ಬಿಜೆಪಿಗೆ ಮರಳಿದ ಮಾಜಿ ಸಿಎಂ ಶೆಟ್ಟರ್‌; ಬೆಳಗಾವಿ/ಹಾವೇರಿಯಿಂದ ಸಂಸತ್ತಿಗೆ ಸ್ಪರ್ಧೆ?

KannadaprabhaNewsNetwork | Published : Jan 26, 2024 2:00 AM

ಸಾರಾಂಶ

ದೆಹಲಿಯಲ್ಲಿ ಬಿಜೆಪಿ ಸೇರಿದ ಬಳಿಕ ಜೆ.ಪಿ.ನಡ್ಡಾರನ್ನು ಭೇಟಿ ಮಾಡಿದ ಜಗದೀಶ್‌ ಶೆಟ್ಟರ್‌. ಬಿಜೆಪಿಗೆ ಮರಳಿದ ಮಾಜಿ ಸಿಎಂ ಶೆಟ್ಟರ್‌; ಬೆಳಗಾವಿ/ಹಾವೇರಿಯಿಂದ ಸಂಸತ್ತಿಗೆ ಸ್ಪರ್ಧೆ?

ಕನ್ನಡಪ್ರಭ ವಾರ್ತೆ ಬೆಂಗಳೂರು

ಒಂಬತ್ತು ತಿಂಗಳ ಅಲ್ಪಾವಧಿಯಲ್ಲೇ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ ಅವರು ತಮ್ಮ ಮಾತೃ ಪಕ್ಷ ಬಿಜೆಪಿಗೆ ವಾಪಸಾಗಿದ್ದು, ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಆಘಾತ ಉಂಟು ಮಾಡಿದ್ದಾರೆ.ಶೆಟ್ಟರ್ ಅವರು ಬಿಜೆಪಿಗೆ ವಾಪಸಾಗುವ ಬಗ್ಗೆ ಕಳೆದ ಹಲವು ದಿನಗಳಿಂದ ವದಂತಿ ಕೇಳಿಬರುತ್ತಿದ್ದರೂ ಅದು ಇಷ್ಟು ತುರ್ತಾಗಿ ವಾಸ್ತವವಾಗಿ ಬದಲಾಗುತ್ತದೆ ಎಂಬುದು ಕಾಂಗ್ರೆಸ್ ಪಕ್ಷಕ್ಕೂ ಸುಳಿವಿರಲಿಲ್ಲ.

ಗುರುವಾರ ಬೆಳಗ್ಗೆ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಘಟಕದ ಪ್ರಭಾವಿ ನಾಯಕರಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಭೇಟಿ ಮಾಡಿ ಶೆಟ್ಟರ್‌ ಸಮಾಲೋಚನೆ ನಡೆಸಿದರು. ನಿಮಗೆ ಹಿಂದೆ ಆದ ಅನ್ಯಾಯವನ್ನು ಸರಿಪಡಿಸಿ ಸೂಕ್ತ ಗೌರವ ನೀಡಲಾಗುವುದು ಎಂಬ ಅಭಯವನ್ನು ಅಮಿತ್ ಶಾ ಅವರು ನೀಡಿದರು. ಅದರ ಬೆನ್ನಲ್ಲೇ ಶೆಟ್ಟರ್ ಅವರು ಬಿಜೆಪಿ ಸೇರುವ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡರು.ಬಳಿಕ ಮಧ್ಯಾಹ್ನದ ಹೊತ್ತಿಗೆ ದೆಹಲಿಯಲ್ಲಿನ ಪಕ್ಷದ ಕಚೇರಿಯಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರ ಸಮ್ಮುಖದಲ್ಲಿ ಶೆಟ್ಟರ್‌ ಬಿಜೆಪಿಗೆ ಸೇರ್ಪಡೆಯಾದರು. ಅದಕ್ಕೂ ಮೊದಲು ವಿಧಾನಪರಿಷತ್ ಸ್ಥಾನಕ್ಕೆ ಮತ್ತು ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ಪತ್ರವನ್ನೂ ರವಾನಿಸಿದರು.ಒಂದು ಗಮನಾರ್ಹ ಸಂಗತಿ ಎಂದರೆ, ಶೆಟ್ಟರ್ ಸೇರ್ಪಡೆ ಕುರಿತ ಮಾತುಕತೆ ಮತ್ತು ಸೇರ್ಪಡೆ ವೇಳೆ ಅವರ ಆಕ್ರೋಶಕ್ಕೆ ಕಾರಣರಾಗಿದ್ದರು ಎನ್ನಲಾದ ಕೆಲವು ನಿರ್ದಿಷ್ಟ ಹಿರಿಯ ನಾಯಕರನ್ನು ದೂರ ಇಡಲಾಗಿತ್ತು.

ಲೋಕಸಭೆಗೆ ಸ್ಪರ್ಧೆ, ಮಂತ್ರಿ ಸ್ಥಾನ?:ಸದ್ಯದ ಮಾಹಿತಿ ಅನುಸಾರ, ಶೆಟ್ಟರ್ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಅಥವಾ ಹಾವೇರಿ ಕ್ಷೇತ್ರಗಳ ಪೈಕಿ ಒಂದರಿಂದ ಸ್ಪರ್ಧಿಸುವ ಅವಕಾಶವನ್ನು ವರಿಷ್ಠರು ನೀಡಿದ್ದಾರೆ. ಅದರಲ್ಲಿ ಗೆದ್ದು ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಲ್ಲಿ ಕೇಂದ್ರ ಸಚಿವರಾಗುವ ಸಾಧ್ಯತೆಯ ಬಗ್ಗೆಯೂ ಪ್ರಸ್ತಾಪವಾಗಿದೆ ಎನ್ನಲಾಗಿದೆ.ಇದೇ ವೇಳೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸದೆ ಬಳಿಕ ನೇರವಾಗಿ ರಾಜ್ಯಸಭೆ ಪ್ರವೇಶಿಸುವ ಮೂಲಕ ಕೇಂದ್ರ ಸಚಿವರಾಗುವ ಬಗ್ಗೆಯೂ ಅವರು ಚಿಂತನೆ ನಡೆಸಿದ್ದಾರೆ. ಆ ಸಾಧ್ಯತೆ ಕಡಮೆ ಎಂದು ಮೂಲಗಳು ತಿಳಿಸಿವೆ.ಬುಧವಾರ ದಿಢೀರನೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರು ದೆಹಲಿಗೆ ಪ್ರಯಾಣಿಸಿದ್ದರು. ಬಳಿಕ ರಾತ್ರಿ ಶೆಟ್ಟರ್ ಅವರೂ ದೆಹಲಿ ಸೇರಿದರು. ಎಲ್ಲವೂ ಮೊದಲೇ ನಿರ್ಧಾರಿತವಾಗಿತ್ತು. ಮೂವರೂ ಗುರುವಾರ ಬೆಳಗ್ಗೆ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಸೇರ್ಪಡೆ ಕಾರ್ಯಕ್ರಮ ಸಾಂಗವಾಗಿ ನೆರವೇರಿತು.ಜನಸಂಘದ ಕಾಲದಿಂದಲೂ ಸಕ್ರಿಯವಾಗಿದ್ದ ಶೆಟ್ಟರ್ ಕುಟುಂಬ ಮುಂದೆ ಬಿಜೆಪಿಯೊಂದಿಗೆ ರಾಜಕಾರಣದಲ್ಲಿ ತೊಡಗಿಸಿಕೊಂಡಿತ್ತು. 1994ರಿಂದಲೂ ಶೆಟ್ಟರ್ ಅವರು ಸತತವಾಗಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿಕೊಂಡು ಬಂದಿದ್ದರು. ಮುಂದೆ ಪಕ್ಷದ ರಾಜ್ಯಾಧ್ಯಕ್ಷರಾಗಿ, ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿ, ವಿಧಾನಸಭೆಯ ಸಭಾಧ್ಯಕ್ಷರಾಗಿ, ಸಚಿವರಾಗಿ, ಮುಖ್ಯಮಂತ್ರಿಯಾಗಿ, ಬಳಿಕ ಮತ್ತೊಮ್ಮೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.ಆದರೆ, ಕಳೆದ ವಿಧಾನಸಭಾ ಚುನಾವಣೆ ವೇಳೆ ಹೊಸ ಪ್ರಯೋಗದ ಹೆಸರಿನಲ್ಲಿ ಶೆಟ್ಟರ್ ಸೇರಿದಂತೆ ಕೆಲವು ಆಯ್ದ ಹಿರಿಯ ನಾಯಕರಿಗೆ ಟಿಕೆಟ್ ನಿರಾಕರಿಸಲಾಯಿತು. ಕೊನೆ ಕ್ಷಣದಲ್ಲಿ ಟಿಕೆಟ್ ತಪ್ಪಿದ್ದಕ್ಕೆ ಬೇಸರಗೊಂಡ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷಕ್ಕೆ ವಲಸೆ ಹೋಗಿ ಸ್ಪರ್ಧಿಸಿದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಶೆಟ್ಟರ್ ಅವರಿಗೆ ಗೌರವ ನೀಡಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಕೆಲವೇ ದಿನಗಳಲ್ಲಿ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಚುನಾಯಿಸಿತು.ಪರಿಷತ್ ಸದಸ್ಯರಾದರೂ ಶೆಟ್ಟರ್ ಕಾಂಗ್ರೆಸ್‌ ವಾತಾವರಣಕ್ಕೆ ಅಷ್ಟಾಗಿ ಒಗ್ಗಲಿಲ್ಲ. ಸುದೀರ್ಘ ಕಾಲ ಬಿಜೆಪಿಯಲ್ಲಿದ್ದ ಅವರಿಗೆ ಕಾಂಗ್ರೆಸ್‌ ನಾಯಕರ ಒಡನಾಟ, ಕಾಂಗ್ರೆಸ್‌ನ ರಾಜಕೀಯ ಶೈಲಿ ನಿರೀಕ್ಷಿಸಿದಷ್ಟು ಹೊಂದಲಿಲ್ಲ. ಚಡಪಡಿಕೆಯಲ್ಲೇ ಇದ್ದರು. ಅಷ್ಟರಲ್ಲಿ ರಾಜ್ಯ ಬಿಜೆಪಿಯಲ್ಲಿ ಯಡಿಯುೂರಪ್ಪ-ವಿಜಯೇಂದ್ರ ಮೇಲುಗೈ ಸಾಧಿಸಿ ಆಹ್ವಾನ ನೀಡಿದರು. ಅದಕ್ಕೆ ಶೆಟ್ಟರ್ ಜೈ ಎಂದರು.ಇದೀಗ ವಿಧಾನಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ಗುರಿಯೊಂದಿಗೆ ಬಿಜೆಪಿಗೆ ವಾಪಸಾಗಿದ್ದಾರೆ.

Share this article