ನನಗೆ ನೂರು ವರ್ಷ ಬದುಕಬೇಕೆಂಬ ಆಸೆಯಿದೆ : ಸಿದ್ದು

Published : Nov 12, 2026, 11:12 AM IST
Siddaramaiah

ಸಾರಾಂಶ

ನನಗೆ ನೂರು ವರ್ಷ ಬದುಕಬೇಕು ಎಂಬ ಆಸೆ ಇದೆ. ಆದರೆ, ಅದು ನಮ್ಮ ಕೈಯಲ್ಲಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಿಸಿದ್ದಾರೆ.ನಗರದಲ್ಲಿ ಬುಧವಾರ ಮಾಜಿ ಸಿಎಂ ಡಾ.ಎಂ.ವೀರಪ್ಪ ಮೊಯ್ಲಿ ಅವರ ‘ವಿಶ್ವಸಂಸ್ಕೃತಿಯ ಮಹಾಯಾನ’(ಸಂಪುಟ-4)-ಗದ್ಯ ಮಹಾಕಾವ್ಯ’ವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು

ಮೈಸೂರು: ನನಗೆ ನೂರು ವರ್ಷ ಬದುಕಬೇಕು ಎಂಬ ಆಸೆ ಇದೆ. ಆದರೆ, ಅದು ನಮ್ಮ ಕೈಯಲ್ಲಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಿಸಿದ್ದಾರೆ.

ನಗರದಲ್ಲಿ ಬುಧವಾರ ಮಾಜಿ ಸಿಎಂ ಡಾ.ಎಂ.ವೀರಪ್ಪ ಮೊಯ್ಲಿ ಅವರ ‘ವಿಶ್ವಸಂಸ್ಕೃತಿಯ ಮಹಾಯಾನ’(ಸಂಪುಟ-4)-ಗದ್ಯ ಮಹಾಕಾವ್ಯ’ವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ವೀರಪ್ಪ ಮೊಯ್ಲಿ ಅವರು ರಾಷ್ಟ್ರಮಟ್ಟದ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿದ್ದೆವು. ಆಗಲೇ ಅವರು ದೊಡ್ಡ ಸಾಹಿತಿ ಎಂದು ಹೇಳಿದ್ದೆ. ಈಗ ಈ ಕೃತಿಯ ನಾಲ್ಕನೇ ಸಂಪುಟ ಬಿಡುಗಡೆಯಾಗಿದೆ. ಐದನೇ ಸಂಪುಟಕ್ಕೆ ಮುಗಿಸಬಹುದು ಎಂದುಕೊಂಡಿದ್ದೆ. ಹತ್ತು ಸಂಪುಟವಾದರೂ ಆಗಬಹುದು ಎಂದಿದ್ದಾರೆ. ಅವರಿಗೆ ಆರೋಗ್ಯ, ಆಯಸ್ಸು ನೀಡಲಿ. ಅವರು 125 ವರ್ಷ ಬದುಕಲಿ. ನನಗೂ ನೂರು ವರ್ಷ ಬದುಕಬೇಕು ಎಂಬ ಆಸೆ ಇದೆ. ಆದರೆ, ಅದು ನಮ್ಮ ಕೈಯಲ್ಲಿ ಇಲ್ಲ ಎಂದರು.

ರಾಜಕೀಯ ಮತ್ತು ಸಾಹಿತ್ಯ ಎರಡೂ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಛಾಪು ಮೂಡಿಸಿರುವ ಮೊಯ್ಲಿ ಅವರಿಗೆ ಜ್ಞಾನಪೀಠ ದೊರಕಲಿ. ಅವರು ನೂರಾರು ವರ್ಷಗಳ ಕಾಲ ಇದ್ದು ಮತ್ತಷ್ಟು ಸಾಹಿತ್ಯ ಕೃತಿಗಳನ್ನು ರಚಿಸಲಿ ಎಂದು ಆಶಿಸಿದರು.

ಸಾಹಿತ್ಯದ ಅಭಿಮಾನಿಯೇ ಹೊರತು ಸಾಹಿತಿಯಲ್ಲ

ಕನ್ನಡ ನಾಡಿನಲ್ಲಿಯೇ ಕನ್ನಡವನ್ನು ಉಳಿಸಿ, ಬೆಳೆಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ. ಪಕ್ಕದ ರಾಜ್ಯಗಳಲ್ಲಿ ಇಂತಹ ಪರಿಸ್ಥಿತಿ ಇಲ್ಲ. ನಾನು ಸಾಹಿತ್ಯದ ಅಭಿಮಾನಿಯೇ ಹೊರತು ಸಾಹಿತಿಯಲ್ಲ. ಪಕ್ಷೇತರ ಶಾಸಕನಾಗಿದ್ದ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಅವರು ನನ್ನನ್ನು ಕನ್ನಡ ಕಾವಲು ಸಮಿತಿಯ ಅಧ್ಯಕ್ಷನನ್ನಾಗಿ ನೇಮಿಸಿದ್ದರು. ಆಗ ನಾನು ಸಾಹಿತಿ ಅಲ್ಲ ಎಂದು ಹೇಳಿದ್ದೆ. ಆದರೆ, ನಿನಗೆ ಕನ್ನಡದ ಬಗ್ಗೆ ಅಭಿಮಾನವಿದೆ, ಅದಕ್ಕಾಗಿ ಈ ಜವಾಬ್ದಾರಿ ನೀಡುತ್ತಿದ್ದೇನೆ ಎಂದು ಹೆಗಡೆ ಅವರು ಹೇಳಿದ್ದಾಗಿ ಅವರು ತಿಳಿಸಿದರು.

ಯುದ್ಧದಿಂದ ವಿನಾಶವೇ ಹೊರತು ಅಭಿವೃದ್ಧಿ ಸಾಧ್ಯವಿಲ್ಲ. ಜಗತ್ತಿನಲ್ಲಿ ಶಾಂತಿ ನೆಲೆಸಬೇಕಾದರೆ ಗಾಂಧೀಜಿಯವರ ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹದ ತತ್ವಗಳನ್ನು ಅನುಸರಿಸಬೇಕು ಎಂಬ ಮೊಯ್ಲಿ ಅವರ ಪ್ರತಿಪಾದನೆಯನ್ನು ನಾನು ಒಪ್ಪುತ್ತೇನೆ ಎಂದು ಅವರು ಹೇಳಿದರು.

ರಾಜ್ಯಸಭೆಗೆ ಆಯ್ಕೆ ಮಾಡಿ:

ಸಿದ್ದರಾಮಯ್ಯ ಭಾಷಣದ ಮಧ್ಯೆ ಅಭಿಮಾನಿಯೊಬ್ಬರು ವೀರಪ್ಪ ಮೊಯ್ಲಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಬೇಕು ಎಂದು ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದು ನನ್ನ ಕೈಯಲ್ಲಿಲ್ಲ, ಹೈಕಮಾಂಡ್‌ ಗೆ ಬಿಟ್ಟ ವಿಚಾರ ಎಂದರು. ಆಗ ಅಭಿಮಾನಿ, ನೀವು ಗಂಭೀರವಾಗಿ ಪರಿಗಣಿಸಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಆಯಿತು, ಹೈಕಮಾಂಡ್‌ ಗೆ ತಿಳಿಸುತ್ತೇನೆ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಹಾಸನ ಡೀಸಿ ವಿರುದ್ಧ ಸಿಎಸ್‌ಗೆ ಜೆಡಿಎಸ್‌ ದೂರು
2 ದಿನಗಳಲ್ಲಿ ನಿಗಮ, ಮಂಡಳಿಗೆ ಅಧ್ಯಕ್ಷರ ನೇಮಕಾತಿ : ಡಿಕೆಶಿ