ಮುಂದಿನ ಎಲೆಕ್ಷನ್‌ ನಾಯಕತ್ವ ನಾನು ಹೊರುವೆ - ಯಾವುದೇ ಹುದ್ದೆಯಲ್ಲಿದ್ದರೂ ಪಕ್ಷ ಮುನ್ನಡೆಸುವೆ : ಡಿಕೆಶಿ

ಸಾರಾಂಶ

 ಕಾಂಗ್ರೆಸ್‌ ಪಕ್ಷ ನನಗೆ ಶಕ್ತಿ ನೀಡಿದೆ. ನನಗೆ ಶಕ್ತಿ, ಸಾಮರ್ಥ್ಯವಿದೆ. ಅದನ್ನು ಪಕ್ಷ ಬಳಸಿಕೊಳ್ಳಬೇಕು. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾನು ಯಾವುದೇ ಹುದ್ದೆಯಲ್ಲಿದ್ದರೂ ಪಕ್ಷವನ್ನು ಮುನ್ನಡೆಸುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

 ಬೆಂಗಳೂರು : ‘ಸಚಿವ ಸ್ಥಾನದಿಂದ ಉಪಮುಖ್ಯಮಂತ್ರಿ ಹುದ್ದೆವರೆಗೆ ಕಾಂಗ್ರೆಸ್‌ ಪಕ್ಷ ನನಗೆ ಶಕ್ತಿ ನೀಡಿದೆ. ನನಗೆ ಶಕ್ತಿ, ಸಾಮರ್ಥ್ಯವಿದೆ. ಅದನ್ನು ಪಕ್ಷ ಬಳಸಿಕೊಳ್ಳಬೇಕು. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾನು ಯಾವುದೇ ಹುದ್ದೆಯಲ್ಲಿದ್ದರೂ ಪಕ್ಷವನ್ನು ಮುನ್ನಡೆಸುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷವು 1989ರಿಂದಲೇ ನನ್ನನ್ನು ಸಚಿವನನ್ನಾಗಿ ಮಾಡಿ ಬೆಳೆಸಿದೆ. ಪಕ್ಷದ ಅಧ್ಯಕ್ಷ, ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆ ನೀಡಿದೆ. ಇಷ್ಟಾದ ಮೇಲೆ ನಾನು ನನ್ನ ಮುಖ ತೋರಿಸಿ ಕಾಂಗ್ರೆಸ್‌ ಪಕ್ಷಕ್ಕೆ ಕೆಲಸ ಮಾಡದಿದ್ದರೆ ಹೇಗೆ? ಅಲ್ಲದೆ, ಇಷ್ಟೆಲ್ಲ ಬೆಳೆಸಿ ನನಗೆ ಪಕ್ಷ ನಾಯಕತ್ವ ನೀಡದಿದ್ದರೆ ಹೇಗೆ? ಮನೆಯಲ್ಲಿ ಕೂರಲು ಕಾಂಗ್ರೆಸ್‌ ನನಗೆ ಇಷ್ಟು ಸ್ಥಾನಮಾನ ನೀಡಿಲ್ಲ. ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ನಾನು ಯಾವುದೇ ಹುದ್ದೆಯಲ್ಲಿದ್ದರೂ ಪಕ್ಷವನ್ನು ಮುನ್ನಡೆಸುತ್ತೇನೆ ಎಂದರು.

ನನ್ನಲ್ಲಿ ಫೇಸ್‌ ಇದೆ, ವೈಬ್ರೇಷನ್‌ ಇದೆ. ಹೀಗಾಗಿಯೇ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ದೆಹಲಿ ಸೇರಿ ಹಲವು ರಾಜ್ಯಗಳಲ್ಲಿ ಚುನಾವಣಾ ಪ್ರಚಾರಕ್ಕೆ ಕರೆಯುತ್ತಾರೆ. 2013ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ನಾನು ಪ್ರಚಾರ ಸಮಿತಿ ಅಧ್ಯಕ್ಷನಾಗಿದ್ದೆ. ಈಗ ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ನನ್ನ ಸಾಮರ್ಥ್ಯ, ಅನುಭವವನ್ನು ಪಕ್ಷ ಬಳಸಿಕೊಳ್ಳಬೇಕು. ನನ್ನ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಪಕ್ಷವನ್ನು ಮುನ್ನಡೆಸಲಿದ್ದಾರೆ. ನನ್ನ ನಾಯಕತ್ವದ ಜತೆಗೆ ಸಾಮೂಹಿಕ ನಾಯಕತ್ವದೊಂದಿಗೆ ಮುಂದೆ ಸಾಗುತ್ತೇವೆ ಎಂದು ಹೇಳಿದರು.

ಸಿಎಂ ವಿಚಾರ ಪಕ್ಷದ ನಿರ್ಧಾರಕ್ಕೆ ಗೌರವ

ಮುಂದಿನ ಚುನಾವಣೆವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾಗಿರುತ್ತಾರಾ ಎಂಬ ಪ್ರಶ್ನೆಗೆ, ಪಕ್ಷ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ, ನನ್ನನ್ನು ಉಪಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದೆ. ಮುಂದೆ ಪಕ್ಷದ ಯಾವುದೇ ತೀರ್ಮಾನವನ್ನಾದರೂ ಗೌರವಿಸುತ್ತೇನೆ. ಅಲ್ಲದೆ, ಸ್ಥಾನಗಳ ವಿಚಾರವಾಗಿ ನೀಡುತ್ತಿರುವ ಹೇಳಿಕೆಗಳಿಗೆ ಎಐಸಿಸಿ ನಾಯಕರು ಉತ್ತರ ನೀಡುತ್ತಾರೆ ಎಂದು ತಿಳಿಸಿದರು.

ನಿಗಮ-ಮಂಡಳಿಗಳಿಗೆ ಬ್ಲಾಕ್‌ ಅಧ್ಯಕ್ಷರಿಗೆ ಆದ್ಯತೆ

ನಿಗಮ-ಮಂಡಳಿಗಳ ಸದಸ್ಯ ಸ್ಥಾನ ಆಯ್ಕೆ ವೇಳೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಿಗೆ ಆದ್ಯತೆ ನೀಡಬೇಕು ಎಂಬುದು ನನ್ನ ಉದ್ದೇಶ. ಅದಕ್ಕಾಗಿ ಪಟ್ಟಿ ತರಿಸಿಕೊಂಡಿದ್ದೇನೆ. ಬ್ಲಾಕ್‌ ಅಧ್ಯಕ್ಷರಿಗೆ, ಜಿಲ್ಲಾಧ್ಯಕ್ಷರಿಗೆ ಸ್ಥಾನಮಾನ ನೀಡುವಂತೆ ಶಾಸಕರಿಗೂ ತಿಳಿಸಿದ್ದೇನೆ. ಮುಖ್ಯಮಂತ್ರಿಗಳು ಬಜೆಟ್‌ ತಯಾರಿಯಲ್ಲಿ ನಿರತರಾಗಿದ್ದು, ಈ ಬಗ್ಗೆ ಚರ್ಚಿಸಲು ಸಾಧ್ಯವಾಗಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಪಕ್ಷ ಏನೇ ತೀರ್ಮಾನ ಕೈಗೊಂಡರೂ ಗೌರವ

ಪಕ್ಷ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ, ನನ್ನನ್ನು ಉಪಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದೆ. ಮುಂದೆ ಪಕ್ಷ ಯಾವುದೇ ತೀರ್ಮಾನ ಕೈಗೊಂಡರೂ ಗೌರವಿಸುತ್ತೇನೆ. ಅಲ್ಲದೆ, ಸ್ಥಾನಗಳ ವಿಚಾರವಾಗಿ ನೀಡುತ್ತಿರುವ ಹೇಳಿಕೆಗಳಿಗೆ ಎಐಸಿಸಿ ನಾಯಕರು ಉತ್ತರ ನೀಡುತ್ತಾರೆ.

- ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ

Share this article