ರಾಜ್ಯ ರಾಜಕಾರಣದಲ್ಲಿ ನನಗೆ ಆಸಕ್ತಿ ಇಲ್ಲ: ಸಂಸದೆ ಸುಮಲತಾ ಅಂಬರೀಶ್‌

KannadaprabhaNewsNetwork |  
Published : May 30, 2024, 12:54 AM ISTUpdated : May 30, 2024, 04:27 AM IST
ಸುಮಲತಾ | Kannada Prabha

ಸಾರಾಂಶ

ನನಗೆ ರಾಜ್ಯ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ರಾಜ್ಯದಲ್ಲಿ ಚುನಾವಣೆಗೆ ಇನ್ನೂ ನಾಲ್ಕು ವರ್ಷಗಳು ಕಾಯಬೇಕು. ನಾನು ಕೇಂದ್ರ ರಾಜಕೀಯದ ಕಡೆ ಗಮನ ಕೊಡಬೇಕು ಎಂದುಕೊಂಡಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಶ್‌ ಹೇಳಿದರು.

 ಮಂಡ್ಯ :  ನನಗೆ ರಾಜ್ಯ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ರಾಜ್ಯದಲ್ಲಿ ಚುನಾವಣೆಗೆ ಇನ್ನೂ ನಾಲ್ಕು ವರ್ಷಗಳು ಕಾಯಬೇಕು. ನಾನು ಕೇಂದ್ರ ರಾಜಕೀಯದ ಕಡೆ ಗಮನ ಕೊಡಬೇಕು ಎಂದುಕೊಂಡಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಶ್‌ ಹೇಳಿದರು.

ಬಿಜೆಪಿಯ ನಾಯಕರು ನನಗೆ ಸೂಕ್ತ ಸ್ಥಾನ-ಮಾನಗಳನ್ನು ನೀಡುವ ಭರವಸೆ ನೀಡಿದ್ದಾರೆ. ಸದ್ಯ ಚುನಾವಣೆ ಫಲಿತಾಂಶ ಏನಾಗುತ್ತೆ, ಸರ್ಕಾರ ಯಾವಾಗ ರಚನೆ ಆಗುತ್ತೆ ಎಂಬ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಈಗಲೇ ನೀವು ಈ ಸ್ಥಾನ ಕೊಡಿ, ಆ ಸ್ಥಾನ ಕೊಡಿ ಎಂದು ನಾನು ಕೇಳುವುದಿಲ್ಲ. ಜೆ.ಪಿ.ನಡ್ಡಾ, ರಾಜಮೋಹನ್ ದಾಸ್ ಅವರು ನಿಮಗೆ ಒಳ್ಳೆಯ ಭವಿಷ್ಯ ಇದೆ ಎಂದು ಹೇಳಿದ್ದಾರೆ. ಕಾಲ ಎಲ್ಲದಕ್ಕೂ ಉತ್ತರ ನೀಡುತ್ತೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ನಾನು ಎಂಪಿ ಚುನಾವಣೆಯ ಫಲಿತಾಂಶದ ಪ್ರಿಡಿಕ್ಷನ್, ನಿರೀಕ್ಷೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಚುನಾವಣೆಯಲ್ಲಿಯೇ ನಾನು ತಲೆ ಕೆಡಿಸಿಕೊಂಡಿರಲಿಲ್ಲ. ನಾನು ಈಗ ಬಿಜೆಪಿಗೆ ಸೇರಿದ್ದೇನೆ. ಬಿಜೆಪಿ‌ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ವಿಶ್ವಾಸದಿಂದ ನುಡಿದರು.

ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಚಾರಕ್ಕೆ ಯಾರೂ ನನ್ನನ್ನು ಕೇಳಲಿಲ್ಲ. ಹಾಗಾಗಿ ಈ ಚುನಾವಣೆ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಮಂಡ್ಯದ ನನ್ನ ಚುನಾವಣೆ ಒಂದು ಇತಿಹಾಸ ಆಗಿದೆ. ಆ ರೀತಿಯ‌ ಚುನಾವಣೆ ಬರಲು ಎಷ್ಟು ವರ್ಷಗಳಾಗುತ್ತೋ ಗೊತ್ತಿಲ್ಲ. ಆ ರೀತಿಯ ಚುನಾವಣೆ ನೋಡಲೂ ಸಾಧ್ಯವಾಗುವುದಿಲ್ಲ. ಪಕ್ಷೇತರವಾಗಿ ನಿಂತು ಸರ್ಕಾರವನ್ನು ಎದುರಾಕಿಗೊಂಡು ಗೆದ್ದಿದ್ದ ಚುನಾವಣೆ ಅದು. ಪ್ರತಿ ಚುನಾವಣೆಗೂ ಬೇರೆ ಬೇರೆಯ ಬಣ್ಣಗಳು ಇರುತ್ತೆ ಎಂದರು.

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ವಿಚಾರವಾಗಿ ಕೇಳಿದಾಗ, ಪೆನ್‌ಡ್ರೈವ್ ಪ್ರಕರಣ ದುರದೃಷ್ಟದ ವಿಚಾರ. ನಾವು ಮಾಡಿರೋ ಒಳ್ಳೆಯ ವಿಚಾರಕ್ಕಿಂತ ಇಂತಹ ವಿಚಾರಗಳಿಗೆ ಪಬ್ಲಿಸಿಟಿ ಸಿಕ್ತಾ ಇದೆ. ಇದು ನನಗೆ ಅರ್ಥ ಆಗುತ್ತಿಲ್ಲ. ಅಂಬರೀಶ್ ಅವರ ಹುಟ್ಟು ಹಬ್ಬದ ದಿನ ನೆಗೆಟಿವ್ ವಿಚಾರಗಳ ಬಗ್ಗೆ ಕಮೆಂಟ್ ಮಾಡುವುದಿಲ್ಲ ಎಂದ ಸುಮಲತಾ, ಅಭಿಷೇಕ್‌ ಅಂಬರೀಶ್ ರಾಜಕೀಯ ಪ್ರವೇಶ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜಕೀಯವಾಗಿ ನನ್ನ ಮಗನ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಾನು ರಾಜಕೀಯದಲ್ಲಿ‌ ಇರುವವರೆಗೆ ಅಭಿಷೇಕ್ ರಾಜಕೀಯಕ್ಕೆ ಬರುವುದಿಲ್ಲ. 

ಅಭಿಷೇಕ್ ಸಹ ನಾನು ರಾಜಕೀಯದಲ್ಲಿ ಇರುವವರೆಗೆ ರಾಜಕೀಯಕ್ಕೆ ಬರೋಲ್ಲ ಎಂದಿದ್ದಾರೆ. ಮುಂದೆ ಏನಾಗುತ್ತೆ ನೋಡೋಣ ಎಂದಷ್ಟೇ ಉತ್ತರಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ
ಪೆರಿಫೆರಲ್‌ ರಿಂಗ್‌ ರಸ್ತೆಗಾಗಿ ಭೂಸ್ವಾಧೀನಕ್ಕೆ ಸಂಪುಟ ಗ್ರಿನ್ ಸಿಗ್ನಲ್‌