ಮತ್ತೆ ಜೆಡಿಎಸ್ ಗೂಡಿಗೆ ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್

KannadaprabhaNewsNetwork |  
Published : Mar 14, 2024, 02:07 AM IST
೧೩ಕೆಎಂಎನ್‌ಡಿ-೨ಕಳೆದ ವಿಧಾನಸಭಾ ಚುನಾವಣೆಯಿಂದ ಜೆಡಿಎಸ್ ವರಿಷ್ಠರೊಂದಿಗೆ ಮುನಿಸು ಪ್ರದರ್ಶಿಸುತ್ತಿದ್ದ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್‌ಆನಂದ್ ಅವರನ್ನು ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಆತ್ಮೀಯವಾಗಿ ಸ್ವಾಗತಿಸಿದರು. | Kannada Prabha

ಸಾರಾಂಶ

ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡವರಂತೆ ಕಂಡುಬಂದಿದ್ದ ಕೆ.ಎಸ್.ವಿಜಯ್‌ಆನಂದ್ ಹಲವು ತಿಂಗಳುಗಳಿಂದ ಜೆಡಿಎಸ್‌ನವರೊಂದಿಗೆ ಒಡನಾಟ ಆರಂಭಿಸಿದ್ದರು. ಜೆಡಿಎಸ್‌ನ ಕೆಲವು ಕಾರ್ಯಕ್ರಮಗಳಲ್ಲಿ ವಿಜಯ್‌ಆನಂದ್ ಉಪಸ್ಥಿತರಿರುವುದು ಕಂಡುಬರುತ್ತಿತ್ತು. ಇದರ ನಡುವೆ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಅವರು ಕೆ.ಎಸ್.ವಿಜಯ್‌ಆನಂದ್ ಅವರನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನಿವಾಸಕ್ಕೆ ಕರೆದೊಯ್ದು ಮಾತುಕತೆ ನಡೆಸುವುದರೊಂದಿಗೆ ಅತೃಪ್ತಿ ಶಮನಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಳೆದ ವಿಧಾನಸಭೆ ಚುನಾವಣೆಯಿಂದ ಜೆಡಿಎಸ್ ವರಿಷ್ಠರೊಂದಿಗೆ ಮುನಿಸು ಪ್ರದರ್ಶಿಸುತ್ತಾ ಬಂದಿದ್ದ ನಗರದ ಪ್ರತಿಷ್ಠಿತ ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಮತ್ತೆ ಜೆಡಿಎಸ್ ಗೂಡು ಸೇರಿಕೊಂಡಿದ್ದಾರೆ.

ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಿವಾಸದಲ್ಲಿ ಕೆ.ಎಸ್.ವಿಜಯ್ ಆನಂದ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಜೊತೆಯಲ್ಲಿ ಕುಳಿತು ಉಪಾಹಾರ ಸೇವಿಸಿದರು. ರಾಜಕೀಯವಾಗಿ ಮುಕ್ತ ಮಾತುಕತೆ ನಡೆಸಿದರು.

೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಸಿಗುವುದೆಂಬ ನಿರೀಕ್ಷೆಯಲ್ಲಿದ್ದ ಕೆ.ಎಸ್.ವಿಜಯ್‌ಆನಂದ್ ಅವರಿಗೆ ಕೊನೇ ಘಳಿಗೆಯಲ್ಲಿ ಟಿಕೆಟ್ ಕೈತಪ್ಪಿತ್ತು. ಜೆಡಿಎಸ್ ಟಿಕೆಟ್ ಮನ್‌ಮುಲ್ ಅಧ್ಯಕ್ಷರಾಗಿದ್ದ ಬಿ.ಆರ್.ರಾಮಚಂದ್ರ ಅವರ ಪಾಲಾಗಿತ್ತು.

ಇದರಿಂದ ವರಿಷ್ಠರ ವಿರುದ್ಧ ಸಿಡಿದೆದ್ದ ಮಾಜಿ ಶಾಸಕ ಎಂ.ಶ್ರೀನಿವಾಸ್ ಅವರು ಸ್ವಾಭಿಮಾನಿ ಪಡೆ ಎಂಬ ಹೆಸರಿನಲ್ಲಿ ಬೆಂಬಲಿಗರನ್ನು ಸೇರಿಸಿಕೊಂಡು ಕೆ.ಎಸ್.ವಿಜಯ್‌ಆನಂದ್ ಅವರನ್ನು ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರು. ಚುನಾವಣೆಯಲ್ಲಿ ೧೫,೩೩೪ ಮತಗಳನ್ನು ಪಡೆದುಕೊಂಡು ವಿಜಯ್ ಆನಂದ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

ಆನಂತರದಲ್ಲಿ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡವರಂತೆ ಕಂಡುಬಂದಿದ್ದ ಕೆ.ಎಸ್.ವಿಜಯ್‌ಆನಂದ್ ಹಲವು ತಿಂಗಳುಗಳಿಂದ ಜೆಡಿಎಸ್‌ನವರೊಂದಿಗೆ ಒಡನಾಟ ಆರಂಭಿಸಿದ್ದರು. ಜೆಡಿಎಸ್‌ನ ಕೆಲವು ಕಾರ್ಯಕ್ರಮಗಳಲ್ಲಿ ವಿಜಯ್‌ಆನಂದ್ ಉಪಸ್ಥಿತರಿರುವುದು ಕಂಡುಬರುತ್ತಿತ್ತು.

ಇದರ ನಡುವೆ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಅವರು ಕೆ.ಎಸ್.ವಿಜಯ್‌ಆನಂದ್ ಅವರನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನಿವಾಸಕ್ಕೆ ಕರೆದೊಯ್ದು ಮಾತುಕತೆ ನಡೆಸುವುದರೊಂದಿಗೆ ಅತೃಪ್ತಿ ಶಮನಗೊಳಿಸಿದ್ದಾರೆ.

ಟಿಕೆಟ್ ಸಿಗಲಿಲ್ಲವೆಂಬ ಬಗ್ಗೆ ಅಸಮಾಧಾನವಿದ್ದದ್ದು ನಿಜ. ಆ ಸಮಯದಲ್ಲಿ ಮಾಜಿ ಶಾಸಕ ಎಂ.ಶ್ರೀನಿವಾಸ್ ಅವರ ಒತ್ತಡಕ್ಕೆ ಮಣಿದು ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರ್ಧಾರ ಮಾಡಿದ್ದೆ. ಇನ್ನು ಮುಂದೆ ನಿಮ್ಮ ನಾಯಕತ್ವದಲ್ಲಿ ಪಕ್ಷದಲ್ಲಿ ಮುಂದುವರೆಯುವ ನಿರ್ಧಾರ ಮಾಡಿದ್ದೇನೆ. ಅವರು ಯಾವುದೇ ಷರತ್ತಿಲ್ಲದೆ ಜೆಡಿಎಸ್ ಪಕ್ಷದಲ್ಲಿದ್ದುಕೊಂಡು ಪಕ್ಷ ಸಂಘಟಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಇದೇ ಸಮಯದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಪಕ್ಷದ ಜಿಲ್ಲಾಧ್ಯಕ್ಷ ಡಿ.ರಮೇಶ್ ಇದ್ದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ