ಮುಸ್ಲಿಂ ಮಹಾನಾಯಕ ನಾನಲ್ಲ, ದ್ರೋಹಿಗಳ ಹೆಸರೇಳಿ : ಜಮೀರ್‌

Published : Apr 15, 2026, 10:35 AM IST
Zameer Ahmed Khan

ಸಾರಾಂಶ

‘ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ನನ್ನ ಜವಾಬ್ದಾರಿಯನ್ನು ನಾನು ನಿಭಾಯಿಸಿದ್ದೇನೆ. ಆರೋಪ ಮಾಡುವವರು ಪಕ್ಷದ ವಿರುದ್ಧ ಯಾರು ಷಡ್ಯಂತ್ರ ಮಾಡಿದ್ದಾರೆ? ಯಾರು ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಹೆಸರು ಹೇಳಲಿ’ ಎಂದು ಸಚಿವ ಜಮೀರ್‌ ಅಹ್ಮದ್ ಖಾನ್‌ ಸವಾಲು ಹಾಕಿದ್ದಾರೆ.

ಬೆಂಗಳೂರು :  ‘ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ನನ್ನ ಜವಾಬ್ದಾರಿಯನ್ನು ನಾನು ನಿಭಾಯಿಸಿದ್ದೇನೆ. ಆರೋಪ ಮಾಡುವವರು ಪಕ್ಷದ ವಿರುದ್ಧ ಯಾರು ಷಡ್ಯಂತ್ರ ಮಾಡಿದ್ದಾರೆ? ಯಾರು ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಹೆಸರು ಹೇಳಲಿ’ ಎಂದು ಸಚಿವ ಜಮೀರ್‌ ಅಹ್ಮದ್ ಖಾನ್‌ ಸವಾಲು ಹಾಕಿದ್ದಾರೆ. ಅಲ್ಲದೆ, ‘ಮುಸ್ಲಿಂ ಮಹಾನಾಯಕ ನಾನಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಅಬ್ದುಲ್‌ ಜಬ್ಬಾರ್‌ ಅವರಿಗೇ ಟಿಕೆಟ್‌ ನೀಡಿ ಎಂದು ಹೇಳಿಲ್ಲ. ಜಬ್ಬಾರ್‌ ಜೊತೆಗೆ ಏಳು ಮಂದಿ ಮುಸ್ಲಿಮರು ಅರ್ಜಿ ಹಾಕಿದ್ದಾರೆ. ಮುಸ್ಲಿಮರಲ್ಲಿ ಯಾರಿಗಾದರೂ ಕೊಡಿ, ಗೆಲ್ಲಿಸಿಕೊಂಡು ಬರಲಿಲ್ಲ ಎಂದರೆ ರಾಜೀನಾಮೆ ನೀಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದ ಸಭೆಯಲ್ಲೇ ಹೇಳಿದ್ದೇನೆ. ಟಿಕೆಟ್‌ ಸಮರ್ಥ್‌ಗೆ ನೀಡಿದ ಬಳಿಕವೂ ನನ್ನ ಜವಾಬ್ದಾರಿ ನಿಭಾಯಿಸಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

‘ನಾನು ಯಾರೋ ಹೇಳಿದಂತೆ ಅಲ್ಪಸಂಖ್ಯಾತರ ಸುಪ್ರೀಂ ನಾಯಕನಾಗಲು ಹೊರಟಿಲ್ಲ, ನಾನೊಬ್ಬ ಸೇವಕ ಅಷ್ಟೇ. ನನಗೆ ಅಂತಹ ಯಾವುದೇ ಆಸೆ, ಉದ್ದೇಶಗಳೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ರಾಜಕೀಯದಲ್ಲಿ ಷಡ್ಯಂತ್ರ ಸಹಜ:

ಸಚಿವ ಸ್ಥಾನಕ್ಕಾಗಿ ನಿಮ್ಮ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ, ‘ರಾಜಕೀಯದಲ್ಲಿ ಇದೆಲ್ಲ ಸಹಜ. ಎಲ್ಲರಿಗೂ ಮಂತ್ರಿಯಾಗುವ ಆಸೆ ಸಹಜ. ಅದಕ್ಕಾಗಿ ಎಲ್ಲರೂ ಪ್ರಯತ್ನ ಮಾಡುತ್ತಾರೆ. ನಾನು ಮಂತ್ರಿ ಆಗಬೇಕು ಎಂಬ ಆಸೆ ಇತ್ತು, ಮಂತ್ರಿ ಆಗಿದ್ದೇನೆ ಎಂದರು. ಜತೆಗೆ, ಷಡ್ಯಂತ್ರದ ಬಗ್ಗೆ ಆರೋಪಿಸಿದವರು ಸ್ಥಳೀಯ ನಾಯಕರಿಗೆ ಹೇಳಿದ್ದಾರಾ ಅಥವಾ ಯಾರಿಗೆ ಹೇಳಿದ್ದಾರೆ ಗೊತ್ತಿಲ್ಲ.‌ ಯಾರು ಷಡ್ಯಂತ್ರ ಮಾಡಿದ್ದಾರೆ ಎಂದು ಹೆಸರು ಹೇಳಬೇಕಲ್ಲವೇ’ ಎಂದು ಪ್ರಶ್ನಿಸಿದರು.

ದಾವಣಗೆರೆಯಲ್ಲಿ ಮುಸಲ್ಮಾನರ ಅಸಮಾಧಾನ ಇದ್ದಿದ್ದು ನಿಜ. ಮುಸ್ಲಿಮರಿಗೆ ಟಿಕೆಟ್ ಕೇಳಿದರೂ ನೀಡಿಲ್ಲ ಎಂಬ ಅಸಮಾಧಾನ ಇತ್ತು. ಅದು ಸರಿ ಹೋಗಿ ಪಕ್ಷದ ಅಭ್ಯರ್ಥಿಯಾಗಿ ಸಮರ್ಥ್ ಅವರಿಗೆ ಅವಕಾಶ ಕೊಟ್ಟರು. ನನಗೆ ಕೇರಳದಲ್ಲಿ ಸ್ಟಾರ್‌ ಪ್ರಚಾರಕನ ಜವಾಬ್ದಾರಿ ನೀಡಿದ್ದರು. ಆದರೂ ದಾವಣಗೆರೆಗೆ ಬಂದು ಮಲ್ಲಿಕಾರ್ಜುನ ಮನೆಯಲ್ಲಿ ಊಟ ಮಾಡಿ ಸುದ್ದಿಗೋಷ್ಠಿ ನಡೆಸಿ ಹೋಗಿದ್ದೇನೆ. ಶೇ.100 ರಷ್ಟು ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಮಲ್ಲಿಕಾರ್ಜುನ್‌ ಮನೆಗೆ ಬಂದಿಲ್ಲವೆಂದು ಜಬ್ಬಾರ್‌ ಬೇಸರ:

ದಾವಣಗೆರೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಮಲ್ಲಿಕಾರ್ಜುನ್ ಅವರು ನಮ್ಮ ಪಕ್ಕದ ಮನೆಗೆ ಬಂದು ನಮ್ಮ ಮನೆಗೆ ಬಂದಿಲ್ಲ ಎಂದು ಜಬ್ಬಾರ್ ಬೇಜಾರಾಗಿದ್ದರು. ಜೊತೆಗೆ ಅವರ ಆರೋಗ್ಯ ಕೂಡ ಚೆನ್ನಾಗಿರಲಿಲ್ಲ‌ ಅಂತ ಮಾಧ್ಯಮಕ್ಕೂ ಹೇಳಿದ್ದಾರೆ. ನಾನು ಕೂಡ ಜಬ್ಬಾರ್ ಜೊತೆ ಮಾತನಾಡಿ, ಹೋಗಿ ಕೆಲಸ ಮಾಡಿ ಅಂತ ಹೇಳಿದ್ದೆ ಎಂದು ತಿಳಿಸಿದರು.

ಸಿಎಂ ಅವರೊಂದಿಗೆ ಮಾತನಾಡುತ್ತೇನೆ: ಜಮೀರ್

ಅಬ್ದುಲ್‌ ಜಬ್ಬಾರ್‌ ರಾಜೀನಾಮೆ ನೀಡಿದಾಗ ನಾನು ಇರಲಿಲ್ಲ. ಇನ್ನು ನಜೀರ್ ಅಹ್ಮದ್ ಅವರಿಗೆ ಬಾಗಲಕೋಟೆ ಜವಾಬ್ದಾರಿ ಕೊಟ್ಟಿದ್ದರು. ಇದೀಗ ನಜೀರ್‌ ಅವರನ್ನು ಕೈಬಿಟ್ಟಿದ್ದು ನನಗೆ ಗೊತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ಹೋಗಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಜಮೀರ್‌ ಅಹಮದ್‌ಖಾನ್‌ ಹೇಳಿದರು.

ಜಮೀರ್ ಹೇಳಿದ್ದೇನು?

- ದಾವಣಗೆರೆಯಲ್ಲಿ ನನ್ನ ಜವಾಬ್ದಾರಿ ನಿಭಾಯಿಸಿದ್ದೇನೆ

- ಪಕ್ಷದ ಬೆನ್ನಿಗೆ ನಾನು ಯಾವತ್ತೂ ಚೂರಿ ಹಾಕಿಲ್ಲ

- ಆ ರೀತಿ ಆರೋಪ ಮಾಡಿದವರು ಹೆಸರು ಹೇಳಲಿ

- ರಾಜಕೀಯದಲ್ಲಿ ಷಡ್ಯಂತ್ರಗಳೆಲ್ಲ ಸಹಜ: ಜಮೀರ್‌

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್‌ ಅಹಮದ್ ತಲೆದಂಡ
ಶೇ.33 ಸ್ತ್ರೀ ಮೀಸಲಿಗೆ ಲೋಕಸಭಾ ಸ್ಥಾನ 850ಕ್ಕೆ ಏರಿಕೆ