ಲೋಕಾ ಚುನಾವಣಾ ಪ್ರಚಾರದಲ್ಲೇ ಸಿಎಂ ಸಿದ್ದರಾಮಯ್ಯ ಬಿಗ್ ಚಾಲೇಂಜ್

KannadaprabhaNewsNetwork | Updated : Apr 22 2024, 04:38 AM IST

ಸಾರಾಂಶ

ಪ್ರಧಾನಿಗಳ ಗಮನಸೆಳೆಯಲು ಕಾಂಗ್ರೆಸ್ ಕಾರ್ಯಕರ್ತರು ಮೋದಿಗೆ ಖಾಲಿ ಚೊಂಬು ಪ್ರದರ್ಶಿಸಿದರೆ ಅದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌರಿಗೆ ಅಕ್ಷಯಪಾತ್ರೆಯಂತೆ ಕಾಣಿಸಿದರೆ ರಾಜ್ಯದ ಪಾಲಿನ ತೆರಿಗೆ ಹಣ ವಾಪಸ್ ಯಾಕೆ ಬರಲಿಲ್ಲ.

 ಬಂಗಾರಪೇಟೆ :  ಮೇಕೆ ದಾಟು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಲಿ ನಾಳೆಯೇ ಕಾಮಗಾರಿ ಶುರು ಮಾಡಿ ಬೆಂಗಳೂರಿನಲ್ಲಿ ತಲೆ ದೂರಿರುವ ನೀರಿನ ಸಮಸ್ಯೆಗೆ ತಿಲಾಂಜಲಿ ಹಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲ್ ಹಾಕಿದರು.

ಲೋಕಸಭೆ ಚುನಾವಣೆ ಪ್ರಯುಕ್ತ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಪರ ಮತಯಾಚನೆ ಮಾಡುವ ಸಲುವಾಗಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ರೋಡ್ ಶೋ ಮೂಲಕ ಮುಖ್ಯಮಂತ್ರಿ ಮತಯಾಚನೆ ಮಾಡಿದರು.

ಅನುಮತಿ ಕೊಡುತ್ತಾರೆಯೇ?

ಟೆಕ್ ಸಿಟಿ ಬೆಂಗಳೂರನ್ನು ಟ್ಯಾಂಕರ್ ಸಿಟಿಯಾಗಿ ಮಾಡಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಶನಿವಾರ ಬೆಂಗಳೂರಿನಲ್ಲಿ ಪ್ರಚಾರದಲ್ಲಿ ಪ್ರಧಾನಿ ಮೋದಿ ಟೀಕೆ ಮಾಡಿರುವುದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಕೆ ದಾಟು ಯೋಜನಗೆ ಮೋದಿರವರು ಅನುಮತಿ ನೀಡಿದ ತಕ್ಷಣ ನಾವು ಕಾಮಗಾರಿ ಆರಂಭಿಸಲು ಸಿದ್ದವಿದ್ದೇವೆ ಅನುಮತಿ ಕೊಡುವರೆ ಎಂದು ಪ್ರಶ್ನಿಸಿದರು.

ಕೇಂದ್ರದಿಂದ ರಾಜ್ಯಕ್ಕೆ ಎಲ್ಲಾ ವಿಷಯದಲ್ಲಿಯೂ ಅನ್ಯಾಯವಾಗುತ್ತಿದೆ ಎಂದು ಪ್ರಧಾನಿಗಳ ಗಮನಸೆಳೆಯಲು ಕಾಂಗ್ರೆಸ್ ಕಾರ್ಯಕರ್ತರು ಮೋದಿಗೆ ಖಾಲಿ ಚೊಂಬು ಪ್ರದರ್ಶಿಸಿದರೆ ಅದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌರಿಗೆ ಅಕ್ಷಯಪಾತ್ರೆಯಂತೆ ಕಾಣಿಸಿದ್ದು ಹೇಗೆ ಎಂದು ಸಿಎಂ ಪ್ರಶ್ನಿದರು. ಖಾಲಿ ಚೊಂಬು ದೇವೇಗೌಡರ ಕಣ್ಣಿಗೆ ಅಕ್ಷಯಪಾತ್ರೆಯಂತೆ ಕಾಣಿಸಿದರೆ ರಾಜ್ಯದ ಪಾಲಿನ ತೆರಿಗೆ ಹಣ ವಾಪಸ್ ಯಾಕೆ ಬರಲಿಲ್ಲ. ಬರಗಾಲದ ಅನುದಾನ ಯಾಕೆ ಬರಲಿಲ್ಲ, ಪ್ರವಾಹದ ವೇಳೆ ರಾಜ್ಯದ ಅನುದಾನ ಯಾಕೆ ಬರಲಿಲ, ರೈತರ ಸಾಲ ಯಾಕೆ ಮನ್ನಾ ಮಾಡಿಲ್ಲ ಎಂದು ಸಿದ್ದರಾಮಯ್ಯ ಅವರು ದೇವೇಗೌಡರಿಗೆ ಸರಣಿ ಪ್ರಶ್ನೆಗಳನ್ನು ಕೇಳಿದರು.

ಶ್ರೀಮಂತರ ಪಾಲಿಗೆ ಅಕ್ಷಯ ಪಾತ್ರೆಮೋದಿಯವರ ಚೊಂಬು ಅತ್ಯಂತ ಶ್ರೀಮಂತರ, ಉದ್ಯಮಿಗಳ ಲಕ್ಷ ಲಕ್ಷ ಕೋಟಿ ಸಾಲ ಮನ್ನಾ ಮಾಡಿದರೆ ವಿನಃ ಬಡವರ ಸಾಲವಲ್ಲ. ಮೋದಿ ಚೊಂಬು ಅತಿ ಶ್ರೀಮಂತರ ಪಾಲಿಗೆ ಅಕ್ಷಯ ಪಾತ್ರೆ,ಭಾರತೀಯರ ಪಾಲಿಗೆ ನಾಡಿನ ಜನರ ಪಾಲಿಗೆ ಖಾಲಿ ಖಾಲಿ ಚೊಂಬು ಅಷ್ಟೇ ಅಲ್ವಾ ದೇವೇಗೌಡರೇ ಎಂದು ಪ್ರಶ್ನಿಸಿದರು. 

15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಮಾಡಿದ ಮೋಸವನ್ನು ಮೋದಿಯವರ ಖಾಲಿ ಚೊಂಬು ಸಾಕ್ಷಿಯಾಗಿದೆ, ದೇವೇಗೌಡರೇ ಈ ಚೊಂಬು ನಿಮ್ಮ ಕಣ್ಣಿಗೆ ಅಕ್ಷಯ ಪಾತ್ರೆಯಾಗಿದ್ದರೆ 15 ನೇ ಹಣಕಾಸು ಆಯೋಗದಲ್ಲಿ ಆಗಿರುವ ನಷ್ಟ ಅನ್ಯಾಯವನ್ನು ತುಂಬಿ ಕೊಡಿಸಿ, ಅಕ್ಷಯಪಾತ್ರೆಯಿಂದ ಪರಿಹಾರ ಉದುರಿಸಿ ನೋಡೋಣವೆಂದು ಸವಾಲು ಹಾಕಿದರು. ಆದ್ದರಿಂದ ಕೋಲಾರದಲ್ಲಿ ದೇವೇಗೌಡರ ಮತ್ತು ಮೋದಿಯವರ ಖಾಲಿ ಚೊಂಬನ್ನು ಸೋಲಿಸಿ ನಮ್ಮ ಗ್ಯಾರಂಟಿ ಯೋಜನೆಗಳಿಗೆ ಆಶೀರ್ವದಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್‌ರನ್ನು ಗೆಲ್ಲಿಸಿ ನಿಮ್ಮ ಶಾಸಕ ಎಸ್.ಎನ್.ನಾರಾಯಣಸ್ವಾಮಿರಿಗೆ ರಾಜಕೀಯವಾಗಿ ಶಕ್ತಿ ನೀಡಿ ಎಂದು ಹೇಳಿದರು.

ರೋಡ್‌ ಶೋನಲ್ಲಿ ಚೊಂಬಿನ ಸದ್ದುಪಟ್ಟಣದಲ್ಲಿ ನಡೆದ ಮುಖ್ಯಮಂತ್ರಿಗಳ ರೋಡ್ ಶೋನಲ್ಲಿ ಚೊಂಬಿನ ಸದ್ದು ಜೋರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕರಿಗೆ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಜನತೆ ಚೊಂಬು ಚೊಂಬು ಎಂದು ಕೂಗಿದರು.ಪ್ರಧಾನಿ ಮೋದಿಯವರು ನಿಮ್ಮ ಅಕೌಂಟಿಗೆ 15ಲಕ್ಷ ಹಾಕ್ತೀನಿ ಎಂದಿದ್ದರಲ್ಲಾ ಎಷ್ಟು ಹಣ ಬಂತು ಎಂದು ಕೇಳಿದರು ಹಾಗ ಜನರು ಚೊಂಬು ಎಂದು ಕೂಗಿದರು. 

ಮೋದಿರವರು ವರ್ಷಕ್ಕೆ ೨ಕೋಟಿ ಉದ್ಯೋಗ ಕೊಡ್ತಿನಿ ಎಂದಿದ್ದರಲ್ವಾ ಎಷ್ಟು ಜನರಿಗೆ ನೇಮಕಾತಿ ಆದೇಶ ಬಂತು ಎಂದರು ಜನತೆ ಚೊಂಬು ಎಂದು ಕೂಗಿದರು.ಮೋದಿರವರು ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ದರಲ್ಲಾ ಎಷ್ಟು ರೈತರಿಗೆ ದಿಪ್ಪಟ್ಟು ಹಣ ಬಂತು ಎಂದು ಕೇಳಿದಾಗ ಮತ್ತೆ ಚೊಂಬು ಎಂದು ಕೂಗಿದರು. ಮೈತ್ರಿ ಅಭ್ಯರ್ಥಿ ಕೈಗೆ ಖಾಲಿ ಚೊಂಬನ್ನು ನೀಡಿ ಎಂದು ಹೇಳಿದರು.ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್,ಶಾಸಕ ಎಸ್.ಎನ್.ನಾರಾಯಣಸ್ವಾಮಿ,ಕೊತ್ತೂರು ಮಂಜುನಾಥ್,ಎಂಎಲ್‌ಸಿಗಳಾದ ಅನಿಲ್ ಕುಮಾರ್,ಜಸೀರ್ ಅಹ್ಮದ್,ಅಭ್ಯರ್ಥಿ ಕೆ.ವಿ.ಗೌತಮ್,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ,ಮಾಜಿ ಸಭಾಪತಿ ಸುದರ್ಶನ್ ಮತ್ತಿತರರು ಇದ್ದರು.

Share this article