ಬೆಂಗಳೂರು : ಕಳೆದ 10 ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೂಲ ಸೌಕರ್ಯಕ್ಕೆ ಒತ್ತು ನೀಡಿ ಹೊಸ ಭಾಷ್ಯ ಬರೆದಿದ್ದಾರೆ. ಮೋದಿ 3.0 ಅವಧಿಯಲ್ಲಿ ಭಾರತ 3ನೇ ಪ್ರಬಲ ಆರ್ಥಿಕ ರಾಷ್ಟ್ರವಾಗಲಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಬೈಕ್ ರ್‍ಯಾಲಿ ನಡೆಸಿದ ಬಳಿಕ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ಸುಧಾರಣೆಗಳು, ವಿತ್ತ ನೀತಿಗಳ ಫಲವಾಗಿ ಭಾರತ, ವಿಶ್ವದ 5ನೇ ಪ್ರಬಲ ಆರ್ಥಿಕತೆಯಾಗಿ ಹೊರಹೊಮ್ಮಿದೆ. ದೇಶ ಇಂದು ಎಲ್ಲ ವಲಯಗಳಲ್ಲಿ ಬೆಳವಣಿಗೆ ಕಾಣುತ್ತಿದ್ದು, ಮೋದಿಯವರ 3ನೇ ಆಡಳಿತಾವಧಿಯಲ್ಲಿ ಭಾರತ, ವಿಶ್ವದ 3ನೇ ಪ್ರಬಲ ಆರ್ಥಿಕತೆಯಾಗುವ ನಿರೀಕ್ಷೆಯಿದೆ ಎಂದು ಅಭಿಪ್ರಾಯಪಟ್ಟರು.
ಸಂಚಾರ ದಟ್ಟಣೆ ನಿವಾರಣೆಗೆ ಕ್ರಮ:
ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಮೋದಿ ಸರ್ಕಾರ ನೀಡಿರುವ ಕೊಡುಗೆಗಳ ಕುರಿತು ಪ್ರಸ್ತಾಪಿಸಿದ ಅವರು, ನಗರದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಮೆಟ್ರೋ ರೈಲು ಮಾರ್ಗ ವಿಸ್ತರಣೆಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಬೆಂಗಳೂರು ದಕ್ಷಿಣ ಭಾಗಕ್ಕೆ ಪ್ರಮುಖವೆನಿಸಿರುವ ಆರ್.ವಿ.ರಸ್ತೆ-ಎಲೆಕ್ಟ್ರಾನಿಕ್ ಸಿಟಿ ರಸ್ತೆ ನಡುವಿನ ಹಳದಿ ಮಾರ್ಗ ಬರುವ ಸೆಪ್ಟೆಂಬರ್ ವೇಳೆಗೆ ಉದ್ಘಾಟನೆಯಾಗಲಿದೆ ಎಂದು ತಿಳಿಸಿದರು.
ಸಿಲ್ಕ್ ಬೋರ್ಡ್‌ನಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ 58 ಕಿ.ಮೀ. ಉದ್ದದ ಮಾರ್ಗದ ಶೇ.50ಕ್ಕೂ ಹೆಚ್ಚು ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿವೆ. 148 ಕಿ.ಮೀ. ಉದ್ದದ ಸಬ್‌ಅರ್ಬನ್ ರೈಲ್ವೆ ಯೋಜನೆಗೂ ಈಗಾಗಲೇ ಮಂಜೂರಾತಿ ದೊರೆತಿದೆ. ಈ ಯೋಜನೆಗಳು ಪೂರ್ಣಗೊಂಡರೆ ಸಂಚಾರ ದಟ್ಟಣೆ ಸಮಸ್ಯೆ ಕಡಿಮೆಯಾಗಿ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. 5 ಸಾವಿರ ಕೋಟಿ ರು. ವೆಚ್ಚದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ 2022ರಲ್ಲಿ ಕಾರ್ಯಾರಂಭಗೊಂಡಿದ್ದು ವಾರ್ಷಿಕ 6 ಕೋಟಿ ಪ್ರಯಾಣಿಕರನ್ನು ನಿರ್ವಹಿಸುತ್ತಿದೆ ಎಂದು ಸೂರ್ಯ ವಿವರಿಸಿದರು.
ಬಿಜೆಪಿ ಮುಖಂಡರಾದ ಡಾ। ಅರುಣ್ ಸೋಮಣ್ಣ, ಉಮೇಶ್ ಶೆಟ್ಟಿ, ಮೋಹನ್ ಕುಮಾರ್, ದಾಸೇಗೌಡ, ವಿಶ್ವನಾಥ ಗೌಡ, ಜೆಡಿಎಸ್ ಮುಖಂಡ ಆರ್.ಪ್ರಕಾಶ್ ಉಪಸ್ಥಿತರಿದ್ದರು.