;Resize=(412,232))
ಬೆಂಗಳೂರು : ‘ನಾನು ಇದೇ ಖಾತೆಯಲ್ಲಿ ಮುಂದುವರೆಯುತ್ತೇನೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡುತ್ತೇನೆ ಎಂದರೂ ನನಗೆ ಬೇಡ’ ಎಂದು ನೂತನ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ನಾಲ್ಕು ನೀರಾವರಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರರೊಂದಿಗೆ ಪ್ರಥಮ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಇದೇ ಖಾತೆಯಲ್ಲಿ ಮುಂದುವರೆಯುತ್ತೇನೆ. ಬೇರೆ ಯಾವುದೇ ಖಾತೆ ಕೇಳಲ್ಲ. ಹೆಚ್ಚುವರಿ ಖಾತೆ ಕೊಟ್ಟರೂ ಬೇಡ. ಏಕೆಂದರೆ, ಸಚಿವಾಕಾಂಕ್ಷಿಗಳು ತುಂಬಾ ಜನ ಇದ್ದಾರೆ ಎಂದರು.
ಬೆಂಗಳೂರು ನಗರಾಭಿವೃದ್ಧಿ ಖಾತೆ ನಾನು ಕೇಳಲು ಹೋಗುವುದಿಲ್ಲ. ಇದಕ್ಕೂ ಮುನ್ನ ಆ ಖಾತೆಯನ್ನು ಕೊಡುವಂತೆ ನಾನು ಕೇಳಿರಲಿಲ್ಲ. ಅವರೇ ಕೊಡುತ್ತೇನೆ ಎಂದಿದ್ದರು. ಹೀಗಾಗಿ ಅದು ಈಗ ಮುಗಿದ ಕಥೆ. ಈಗ ಕೊಡುತ್ತೇನೆ ಎಂದರೂ ನನಗದು ಬೇಡ ಎಂದು ಸ್ಪಷ್ಟವಾಗಿ ಹೇಳಿದರು.
ಆತ್ಮಸಾಕ್ಷಿಗೆ ಸಮಸ್ಯೆ ಆಗಲಿಲ್ಲವಾ ಎಂಬ ಪ್ರಶ್ನೆಗೆ, ಡಿ.ಕೆ.ಶಿವಕುಮಾರ್ ಅವರನ್ನೇ ಕೇಳಿ ಎಂದು ನಗುತ್ತಲೇ ಉತ್ತರಿಸಿದರು. ಅದು ಹಳೇ ಕಥೆ. ಈಗ ನೋ ಕಾಮೆಂಟ್ಸ್ ಎಂದರು.
ಮಂತ್ರಿ ಮಾಡಿ, ಇಂಥದ್ದೇ ಖಾತೆ ಕೊಡಿ ಎಂದು ನಾನು ಯಾವತ್ತೂ ಲಾಬಿ ಮಾಡಿಲ್ಲ. ಜಲಸಂಪನ್ಮೂಲ ನನಗೆ ಹೊಸ ಖಾತೆ ಎಂದಿದ್ದೆ ಅಷ್ಟೇ. ನಾನು 37 ವರ್ಷದಿಂದ ಶಾಸಕನಾಗಿದ್ದೇನೆ. ಆರನೇ ಬಾರಿಗೆ ಮಂತ್ರಿಯಾಗಿದ್ದೇನೆ. ಯಾವುದೇ ಹೊಸ ಖಾತೆಯಾದರೂ 2-3 ತಿಂಗಳಲ್ಲಿ ಅರೆದು ಕುಡಿಯುಬಹುದು. ಮುಂದಿನ ಅಸೆಂಬ್ಲಿಯಲ್ಲಿ ಶಾಸಕರು ಹಾಕುವ ಪ್ರಶ್ನೆಗಳಿಗೆ ನಿರಾಯಾಸವಾಗಿ ಉತ್ತರ ನೀಡುತ್ತೇನೆ ಎಂದು ವಿಶ್ವಾಸದಿಂದ ನುಡಿದರು.
ಜಲಸಂಪನ್ಮೂಲ ಖಾತೆ ಬೇಡ ಎಂದು ರಾಜೀನಾಮೆ ಕೊಟ್ಟು ಈಗ ಮತ್ತೆ ಅದೇ ಖಾತೆಗೆ ಒಪ್ಪಿಕೊಂಡಿದ್ದು ಏಕೆ ಎಂಬ ಪ್ರಶ್ನೆಗೆ, ಇದು ರೈತರಿಗೆ ಸಂಬಂಧಿಸಿದ್ದು. ಈ ಹಿಂದೆ ನಾನು ಎಪಿಎಂಸಿ ಸಚಿವನಾಗಿದ್ದೆ. ಅದು ಕೂಡ ರೈತರಿಗೆ ಸಂಬಂಧಿಸಿದ್ದು. ನಾನು ಯಾರ ಬಳಿಯೂ ಇಂಥದ್ದೇ ಖಾತೆ ಕೊಡಿ ಎಂದು ಕೇಳಲಿಲ್ಲ. ನಾನು ದೆಹಲಿಗೂ ಹೋಗಲ್ಲ. ಕಳೆದ ಮೂರು ವರ್ಷಗಳಲ್ಲಿ ಅಧಿಕೃತ ಕೆಲಸದ ಮೇಲೆ ಮೂರು ಬಾರಿ ದೆಹಲಿಗೆ ಹೋಗಿದ್ದೇನೆ. ಕಳೆದ ಬಾರಿ ಸಾರಿಗೆ ಖಾತೆ ಜೊತೆಗೆ ಅನಿರೀಕ್ಷಿತವಾಗಿ ಮುಜರಾಯಿ ಖಾತೆ ಕೊಟ್ಟರು. ಎರಡೂ ಖಾತೆಗಳಲ್ಲಿ ಉತ್ತಮ ಕೆಲಸ ಮಾಡಿದ್ದೇನೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.