ನಾನು ಗೆಲ್ಲುವ ಕುದುರೆ, ಗೆಲ್ಲುವ ಕುದುರೆ ಮೇಲೆ ಎಲ್ಲರ ಸವಾರಿ: ಪ್ರತಾಪ್‌ ಸಿಂಹ

KannadaprabhaNewsNetwork | Updated : Mar 12 2024, 08:10 AM IST

ಸಾರಾಂಶ

ನನಗೆ ಮತ್ತೆ ಟಿಕೆಟ್‌ ಸಿಗಲಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ನಾನು ಗೆಲ್ಲುವ ಕುದುರೆ, ಹಾಗಾಗಿ ಎಲ್ಲರೂ ಗೆಲ್ಲುವ ಕುದುರೆ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಲೋಕಸಭೆ ಚುನಾವಣೆ ಟಿಕೆಟ್ ಕೈತಪ್ಪಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಸೋಮವಾರ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ ಅವರು, 2014ರಲ್ಲಿ ನಾನು ಒಬ್ಬ ಪತ್ರಕರ್ತ. ಮೈಸೂರು ಚುನಾವಣೆ ಬಗ್ಗೆ ಯೋಚನೆ ಮಾಡುವ ಸ್ಥಿತಿಯಲ್ಲೂ ನಾನು ಇರಲಿಲ್ಲ. 

ಆಗ ಸಂಘದ ಆಶೀರ್ವಾದ, ಪಕ್ಷದ ಬಲದಿಂದ ಗೆದ್ದಿದ್ದೆ ಎಂದರು.ಮೋದಿ ಇಲ್ಲದೆ ಪ್ರತಾಪ್‌ ಸಿಂಹ ಶೂನ್ಯ. ನಾನು ಮೊದಲ ಬಾರಿಯೂ ಮೋದಿ ಹೆಸರಿನಲ್ಲಿ ಗೆದ್ದೆ, ಎರಡನೇ ಬಾರಿಯೂ ಅವರ ಹೆಸರಿನಲ್ಲೇ ಗೆದ್ದೆ, ಮೂರನೇ ಬಾರಿಯೂ ಅವರ ಹೆಸರಿನಲ್ಲೇ ಗೆಲ್ಲುತ್ತೇನೆ. 

ಪಕ್ಷದ ವಿಶ್ವಾಸ ನನ್ನ ಮೇಲಿದೆ. ನನಗೆ ಮತ್ತೊಂದು ಅವಕಾಶ ಸಿಗುತ್ತದೆ. ಮೋದಿ ಅವರ ಪುಸ್ತಕ ಬರೆದವನು ನಾನು. ನನ್ನ ಬಗ್ಗೆ ಮೋದಿ ಅವರಿಗೆ ಗೊತ್ತಿದೆ. ಮೋದಿ ಅವರು ನನಗೆ ಆಶೀರ್ವಾದ ಮಾಡುತ್ತಾರೆ ಎಂದು ಪ್ರತಾಪ್‌ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಲ್ಲಿ ಸೋಲಿನ ಟಿಕೆಟ್ ಗಾಗಿಯೇ ಹೊಡೆದಾಟವಿದೆ. ಇನ್ನು ಬಿಜೆಪಿಯಲ್ಲಿ ಗೆಲುವಿನ ಟಿಕೆಟ್‌ಗಾಗಿ ಪೈಪೋಟಿ ಇರಬಾರದು ಅಂದರೆ ಹೇಗೆ? ಗೆಲ್ಲುವ ಕುದರೆ ಏರಲು ಎಲ್ಲರೂ ಪ್ರಯತ್ನ ಪಡುತ್ತಾ ಇರುತ್ತಾರೆ. 

ಮೋದಿ ಅವರ ಕೃಪೆಯಿಂದ ಕೆಲಸ ಮಾಡಿ, ಮೈಸೂರಿನಲ್ಲಿ ಬಿಜೆಪಿ ಗೆಲ್ಲುವ ಸ್ಥಿತಿಯನ್ನು ನಾನು ಮೂಡಿಸಿದ್ದೇನೆ. ನನಗೆ ತಾಯಿ ಚಾಮುಂಡಿ, ಕಾವೇರಿ ತಾಯಿ, ಮೋದಿಯವರ ಆಶೀರ್ವಾದ ಇದೆ. ನನಗೇ ಟಿಕೆಟ್ ಸಿಗಲಿದ್ದು, ಮೂರನೇ ಬಾರಿಯೂ ಗೆಲುವು ಸಾಧಿಸುತ್ತೇನೆ ಎಂದು ತಿಳಿಸಿದರು.

ಚುನಾವಣೆ ಅಂದರೆ ಆಕಾಂಕ್ಷಿಗಳು ಇರುತ್ತಾರೆ. ಯಾರಿಗೆ ಟಿಕೆಟ್‌ ನೀಡಬೇಕೆಂಬುದನ್ನು ಅಂತಿಮವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷರು, ನಮ್ಮ ಹೈಕಮಾಂಡ್ ಎಲ್ಲವನ್ನೂ ತೀರ್ಮಾನ ಮಾಡುತ್ತದೆ. 

ಒಳ್ಳೆಯ ಕೆಲಸ ಮಾಡಿದ್ದೇನೆ, ಪಕ್ಷ ನನ್ನ ಕೈ ಬಿಡುವುದಿಲ್ಲ ಎಂಬ ಅಚಲ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share this article