ಶಾಮನೂರು ಒಪ್ಪಿದರೆ 2028ರಲ್ಲೂ ಟಿಕೆಟ್‌ : ಸಿದ್ದರಾಮಯ್ಯ

Published : Jun 17, 2025, 06:47 AM IST
Shamanur Shivashankarappa

ಸಾರಾಂಶ

ಶಾಮನೂರು ಶಿವಶಂಕರಪ್ಪ ಅವರು ಆರೋಗ್ಯವಾಗಿದ್ದು, ಶತಾಯುಷಿಗಳಾಗಲಿದ್ದಾರೆ. ಅವರು ಬಯಸಿದರೆ 2028ರಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತೆ ಟಿಕೆಟ್‌ ನೀಡಲಿದೆ

ದಾವಣಗೆರೆ : ಹಿರಿಯರಾದ ಶಾಸಕ ಡಾ। ಶಾಮನೂರು ಶಿವಶಂಕರಪ್ಪ ಅವರು ಆರೋಗ್ಯವಾಗಿದ್ದು, ಶತಾಯುಷಿಗಳಾಗಲಿದ್ದಾರೆ. ಅವರು ಬಯಸಿದರೆ 2028ರಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತೆ ಟಿಕೆಟ್‌ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.

ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಸೋಮವಾರ ಶಿವಂಕರಪ್ಪ ಅವರ 95ನೇ ಜನ್ಮದಿನ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶಿವಶಂಕರಪ್ಪ ಅವರ ಉತ್ಸಾಹ, ಕ್ರಿಯಾಶೀಲತೆ ನೋಡಿದರೆ ಮತ್ತೊಂದು ಚುನಾವಣೆಗೆ ನಿಲ್ಲಬಹುದು. ಅವರು ಉತ್ಸಾಹ ತೋರಿಸಿದರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಟಿಕೆಟ್ ನೀಡಲಿದೆ ಎಂದರು. ಕಾರ್ಯಕ್ರಮದಲ್ಲಿ 50 ವಧು-ವರರು ದಾಂಪತ್ಯ ಜೀವನಕ್ಕೆ ಅಡಿ ಇಟ್ಟರು.

ಅಂತರ್ಜಾತಿ ಸಾಮೂಹಿಕ ವಿವಾಹಗಳು ಹೆಚ್ಚು ಹೆಚ್ಚು ಆದಷ್ಟೂ ಜಾತ್ಯತೀತ ಸಮಾಜ ನಿರ್ಮಾಣ ಸಾಧ್ಯ. ಲಿಂಗ ತಾರತಮ್ಯ, ಜಾತಿ ತಾರತಮ್ಯ ನಿವಾರಣೆ ಆಗಬೇಕಾದರೆ ಇಂತಹ ಸಾಮೂಹಿಕ ವಿವಾಹ, ಅಂತರ್ಜಾತಿ ವಿವಾಹ ಹೆಚ್ಚು ಹೆಚ್ಚಾಗಿ ನಡೆಯಬೇಕು ಎಂದರು.

ಜಾತಿ, ವರ್ಗ ಇಲ್ಲದ ಸಮಾಜ ನಿರ್ಮಾಣ ಬಸವಣ್ಣ ಮತ್ತು ಬಸವಾದಿ ಶರಣರ ಆಶಯವಾಗಿತ್ತು. ನಮ್ಮ ಸರ್ಕಾರವು ಈ ನಿಟ್ಟಿನಲ್ಲಿ ಸಾಕಷ್ಟು ಯೋಜನೆ, ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಮತ್ತಷ್ಟು ಜನಪರ, ಅಭಿವೃದ್ಧಿ ಪರ ಕೆಲಸ ಮಾಡಲಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಜನಗಣತಿಯನ್ನು 2027ರಿಂದ ಕೈಗೊಳ್ಳಲಿದೆ. ಆದರೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮಾಡುವುದಾಗಿ ಎಲ್ಲೂ ಹೇಳಿಲ್ಲ. ನಾವು ಮಾಡುತ್ತಿರುವುದು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ. ಅದರ ಜೊತೆ ಜಾತಿಗಣತಿಯೂ ಒಳಗೊಂಡಿದೆ. ಕೇಂದ್ರದ ಜಾತಿಗಣತಿಗೂ, ನಮ್ಮ ಸಮೀಕ್ಷೆಗೂ ವ್ಯತ್ಯಾಸವಿದೆ.

- ಸಿದ್ದರಾಮಯ್ಯ, ಸಿಎಂ.

ಮನವಿ ನೀಡಲು ಬಂದ್ರೆ ಪೊಲೀಸ್ರು ಒದ್ದರೆಂದು ಸಿಎಂ ಕಾರಿಗೆ ಅಡ್ಡಬಿದ್ರು!

ಇಲ್ಲಿನ ಸರ್ಕ್ಯೂಟ್ ಹೌಸ್‌ನಲ್ಲಿ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲು ಬೆಳಗ್ಗೆಯಿಂದ ಮಳೆಯಲ್ಲಿ ಕಾದು ನಿಂತಿದ್ದ ರೈತ ಮುಖಂಡರಿಗೆ ಪೊಲೀಸ್ ಸಿಬ್ಬಂದಿ ಕಾಲಿನಿಂದ ಒದ್ದಿದ್ದಾರೆಂದು ಆರೋಪಿಸಿ, ದಾವಣಗೆರೆ ನೆಲ, ಜಲ ಹಾಗೂ ಪರಿಸರ ಸಂರಕ್ಷಣಾ ಆಂದೋಲನಾ ಸಮಿತಿ ಒಕ್ಕೂಟದ ಬಲ್ಲೂರು ರವಿಕುಮಾರ್‌ ಮತ್ತಿತರರು ಸಿದ್ದರಾಮಯ್ಯ ಅವರ ಕಾರಿಗೆ ಅಡ್ಡವಾಗಿ ಮಲಗಿ ಪ್ರತಿಭಟಿಸಿದ ಹೈಡ್ರಾಮಾ ನಡೆಯಿತು.

ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಅಹವಾಲು ಆಲಿಸಿ ಹೊರಟು ನಿಂತ ಸಿದ್ದರಾಮಯ್ಯ ಅವರಿದ್ದ ವಾಹನವನ್ನು ಚಾಲಾಯಿಸಲು ಮುಂದಾದರು. ಸಿದ್ದರಾಮಯ್ಯ, ಡಾ। ಜಿ.ಪರಮೇಶ್ವರ ಇತರರು ಕಾರಿನಲ್ಲಿದ್ದರು. ಇನ್ನೇನು ಸಚಿವ ಮಲ್ಲಿಕಾರ್ಜುನ ಕಾರು ಚಾಲನೆ ಮಾಡಬೇಕು ಎನ್ನುವಷ್ಟರಲ್ಲೇ ರವಿಕುಮಾರ ಇತರರು ವಾಹನದ ಮುಂದೆ ಅಡ್ಡಲಾಗಿ ಮಲಗಿ ಪ್ರತಿಭಟಿಸ ತೊಡಗಿದರು. ದಿಢೀರ್ ಘಟನೆಯಿಂದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು, ಸಿಎಂ ಬೆಂಗಾವಲು ಸಿಬ್ಬಂದಿ ಸಹ ಒಂದು ಕ್ಷಣ ಕಕ್ಕಾಬಿಕ್ಕಿಯಾದರು. ಬಳಿಕ ಸಿಎಂ ಬಳಿ ರವಿಕುಮಾರ್‌ ತಮಗಾದ ನೋವನ್ನು ಹೇಳಿಕೊಂಡರು. ತಾವು ಮನವಿ ಸ್ವೀಕರಿಸಲು ಬಂದರೆ ತಮಗೆ, ತಮ್ಮ ಜೊತೆಗಿದ್ದ ಮುಖಂಡರಿಗೆ ಪೊಲೀಸರು ಎಳೆದಾಡಿ, ಕಾಲಿನಿಂದ ಒದ್ದಿದ್ದಾರೆ. ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಮನವಿ ಸಲ್ಲಿಸಿದರು.

ಒಕ್ಕೂಟದ ಮನವಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ದುರ್ವರ್ತನೆ ತೋರಿದ ಪೊಲೀಸರ ಮೇಲೂ ಕ್ರಮ ಕೈಗೊಳ್ಳುವೆ ಎಂದು ಭರವಸೆ ನೀಡಿದರು. ಅನಂತರ‍ವೂ ರವಿಕುಮಾರ ಬಲ್ಲೂರು ಇತರರ ಆಕ್ರೋಶ ತಣಿಯಲಿಲ್ಲ. ಬಳಿಕವೂ ಪೊಲೀಸರ ವಿರುದ್ಧ ಘೋಷಣೆ ಕೂಗತೊಡಗಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಸರ್ವಜನಾಂಗ ಶಾಂತಿಯ ತೋಟ ಆಗಲು ಈ ಮಸೂದೆ ಬೇಕೇಬೇಕು