ಉದ್ಯೋಗ ನೀಡಲು ಕೈಗಾರಿಕೆ ಅತ್ಯಾವಶ್ಯಕ: ಸಚಿವ ಡಾ.ಎಂ.ಸಿ.ಸುಧಾಕರ್

KannadaprabhaNewsNetwork | Updated : Jul 14 2024, 04:57 AM IST

ಸಾರಾಂಶ

ಒಂದಡೆ ಕೃಷಿಭೂಮಿ ಬಿಡುವುದಿಲ್ಲ ಎಂದು ರೈತರು ಹೋರಾಟ ಮಾಡುತ್ತಿದ್ದಾರೆ. ಇನ್ನೊಂದಡೆ ಉದ್ಯೋಗ ಸೃಷ್ಟಿ ಮಾಡಿ ಆರ್ಥಿಕ ಪ್ರಗತಿಗೆ ದಾರಿ ಮಾಡಿಕೊಡಬೇಕಾದರೆ ಕೈಗಾರಿಕೆಗಳನ್ನು ತರಲೇಬೇಕು. ಕೈಗಾರಿಕೆಗಳನ್ನು ಆಕಾಶದಲ್ಲಿ ಸ್ಥಾಪಿಸಲಾಗುತ್ತದೆಯೇ,

 ಚಿಕ್ಕಬಳ್ಳಾಪುರ :  ದೇಶದಲ್ಲಿ ಬೃಹದಾಕಾರವಾಗಿ ಬೆಳೆಯುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮತ್ತು ದುಡಿಯುವ ಕೈಗಳಿಗೆ ಉದ್ಯೋಗ ನೀಡಲು ಕೈಗಾರಿಕೆ ಅತ್ಯಾವಶ್ಯಕವಾಗಿದೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.ನಗರದ ಶ್ರೀದೇವಿ ಪ್ಯಾಲೇಸ್‌ನಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ನೂತನ ಎಂಎಲ್‌ಸಿ ಡಿ.ಟಿ.ಶ್ರೀನಿವಾಸ್ ರಿಗೆ ಶುಕ್ರವಾರ ಸಂಜೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ರೈತರ ಹೋರಾಟಕ್ಕೆ ಅರ್ಥವಿಲ್ಲ

ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ನಿರುದ್ಯೋಗ ನಿರ್ಮೂಲನಗೆ ಕೈಗಾರಿಭಿವೃದ್ಧಿ ಮಾಡುವ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕು. ಕೈಗಾರಿಕೆ ಸ್ಥಾಪಿಸಲು ಭೂಮಿ ವಶಪಡಿಸಿಕೊಳ್ಳುವ ಅಗತ್ಯವಿದೆ. ಇದನ್ನು ಅರಿಯದೆ ರೈತರು ಹೋರಾಟ ಮಾಡುವುದರಲ್ಲಿ ಯಾವ ಅರ್ಥವಿಲ್ಲ ಎಂದರು

ಒಂದಡೆ ಕೃಷಿಭೂಮಿ ಬಿಡುವುದಿಲ್ಲ ಎಂದು ರೈತರು ಹೋರಾಟ ಮಾಡುತ್ತಿದ್ದಾರೆ. ಇನ್ನೊಂದಡೆ ಉದ್ಯೋಗ ಸೃಷ್ಟಿ ಮಾಡಿ ಆರ್ಥಿಕ ಪ್ರಗತಿಗೆ ದಾರಿ ಮಾಡಿಕೊಡಬೇಕಾದರೆ ಕೈಗಾರಿಕೆಗಳನ್ನು ತರಲೇಬೇಕು. ಕೈಗಾರಿಕೆಗಳನ್ನು ಆಕಾಶದಲ್ಲಿ ಸ್ಥಾಪಿಸಲಾಗುತ್ತದೆಯೇ, ಕೈಗಾರಿಕೆ ಸ್ಥಾಪಿಸುವಾಗ ಕೆಲವು ಕೆಲವೊಂದಿಷ್ಟು ಮಂದಿ ರೈತರಿಗೆ ಸಮಸ್ಯೆ ಆಗುತ್ತದೆ. ಹಾಗಂತ ಕೈಗಾರಿಕೆ ಮಾಡದೆ,ದುಡಿಯುವ ಕೈಗಳಿಗೆ ಉದ್ಯೋಗ ನೀಡದೆ ಸುಮ್ಮನಿರಲಾಗುತ್ತಾ ಎಂದು ಮಾಧ್ಯಮದವರನ್ನು ಸಚಿವರು ಪ್ರಶ್ನಿಸಿದರು.

ಕೈಗಾರಿಕೆಗಿಂತ ಹೆಚ್ಚಾಗಿ ರೈತರೇ ಉದ್ಯೋಗ ನೀಡುತ್ತಿದ್ದೇವೆ ಎನ್ನುವ ರೈತ ಸಂಘದ ಮುಖಂಡರು ಎಷ್ಟು ಮಂದಿಗೆ ಉದ್ಯೋಗ ನೀಡಿದ್ದಾರೆ ಎಂಬುದನ್ನು ಹೇಳಲಿ. ಹಾಗಾದರೆ ವಿದ್ಯಾವಂತರಾಗಿರುವ ಮಕ್ಕಳನ್ನು ಏನು ಮಾಡಬೇಕು. ರೈತರ ಮಕ್ಕಳು ಡಿಗ್ರಿ ಅದು ಇದು ಮಾಡುತ್ತಿದ್ದಾರಲ್ಲ ಅವರಿಗೆ ಎಲ್ಲಿ ಉದ್ಯೋಗ ಕೊಡೋದು. ಬಾಯಿ ಚಪಲಕ್ಕೋ ಬೂಟಾಟಿಕೆಗೋ ತೆವಲಿಗೋ ಮಾತಾಡಬಾರದು. ವಾಸ್ತವಾಂಶ ಅರಿತು ಮಾತನಾಡಬೇಕು ಎಂದು ಗರಂ ಆದರು. 

ಕೂಲಿ ಮಾಡುವವನ ಮಕ್ಕಳು ಕೂಲಿನೇ ಮಾಡಬೇಕಾ, ಕೂಲಿಯ ಮಗ ಓದಿ ವಿದ್ಯಾವಂತನಾಗಿ ಉದ್ಯೋಗಕ್ಕೆ ಸೇರಿವುದು ಬೇಡವಾ, ಬೇಡ ಎನ್ನುವ ಇವರು ಕೂಲಿಯ ಮನೆಗೆ ಹೋಗಿ ನೀವು ಓದಬೇಡಿ ಕೂಲಿ ಕೆಲಸವೇ ಮಾಡಿ ಎಂದು ಹೇಳಲಿ ನೋಡೋಣ. ವಸ್ತುಸ್ಥಿತಿಯನ್ನು ಅರಿತು ಮಾತನಾಡಬೇಕು. ಓದಿರುವವರಿಗೆ ಉದ್ಯೋಗ ದೊರೆಯಬೇಕು ಅದಕ್ಕೆ ಏನು ಮಾಡಬೇಕೋ ಅದನ್ನು ಸರ್ಕಾರ ಮಾಡುತ್ತಿದೆ. ಯಾರು ಮಾಡದ ಕೆಲಸವನ್ನೇನೂ ನಮ್ಮ ಸರ್ಕಾರ ಮಾಡುತ್ತಿಲ್ಲ ಎಂದು ಹೋರಾಟಗಾರರಿಗೆ ತಿರುಗೇಟು ನೀಡಿದರು.

ಜಂಗಮಕೋಟೆ ಭಾಗದಲ್ಲಿ ಕೃಷಿಗೆ ಯೋಗ್ಯವಲ್ಲದ ಭೂಮಿ ಹೆಚ್ಚಿರುವುದರಿಂದ ಇಲ್ಲಿ ಕೈಗಾರಿಕೆ ಮಾಡಲು ಸರ್ಕಾರ ಮುಂದಾಗಿದೆ.ಇಂದು ಸರ್ಕಾರಿ ರಂಗದಲ್ಲಿ ಖಾಯಂ ಉದ್ಯೋಗಗಳು ಸಾಕಷ್ಟು ಪ್ರಮಾಣದಲ್ಲಿ ದೊರೆಯದಿರುವ ಕಾರಣ ಖಾಸಗಿ ವಲಯದ ಮೇಲೆ ಒತ್ತಡ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಕೈಗಾರಿಕೆ ಆಗಬಾರದು, ಆದರೆ ಉದ್ಯೋಗ ಸೃಷ್ಟಿ ಮಾಡಬೇಕು ಎಂಬ ವಾದ ಎಷ್ಟು ಸರಿ ಎಂದು ಪ್ರಶ್ನಿಸಿದರು.

ಇಂದಿನ ದಿನಮಾನದಲ್ಲಿ ಕೃಷಿಕರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಯನ್ನು ನಂಬಿ ಜೀವನ ಮಾಡುತ್ತೇವೆ ಎಂದು ಹೇಳುವ ಪರಿಸ್ಥಿತಿ ಇಲ್ಲ. ಅವರು ಉತ್ತಮ ರೀತಿ ವಿದ್ಯಾವಂತರಾಗಿ ಬದುಕಿನಲ್ಲಿ ಬದಲಾವಣೆ ತರಬೇಕು.ಉದ್ಯೋಗ ಸಿಕ್ಕದಾಗ ಆ ಮನೆಯಲ್ಲಿ ಪರಿವರ್ತನೆ ಆಗುತ್ತದೆ.ಆರ್ಥಿಕ ಸದೃಢತೆ ಸಿಗುತ್ತದೆ.ಇದಾದಾಗ ಸಮಾಜದಲ್ಲಿ ಗೌರವ ಬರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.ಸುಪ್ರಿಂಕೋರ್ಟ್ ಹೇಳಿರುವುದು ನಿಜ. ಜಂಗಮಕೋಟೆ ಭಾಗದಲ್ಲಿ ಕೃಷಿಗೆ ಯೋಗ್ಯವಲ್ಲದ ಭೂಮಿಯಾದ ಕಾರಣ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಬಡಾವಣೆಗಳು ನಿರ್ಮಾಣವಾಗಿವೆ. ಇದನ್ನು ಮನಗಂಡು ಅಲ್ಲಿನ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಇವತ್ತು ಅಲ್ಲಿ ಕೈಗಾರಿಕೆಗಳನ್ನು ಮಾಡುತ್ತಿದ್ದೇವೆ. ಪ್ರತಿಭಟನೆ ಮಾಡುವವರಿಗೆ ಅವರದೇ ಆದ ಆಲೋಚನೆಗಳಿದ್ದು ಅದರಂತೆ ಮಾತನಾಡುತ್ತಾರೆ ಎಂದರು.

ಈ ವೇಳೆ ನೂತನ ಎಂಎಲ್‌ಸಿ ಡಿ.ಟಿ.ಶ್ರೀನಿವಾಸ್, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಮುಖಂಡರಾದ ಕೆ.ಎಂ.ಮುನೇಗೌಡ,ಕೆ.ಸಿ.ರಾಜಾಕಾಂತ್, ವಕೀಲ ಶ್ರೀನಿವಾಸ್,ಮತ್ತಿತರರು ಇದ್ದರು.

Share this article