ಜೆಡಿಎಸ್ ನಾಯಕರು ನನ್ನನ್ನು ಪ್ರಚಾರಕ್ಕೆ ಆಹ್ವಾನಿಸಿಲ್ಲ: ಸಂಸದೆ ಸುಮಲತಾ

KannadaprabhaNewsNetwork |  
Published : Apr 27, 2024, 01:25 AM ISTUpdated : Apr 27, 2024, 04:33 AM IST
೨೬ಕೆಎಂಎನ್‌ಡಿ-೧ಮದ್ದೂರು ತಾಲೂಕು ದೊಡ್ಡರಸಿನಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಮತ ಚಲಾಯಿಸಿದರು. | Kannada Prabha

ಸಾರಾಂಶ

ದೇವೇಗೌಡರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವರು ದೊಡ್ಡವರು, ಅವರಿಗೆ ಸರಿಯಾದ ಮಾಹಿತಿ ಇಲ್ಲದೆ ಆ ರೀತಿ ಹೇಳಿದ್ದಾರೆ ಎಂದೆನಿಸುತ್ತಿದೆ. ಅವರಿಂದ ಅಂತಹ ಹೇಳಿಕೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ.  

  ಮಂಡ್ಯ :  ಲೋಕಸಭೆ ಚುನಾವಣೆ ಸಂಬಂಧ ಯಾವುದೇ ಸಭೆ, ಪ್ರಚಾರಕ್ಕೆ ಬರುವಂತೆ ನನ್ನನ್ನು ಜೆಡಿಎಸ್ ನಾಯಕರು ಆಹ್ವಾನಿಸಿರಲಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ಮದ್ದೂರು ತಾಲೂಕು ದೊಡ್ಡರಸಿನಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ೧೬೪ರಲ್ಲಿ ಮತಚಲಾಯಿಸಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ದೇವೇಗೌಡರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವರು ದೊಡ್ಡವರು, ಅವರಿಗೆ ಸರಿಯಾದ ಮಾಹಿತಿ ಇಲ್ಲದೆ ಆ ರೀತಿ ಹೇಳಿದ್ದಾರೆ ಎಂದೆನಿಸುತ್ತಿದೆ. ಅವರಿಂದ ಅಂತಹ ಹೇಳಿಕೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ನುಡಿದರು.

ಮೈತ್ರಿ ಅಭ್ಯರ್ಥಿ ಪರವಾಗಿ ನಮ್ಮ ಬೆಂಬಲಿಗರು ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಆದರೆ, ಜೆಡಿಎಸ್ ನಾಯಕರು ಯಾವುದೇ ಸಭೆ, ಪ್ರಚಾರಕ್ಕೆ ಆಹ್ವಾನಿಸಿಲ್ಲ. ಅವರು ಕರೆದು ನಾನು ಬರದೇ ಇದ್ದರೆ ತಪ್ಪಾಗುತ್ತೆ. ಆದರೆ, ಅವರು ನನ್ನ ಕರೆದೇ ಇಲ್ಲ ಎಂದು ನೇರವಾಗಿ ಹೇಳಿದರು.

ಸ್ವತಂತ್ರ ಸಂಸದೆಯಾಗಿ ನನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಮೋದಿ ಅವರು ಪ್ರಧಾನಿಯಾಗಲೇಬೇಕೆಂಬ ಉದ್ದೇಶದಿಂದ ನಾನು ಗೆದ್ದಂತಹ ಕ್ಷೇತ್ರವನ್ನು ತ್ಯಾಗ ಮಾಡಿರುವೆ. ಈ ಹಂತದಲ್ಲಿ ಅಂಬರೀಶ್ ಅವರ ಪಡೆಯ ಶಕ್ತಿಯನ್ನು ಎನ್‌ಡಿಎ ಒಕ್ಕೂಟಕ್ಕೆ ನೀಡಿರುವುದಾಗಿ ತಿಳಿಸಿದರು.

ಮೈಸೂರಿನ ಮೋದಿ ಸಭೆಯಲ್ಲಿ ನಾನೇ ಕರೆದಿದ್ದೇನೆ, ಆರ್.ಅಶೋಕ್ ಅವರೇ ಸಾಕ್ಷಿ: ಎಚ್‌ಡಿಕೆ

 ಮದ್ದೂರು : ಮೈಸೂರಿಗೆ ಮೋದಿ ಅವರು ಚುನಾವಣಾ ಪ್ರಚಾರಕ್ಕೆ ಬಂದ ಸಮಯದಲ್ಲೇ ಸುಮಲತಾ ಅವರನ್ನು ನನ್ನ ಪರವಾಗಿ ಚುನಾವಣಾ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿದ್ದೆ ಎಂದು ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮಕ್ಕೆ ಆಗಮಿಸಿದ್ದ ಅವರು ಮತಗಟ್ಟೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರಿನ ಮೋದಿಯವರ ಸಭೆಯಲ್ಲಿ ನಾನೇ ಕರೆದಿದ್ದೇನೆ. ಆರ್.ಅಶೋಕ್ ಕೂಡ ನಮ್ಮ ಜೊತೆಯಲ್ಲೇ ಇದ್ದರು. ವೇದಿಕೆ ಮೇಲೆಯೇ ಎರಡು ದಿನ ಬಿಡುವು ಮಾಡಿಕೊಂಡು ಬನ್ನಿ ಎಂದು ಸುಮಲತಾ ಅವರನ್ನು ಕರೆದಿದ್ದೆ. ಈಗ ಅದನ್ನೆಲ್ಲ ಚರ್ಚೆ ಮಾಡಿ ಪ್ರಯೋಜನ ಏನು. ನಾನು ಯಾವ ಕಾರಣಕ್ಕೂ, ಯಾರಿಗೂ ತೊಂದರೆ ಕೊಡಲು ಹೋಗುವುದಿಲ್ಲ ಎಂದು ನಯವಾಗಿಯೇ ಉತ್ತರಿಸಿದರು.

ಜನ ಪ್ರೀತಿಯಿಂದ ಕರೆದಿದ್ದಾರೆ, ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷದವರು ನನಗೆ ಸಹಕರಿಸಿದ್ದಾರೆ. ಯಾರ ಬಗ್ಗೆಯೂ ನಾನು ಮಾತಾಡಲು ಹೋಗುವುದಿಲ್ಲ ಎಂದರು.

PREV

Recommended Stories

ಡಿಕೆಶಿ ಡಿಸಿಎಂ ಮಾಡುವ ದರ್ದು ಬಿಜೆಪಿಗಿಲ್ಲ : ಶೋಭಾ ಟಾಂಗ್‌
ಆಳಂದ ಮತಕಳ್ಳತನ : ಸಾವಿರಾರು ಐಡಿ ಪತ್ತೆ