ಲೋಕಸಭೆಗೆ ನಿಖಿಲ್ ಸ್ಪರ್ಧಿಸದಿದ್ದರೆ ನಾನು ರೆಡಿ: ಸುರೇಶ್‌ಗೌಡ

KannadaprabhaNewsNetwork |  
Published : Dec 14, 2023, 01:30 AM IST
ಕೆ.ಸುರೇಶ್‌ಗೌಡ | Kannada Prabha

ಸಾರಾಂಶ

ಲೋಕಸಭೆಗೆ ನಿಖಿಲ್ ಸ್ಪರ್ಧಿಸದಿದ್ದರೆ ನಾನು ರೆಡಿ: ಸುರೇಶ್‌ಗೌಡನನಗೆ ಎದುರಾಗಿ ಚಲುವರಾಯಸ್ವಾಮಿ ಕಣಕ್ಕಿಳಿದರೆ ಒಳ್ಳೆಯದುಜನ ತಿರಸ್ಕರಿಸಿದರೆ ನಾನು ರಾಜಕೀಯ ಅಂತಿಮ ತೀರ್ಮಾನಕ್ಕೆ ಬರುವೆ

- ನನಗೆ ಎದುರಾಗಿ ಚಲುವರಾಯಸ್ವಾಮಿ ಕಣಕ್ಕಿಳಿದರೆ ಒಳ್ಳೆಯದು

- ಜನ ತಿರಸ್ಕರಿಸಿದರೆ ನಾನು ರಾಜಕೀಯ ಅಂತಿಮ ತೀರ್ಮಾನಕ್ಕೆ ಬರುವೆಕನ್ನಡಪ್ರಭ ವಾರ್ತೆ ನಾಗಮಂಗಲ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಬೇಕೆನ್ನುವುದು ನಮ್ಮೆಲ್ಲರ ಅಭಿಲಾಷೆ. ಒಮ್ಮೆ ಅವರು ಸ್ಪರ್ಧಿಸದಿದ್ದರೆ ಅಭ್ಯರ್ಥಿಯಾಗುವುದಕ್ಕೆ ನಾನು ರೆಡಿಯಾಗಿದ್ದೇನೆ ಎಂದು ಮಾಜಿ ಶಾಸಕ ಕೆ. ಸುರೇಶ್‌ಗೌಡ ಹೇಳಿದರು.

ಚುನಾವಣೆಗೆ ಇನ್ನೂ ಆರು ತಿಂಗಳಿರುವಾಗಲೇ ಜೆಡಿಎಸ್ ಪಕ್ಷದೊಳಗೆ ರಾಜಕೀಯ ಗರಿಗೆದರಿದೆ. ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಲೋಕಸಭಾ ಅಖಾಡ ಪ್ರವೇಶಿಸಲು ಚಿಂತಿಸುತ್ತಿರುವ ಹೊತ್ತಿನಲ್ಲೇ ನಾಗಮಂಗಲದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಕೆ.ಸುರೇಶ್‌ಗೌಡರು, ತಾವೂ ಒಬ್ಬ ಟಿಕೆಟ್ ಆಕಾಂಕ್ಷಿ ಎಂದು ಹೇಳುವುದರೊಂದಿಗೆ ರಾಜಕೀಯ ದಾಳ ಉರುಳಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿಯೇ ಚುನಾವಣೆಗೆ ನಿಲ್ಲಬೇಕು ಎನ್ನುವುದು ಜಿಲ್ಲೆಯ ಎಲ್ಲ ನಾಯಕರ ಒಕ್ಕೊರಲ ಅಭಿಪ್ರಾಯವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರು ಕಡಿಮೆ ಮತಗಳ ಅಂತರದಿಂದ ಸೋತಿದ್ದಾರೆ. ೨೦೨೩ರ ರಾಮನಗರ ವಿಧಾನಸಭೆ ಚುನಾವಣೆಯಲ್ಲಿ ಷಡ್ಯಂತ್ರಗಳಿಂದ ಸೋಲನುಭವಿಸಿದ್ದಾರೆ. ಆದರೂ ಅವರನ್ನೇ ಅಭ್ಯರ್ಥಿಯನ್ನಾಗಿಸಿ ಗೆಲ್ಲಿಸಬೇಕು ಎಂಬುದು ನಮ್ಮೆಲ್ಲರ ಆಸೆಯಾಗಿದೆ. ಈ ವಿಷಯವನ್ನು ವರಿಷ್ಠರ ಗಮನಕ್ಕೂ ತರಲಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸಸ್ವಾಮಿ ಅವರು ಮರು ಪರಿಶೀಲನೆ ನಡೆಸಿ ಅಂತಿಮ ನಿರ್ಧಾರ ಮಾಡಬೇಕು ಎಂದರು.

ಮಂಡ್ಯ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲು ಒಪ್ಪದಿದ್ದರೆ ನಾನೂ ಒಬ್ಬ ಆಕಾಂಕ್ಷಿಯಾಗಿದ್ದೇನೆ. ಬಿಜೆಪಿ-ಜೆಡಿಎಸ್ ನಡುವೆ ಕ್ಷೇತ್ರ ಹೊಂದಾಣಿಕೆಯಾಗಿ ನಮಗೆ ಬಿಟ್ಟುಕೊಟ್ಟರೆ ನಾವು ಅದನ್ನು ಸ್ವೀಕರಿಸಲು ಸಿದ್ಧರಿದ್ದೇವೆ. ಪಕ್ಷ ನನಗೆ ಟಿಕೆಟ್ ಕೊಟ್ಟು ಕಣಕ್ಕಿಳಿಸಿದರೆ ನನ್ನ ವಿರುದ್ಧ ಸಚಿವ ಚಲುವರಾಯಸ್ವಾಮಿ ಸ್ಪರ್ಧೆಗಿಳಿದರೆ ಒಳ್ಳೆಯದು. ಏಕೆಂದರೆ, ಅವರ ಆಡಳಿತವನ್ನು ಜನ ಒಪ್ಪಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಅಭಿವೃದ್ಧಿ ಅನ್ನೋದು ಯುದ್ಧೋಪಾದಿಯಲ್ಲಿ ನಡೆಯುತ್ತಿದೆ. ಅವರಿಗಿಂತ ಜಿಲ್ಲೆಯಲ್ಲಿ ಸಮರ್ಥ ನಾಯಕರಿಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್ ಉಳಿದಿರೋದೇ ಅವರಿಂದ. ನನಗೆ ಅವರ ವಿರುದ್ಧ ನಿಂತುಕೊಳ್ಳಬೇಕು ಎಂಬುದು ಆಸೆ ಎಂದು ಪರೋಕ್ಷವಾಗಿ ಕುಟುಕಿದರು.

ಲೋಕಸಭೆ ಚುನಾವಣೆಯಲ್ಲಿ ಜನರು ನನ್ನನ್ನು ಮತ್ತೆ ತಿರಸ್ಕಾರ ಮಾಡಿದರೆ ನಾನೂ ರಾಜಕೀಯವಾಗಿ ಒಂದು ನಿರ್ಧಾರ ತಗೆದುಕೊಳ್ಳಬಹುದು ಎಂದು ಹೇಳುವುದರೊಂದಿಗೆ ಚುನಾವಣೆಗೆ ಸ್ಪರ್ಧಿಸುವಂತೆ ಸಚಿವ ಚಲುವರಾಯಸ್ವಾಮಿ ಅವರಿಗೆ ಬಹಿರಂಗ ಆಹ್ವಾನ ನೀಡಿದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ