ಮಂಡ್ಯದಲ್ಲಿ ಎಚ್‌.ಡಿ.ಕುಮಾರಸ್ವಾಮಿಗೆ ಪ್ರಚಂಡ ದಿಗ್ವಿಜಯ

KannadaprabhaNewsNetwork |  
Published : Jun 05, 2024, 12:30 AM ISTUpdated : Jun 05, 2024, 04:41 AM IST
4ಕೆಎಂಎನ್‌ಡಿ-2ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಜಯಭೇರಿ ಬಾರಿಸಿದ ಜೆಡಿಎಸ್‌-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಪ್ರಮಾಣಪತ್ರ ನೀಡಿದರು. | Kannada Prabha

ಸಾರಾಂಶ

ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗುವಂತೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ಪಟ್ಟು ಹಿಡಿದು ಕರೆತಂದ ಸ್ಥಳೀಯ ಜೆಡಿಎಸ್ ಮಾಜಿ ಶಾಸಕರು ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಸಂಘಟನಾತ್ಮಕ ಹೋರಾಟ ನಡೆಸಿ ವಿಜಯಮಾಲೆ ತೊಡಿಸಿದ್ದಾರೆ.  

 ಮಂಡ್ಯ :  ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಚಂಡ ದಿಗ್ವಿಜಯ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಮಣಿಸುವುದರೊಂದಿಗೆ 2019 ರಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲಿನ ಸೇಡನ್ನು ತೀರಿಸಿಕೊಂಡಿದ್ದಾರೆ. ಜೊತೆಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್‌ನ್ನು ಹೀನಾಯವಾಗಿ ಮಣಿಸುವ ಮೂಲಕ ಕೈ ನಾಯಕರಿಗೆ ಮುಖಭಂಗ ಉಂಟುಮಾಡಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯೊಳಗೆ 7 ಮಂದಿ ಜೆಡಿಎಸ್ ಶಾಸಕರು, 3 ಮಂದಿ ವಿಧಾನ ಪರಿಷತ್ ಸದಸ್ಯರಿದ್ದು, ಜೊತೆಗೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರೂ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದ ಸುಮಲತಾ ವಿರುದ್ಧ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಚುನಾವಣೆಯಲ್ಲಿ ಪರಿಸ್ಥಿತಿ ಅದಕ್ಕೆ ವಿರುದ್ಧವಾಗಿತ್ತು.6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರಿದ್ದರೂ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಎದುರು ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ. ಅಲ್ಲಿಗೆ ಆ ಮಾದರಿಯ ಸೋಲಿನ ಸೇಡನ್ನೂ ಮಂಡ್ಯ ನೆಲದಲ್ಲೇ ಎಚ್‌ಡಿಕೆ ತೀರಿಸಿಕೊಂಡಿರುವುದು ಮತ್ತೊಂದು ವಿಶೇಷವಾಗಿದೆ.

ಜೆಡಿಎಸ್ ಚೇತರಿಕೆ:

2019 ರ ಲೋಕಸಭಾ ಚುನಾವಣೆ ಸೋಲಿನಿಂದ ಜಿಲ್ಲೆಯಲ್ಲಿ ಆರಂಭಗೊಂಡಿದ್ದ ಜೆಡಿಎಸ್ ಕುಸಿತ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆ, ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಹಾಗೂ 2024 ರ ವಿಧಾನಸಭಾ ಚುನಾವಣೆಯವರೆಗೂ ಮುಂದುವರೆದಿತ್ತು. ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್ ಗೆಲುವಿನ ನಾಗಾಲೋಟದಲ್ಲಿತ್ತು. ಆದರೆ, 2024 ರ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ವಿಜಯಪತಾಕೆ ಹಾರಿಸುವುದರೊಂದಿಗೆ ಜಿಲ್ಲೆಯೊಳಗೆ ಮುಳುಗುತ್ತಿದ್ದ ಜೆಡಿಎಸ್ ಹಡಗಿನ ನಾವಿಕನಾಗಿ ಮತ್ತೆ ಮೇಲೆತ್ತಿ ನಿಲ್ಲಿಸಿದ್ದಾರೆ.

ಕಾಂಗ್ರೆಸ್ ಎದುರಿಸಲು ಸಮರ್ಥ ನಾಯಕ:

ಜಿಲ್ಲಾ ಮಟ್ಟದಲ್ಲಿ ಸಮರ್ಥ ನಾಯಕತ್ವವೇ ಇಲ್ಲದೆ ಕಂಗಾಲಾಗಿದ್ದ ಜೆಡಿಎಸ್ ನಾಯಕರಿಗೆ ಕುಮಾರಸ್ವಾಮಿ ಈಗ ಹೊಸ ಶಕ್ತಿಯಾಗಿದ್ದಾರೆ. ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಜಿಲ್ಲಾ ಮಟ್ಟದ ಕಾಂಗ್ರೆಸ್ ನಾಯಕರನ್ನು ಎದುರಿಸುವುದಕ್ಕೆ ಸಮರ್ಥ ನಾಯಕ ಸಿಕ್ಕಂತಾಗಿದ್ದು, ಅವರೆಲ್ಲರಿಗೂ ಕುಮಾರಸ್ವಾಮಿ ಗೆಲುವು ನವ ಉತ್ಸಾಹ, ಚೈತನ್ಯವನ್ನು ತಂದುಕೊಟ್ಟಿದೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಜಿಲ್ಲೆಯೊಳಗೆ ಕೇವಲ ಒಂದು ಸ್ಥಾನ ಪಡೆದು 6  ಕ್ಷೇತ್ರಗಳಲ್ಲಿದ್ದ ಪ್ರಭಾವಿ ನಾಯಕರೆಲ್ಲರೂ ಅಧಿಕಾರ ಕಳೆದುಕೊಂಡಿದ್ದ ಸಮಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಈಗಿನ ಗೆಲುವು ಜೆಡಿಎಸ್ ಮುಖಂಡರು-ಕಾರ್ಯಕರ್ತರಲ್ಲಿ ಭರವಸೆಯ ಆಶಾಕಿರಣ ಮೂಡಿಸಿದೆ.

ಎಚ್.ಡಿ. ಕುಮಾರಸ್ವಾಮಿ ಅವರನ್ನು ಹೊರತುಪಡಿಸಿ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದಿಂದ ಬೇರೆ ಯಾರೇ ಅಭ್ಯರ್ಥಿಯಾಗಿದ್ದರೂ ಗೆಲುವು ಇಷ್ಟೊಂದು ಸುಲಭ ತುತ್ತಾಗುತ್ತಿರಲಿಲ್ಲ. ಕಾಂಗ್ರೆಸ್‌ಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗುತ್ತಿತ್ತು. ಜೆಡಿಎಸ್ ನಾಯಕರ ಒಗ್ಗಟ್ಟು ಜೊತೆಗೆ ಬಿಜೆಪಿ ಪಕ್ಷದವರ ಪ್ರಾಮಾಣಿಕ ಶ್ರಮದಿಂದಾಗಿ ಎಚ್.ಡಿ. ಕುಮಾರಸ್ವಾಮಿ ಭಾರೀ ಮತಗಳ ಅಂತರದಿಂದ ಗೆಲ್ಲುವುದರೊಂದಿಗೆ ಜಿಲ್ಲೆಯೊಳಗೆ ಜೆಡಿಎಸ್ ಅಸ್ತಿತ್ವ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿದ್ದಾರೆ.

ಎಚ್‌ಡಿಕೆ ನಾಮಬಲಕ್ಕೆ ಜನರು ಫಿದಾ:

ಎಚ್.ಡಿ. ಕುಮಾರಸ್ವಾಮಿ ಅವರ ನಾಮಬಲಕ್ಕೆ ಜಿಲ್ಲೆಯ ಜನರು ಸಂಪೂರ್ಣವಾಗಿ ಫಿದಾ ಆಗಿದ್ದಾರೆ. ಚುನಾವಣೆ ಘೋಷಣೆಯಾದ ಸಮಯದಲ್ಲೇ ಹೃದಯ ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಕುಮಾರಸ್ವಾಮಿ ಅವರು ಆರೋಗ್ಯದ ದೃಷ್ಟಿಯಿಂದ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ನಡೆದ ಸಭೆಗಳಿಗಷ್ಟೇ ಬಂದು ಪ್ರಚಾರ ನಡೆಸಿಹೋಗಿದ್ದರು. ಹೋಬಳಿ, ಗ್ರಾಮ ಪಂಚಾಯ್ತಿ ಮಟ್ಟದ ಚುನಾವಣಾ ಪ್ರಚಾರದ ಜವಾಬ್ದಾರಿಯನ್ನು ಸ್ಥಳೀಯ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ನಾಯಕರು, ಮುಖಂಡರು-ಕಾರ್ಯಕರ್ತರು ವಹಿಸಿಕೊಂಡಿದ್ದರು. ಹೀಗಾಗಿ ಕೇವಲ ಕುಮಾರಸ್ವಾಮಿ ನಾಮಬಲಕ್ಕೆ ಜಿಲ್ಲೆಯ ಮತದಾರರು ಮನಸೋತು ಅವರ ಪರವಾಗಿ ಮತ ಚಲಾಯಿಸಿ ವಿಜಯಮಾಲೆ ತೊಡಿಸಿರುವುದು ಅಚ್ಚರಿಯ ಬೆಳವಣಿಗೆ ಎನ್ನಬಹುದು.

ಸ್ಥಳೀಯರ ಸಂಘಟನಾತ್ಮಕ ಹೋರಾಟ:

ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗುವಂತೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ಪಟ್ಟು ಹಿಡಿದು ಕರೆತಂದ ಸ್ಥಳೀಯ ಜೆಡಿಎಸ್ ಮಾಜಿ ಶಾಸಕರು ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಸಂಘಟನಾತ್ಮಕ ಹೋರಾಟ ನಡೆಸಿ ವಿಜಯಮಾಲೆ ತೊಡಿಸಿದ್ದಾರೆ. ನಾಯಕನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದರೊಂದಿಗೆ ಎಲ್ಲರೂ ಕುಮಾರಸ್ವಾಮಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಿಖಿಲ್ ಕುಮಾರಸ್ವಾಮಿ ಕೂಡ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾಗಿ ಜಿಲ್ಲೆಯ ಎಲ್ಲಾ ಹೋಬಳಿ ವ್ಯಾಪ್ತಿಯಲ್ಲಿ ಸಂಚರಿಸಿ ಪ್ರಚಾರ ನಡೆಸುವುದರೊಂದಿಗೆ ತಂದೆಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಅಲ್ಲಗಳೆಯುವಂತಿಲ್ಲ

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ