖಂಡರನ್ನು ವಶಕ್ಕೆ ಪಡೆಯಲು ಯತ್ನಿಸಿದ್ದು, ಖಾಕಿಪಡೆಯ ವರ್ತನೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ಸೋಮವಾರ ಪ್ರತಿಭಟನೆ ನಡೆಸಿವೆ.

ಮಂಗಳೂರಿನಿಂದ ಆಗಮಿಸಿದ್ದ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಮುಖಂಡರಾದ ಪುನೀತ್‌ ಅತ್ತಾವರ್ ಮತ್ತು ಶರಣು ಪಂಪ್‌ವೆಲ್ ಅವರು ಭಾನುವಾರ ರಾತ್ರಿ ಆರ್‌ಎಸ್‌ಎಸ್‌ ಕಚೇರಿಯಲ್ಲಿ ಚರ್ಚೆ ನಡೆಸುತ್ತಿದ್ದರು. ನಾಗಮಂಗಲದ ಗಲಭೆ ಕುರಿತು ಚರ್ಚೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಏಕಾಏಕಿ ಕಚೇರಿಗೆ ನುಗ್ಗಿದ ಪೊಲೀಸರು ಪುನೀತ್‌ ಅವರನ್ನು ವಶಕ್ಕೆ ಪಡೆಯಲು ಮುಂದಾದರು. ಇದರಿಂದ ಸಿಟ್ಟಿಗೆದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೊಲೀಸ್‌ ವಾಹನಕ್ಕೆ ಅಡ್ಡಹಾಕಿದರು. ಪೊಲೀಸರು ಮತ್ತು ಹಿಂದೂ ಕಾರ್ಯಕರ್ತರ ನಡುವೆ ತೀವ್ರ ತಳ್ಳಾಟ, ನೂಕಾಟ, ಮಾತಿನ ಚಕಮಕಿ ನಡೆಯಿತು.

ಯಾವುದೇ ನೋಟಿಸ್ ಅಥವಾ ಬಂಧನದ ವಾರೆಂಟ್ ಇಲ್ಲದೆ ಕಚೇರಿಗೆ ನುಗ್ಗಿದ್ದು, ಯಾವ ಅಪರಾಧ ಮಾಡಿದ್ದಾರೆಂದು ಕರೆದೊಯ್ಯುತ್ತಿದ್ದೀರಿ? ಪೊಲೀಸರಿಗೆ ತಾಕತ್ತಿದ್ದರೆ ನಾಗಮಂಗಲದಲ್ಲಿ ಪೆಟ್ರೋಲ್ ಬಾಂಬ್ ಹೇಗೆ ಬಂತು, ತಲ್ವಾರ್ ಹೇಗೆ ಝಳಪಿಸಿದವು ಎನ್ನುವುದನ್ನು ಪತ್ತೆ ಮಾಡಲಿ ಎಂದು ಹಿಂದೂ ಕಾರ್ಯಕರ್ತರು ಪೊಲೀಸರನ್ನು ತರಾಟೆ ತೆಗೆದುಕೊಂಡರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಿ, ಪುನೀತ್‌ ಅವರನ್ನು ನಾಗಮಂಗಲಕ್ಕೆ ಹೋಗದಂತೆ ತಡೆದು ಮಂಗಳೂರಿನತ್ತ ತೆರಳುವುದಕ್ಕೆ ಸೂಚಿಸಿದರು.

ಪೊಲೀಸರು ಆರ್‌ಎಸ್‌ಎಸ್‌ ಕಚೇರಿಗೆ ಆಗಮಿಸುವ ಮೊದಲೇ ಶರಣು ಪಂಪ್‌ವೆಲ್‌ ಅವರು ಪಾಂಡವಪುರದಿಂದ ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು.

ಪೊಲೀಸ್‌ ಠಾಣೆ ಎದುರು ಹಿಂದೂಗಳ ಪ್ರತಿಭಟನೆ: ಆರ್‌ಎಸ್‌ಎಸ್ ಕಚೇರಿಗೆ ಪೊಲೀಸರು ನುಗ್ಗಿದನ್ನು ಖಂಡಿಸಿ ಬಜರಂಗದಳ, ಹಿಂದೂ ಜಾಗರಣ ವೇದಿಕೆ, ಆರ್‌ಎಸ್‌ಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪಾಂಡವಪುರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ಡಿವೈಎಸ್ಪಿ ಮುರಳಿ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ವಿವೇಕನಂದ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ಇಬ್ಬರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ, ಪ್ರತಿಭಟನಾ ಸ್ಥಳದಲ್ಲಿಯೇ ಅಡುಗೆ ಮಾಡಿ ಮಧ್ಯಾಹ್ನದ ಊಟ ಮಾಡಿದರು. ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ, ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಪ್ರತಿಭಟನೆಗೆ ಸಾಥ್ ನೀಡಿದರು.

ಡಿವೈಎಸ್ಪಿ, ಎಸ್‌ಐ ವರ್ಗಾವಣೆ: ಆರ್‌ಎಸ್‌ಎಸ್‌ ಕಚೇರಿಗೆ ಶೂ ಧರಿಸಿ ನುಗ್ಗಿದ್ದಾರೆಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡವಪುರ ಡಿವೈಎಸ್ಪಿ ಮುರಳಿ ಹಾಗೂ ಎಸ್‌ಐ ವಿವೇಕಾನಂದ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

 ಪ್ರಕರಣ ಸಂಬಂಧ ಸುಮೋಟ್ ಕೇಸ್ ದಾಖಲಿಸಿ ವಿಚಾರಣೆ ನಡೆಸಲಾಗುತ್ತದೆ. ತನಿಖೆಗೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದಲ್ಲಿ ತಂಡ ರಚಿಸಲಾಗುವುದು. ತನಿಖೆ ಮುಗಿಯುವವರೆಗೆ ಡಿವೈ‌ಎಸ್‌ಪಿ ಹಾಗೂ ಎಸ್‌ಐ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರಿಗೆ ತಿಳಿಸಿದ ಬಳಿಕ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಕೈ ಬಿಟ್ಟಿದ್ದಾರೆ.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ