ಹಗರಣಗಳ ಬಗ್ಗೆ ಯಾವುದೇ ರೀತಿಯ ತನಿಖೆ ನಡೆಸಿದರೂ ನಾವು ಎದುರಿಸಲು ಸಿದ್ಧರಿದ್ದೇವೆ : ಬೊಮ್ಮಾಯಿ ಸವಾಲು

Published : Jul 22, 2024, 08:10 AM IST
Basavaraja Bommai Allegations

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಆಪಾದಿಸಿರುವಂತೆ ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಬಗ್ಗೆ ಯಾವುದೇ ರೀತಿಯ ತನಿಖೆ ನಡೆಸಿದರೂ ನಾವು ಎದುರಿಸಲು ಸಿದ್ಧರಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಆಪಾದಿಸಿರುವಂತೆ ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಬಗ್ಗೆ ಯಾವುದೇ ರೀತಿಯ ತನಿಖೆ ನಡೆಸಿದರೂ ನಾವು ಎದುರಿಸಲು ಸಿದ್ಧರಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣದಲ್ಲಿ ಇಡೀ ಸರ್ಕಾರ ಸಿಲುಕಿಕೊಂಡಿದೆ. ಪೂರ್ಣ ತನಿಖೆಯಾದರೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ತಮ್ಮ ರಕ್ಷಣೆಗಾಗಿ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅವರು ಯಾವುದೇ ತನಿಖೆ ನಡೆಸಿದರೂ ನಾವು ಎದುರಿಸಲು ಸಿದ್ಧರಿದ್ದೇವೆ. ಆದರೆ, ರಾಜಕೀಯ ದ್ವೇಷಕ್ಕಾಗಿ ಅಧಿಕಾರ ದುರುಪಯೋಗ ಆಗಬಾರದು ಎಂದರು.

ಎಪಿಎಂಸಿ ಸಂಬಂಧ ನನ್ನ ವಿರುದ್ಧ ಆರೋಪ ಮಾಡಲಾಗಿದೆ. ಆದರೆ ನಾ‌ನು ಎಪಿಎಂಸಿ ಸಚಿವನಾಗಿರಲಿಲ್ಲ. ಗೃಹ ಸಚಿವನಾಗಿದ್ದೆ. ಎಪಿಎಂಸಿ ಪ್ರಕರಣದಲ್ಲಿ ತನಿಖೆ ನಡೆಸಿ ಬ್ಯಾಂಕಿನವರಿಂದ 48 ಕೋಟಿ ರು. ಜೊತೆಗೆ ಬಡ್ಡಿ ಸಮೇತ 52 ಕೋಟಿ ರು. ವಸೂಲಿ ಮಾಡಲಾಗಿತ್ತು. ಬೋವಿ ನಿಗಮದಲ್ಲಿ ಅವ್ಯವಹಾರ ಆಗಿದ್ದಾಗ ಅದನ್ನು ಸಿಐಡಿ ತನಿಖೆಗೆ ನಾವೇ ವಹಿಸಿದ್ದೇವೆ. ಅದರ ತನಿಖೆ ನಡೆಯುತ್ತಿದೆ. ಗಂಗಾ ಕಲ್ಯಾಣ ಯೋಜನೆ ದುರುಪಯೋಗದ ಆರೋಪ ಕೇಳಿ ಬಂದಾಗ ನಾನೇ ಸದನದಲ್ಲಿ ಸಿಐಡಿ ತನಿಖೆಗೆ ನೀಡಿದ್ದೇನೆ. ಅದರ ತನಿಖೆ ಕೊನೆ ಹಂತಕ್ಕೆ ಬಂದಿದೆ. ನಮ್ಮ ವಿರುದ್ದ 40% ಆರೋಪ ಮಾಡಿದ್ದರು. ಇದುವರೆಗೂ ಯಾವುದೇ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ನೊಟಿಸ್ ಕೊಟ್ಟಿಲ್ಲ. ರಾಜಕೀಯ ಉದ್ದೇಶದಿಂದ ಆಯೋಗ ಮಾಡಿದರೆ, ತನಿಖೆ ನಡೆಸಿದರೆ ಹೀಗೇ ಆಗುವುದು ಎಂದು ತಿರುಗೇಟು ನೀಡಿದರು.

ಇವತ್ತು ವಾಲ್ಮೀಕಿ ನಿಗಮ ಒಂದೇ ಅಲ್ಲ. ಎಲ್ಲ ಇಲಾಖೆಗಳಲ್ಲಿ ಹಗರಣ ಹೊರಬರುತ್ತಿವೆ‌. ಕೋಮುಲ್‌ನಿಂದ‌ ಹಿಡಿದು ಪ್ರವಾಸೋದ್ಯಮ ಇಲಾಖೆ ಹಗರಣ ಎಲ್ಲವೂ ಹೊರ ಬರುತ್ತಿವೆ‌. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ ಎನ್ನುವಂತಾಗಿದೆ. ಸ್ವಾತಂತ್ರ್ಯಾನಂತರ ಭ್ರಷ್ಟಾಚಾರ ಹುಟ್ಟು ಹಾಕಿದ್ದೇ ಕಾಂಗ್ರೆಸ್ ಪಕ್ಷ. ಅವರು ಯಾವುದೇ ತನಿಖೆ ನಡೆಸಲಿ. ನಾವು ಅವರ ರೀತಿ ಇ.ಡಿ. ಯಾಕೆ, ಸಿಬಿಐ ಯಾಕೆ ಬಂತು ಅಂತ ಕೇಳುವುದಿಲ್ಲ. ನಾವು ಅವರ ಹಾಗೆ ಅಂಜುಬುರುಕರಲ್ಲ ಎಂದು ತೀಕ್ಷ್ಣವಾಗಿ ಹೇಳಿದರು.

 ಉಪ ಚುನಾವಣೆಗೆ ಸಿದ್ಧ: 

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬೊಮ್ಮಾಯಿ, ಶಿಗ್ಗಾವಿ ವಿಧಾನಸಭಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳ ಉಪಚುನಾವಣೆಗೆ ನಾವು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.

ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಸಮಿತಿ ರಚನೆ ಮಾಡಿದ್ದಾರೆ‌. ಅವರು ಅಭಿಪ್ರಾಯ ಪಡೆದು ಅಭ್ಯರ್ಥಿ ಆಯ್ಕೆ ಮಾಡುತ್ತಾರೆ. ಯಾರೇ ಅಭ್ಯರ್ಥಿ ಮಾಡಿದರೂ ನಾವು ಮುಕ್ತವಾಗಿ ಕೆಲಸ ಮಾಡುತ್ತೇವೆ. ನನ್ನ ಮಗನನ್ನು ಅಭ್ಯರ್ಥಿ ಮಾಡುವಂತೆ ಯಾರೂ ಬಂದು ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.

 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ವೈದ್ಯಕೀಯ ಪರಿಹಾರ ನಿಧಿ ಹಣಕ್ಕೆ ಬೆಂಗಳೂರು ಪಾಲಿಕೆ ತಡೆ
ವಿಧಾನಸಭೆಯಲ್ಲಿ ಗೃಹಲಕ್ಷ್ಮೀ ಹಣ ಪಾವತಿ ಗದ್ದಲ : ಗೃಹ ಲಕ್ಷ್ಮೀ ಕ್ಷಮೆಯಾಚನೆ