ಡಿಕೆ ತವರಿಂದ ಇಂದು ದಳ ‘ರೈತ ಸ್ವಾಭಿಮಾನಿ ಯಾತ್ರೆ’

Published : Sep 28, 2026, 06:21 AM IST
JDS

ಸಾರಾಂಶ

ಬರದಿಂದಾಗಿ ಸಂಕಷ್ಟದಲ್ಲಿರುವ ರೈತರ ಸಮಸ್ಯೆಗಳನ್ನು ಆಲಿಸುವುದು ಹಾಗೂ ಈ ನಿಟ್ಟಿನಲ್ಲಿ ಸರ್ಕಾರವನ್ನು ಎಚ್ಚರಿಸುವ ಉದ್ದೇಶದಿಂದ ಜೆಡಿಎಸ್‌‍ ರಾಜ್ಯ ಘಟಕದಿಂದ ‘ರೈತ ಸ್ವಾಭಿಮಾನಿ ಯಾತ್ರೆ’ ಹಮ್ಮಿಕೊಳ್ಳಲಾಗಿದೆ.

ಕನಕಪುರ : ಬರದಿಂದಾಗಿ ಸಂಕಷ್ಟದಲ್ಲಿರುವ ರೈತರ ಸಮಸ್ಯೆಗಳನ್ನು ಆಲಿಸುವುದು ಹಾಗೂ ಈ ನಿಟ್ಟಿನಲ್ಲಿ ಸರ್ಕಾರವನ್ನು ಎಚ್ಚರಿಸುವ ಉದ್ದೇಶದಿಂದ ಜೆಡಿಎಸ್‌‍ ರಾಜ್ಯ ಘಟಕದಿಂದ ‘ರೈತ ಸ್ವಾಭಿಮಾನಿ ಯಾತ್ರೆ’ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಈ ಸ್ವಾಭಿಮಾನಿ ಯಾತ್ರೆಯನ್ನು ನಡೆಸಲು ಉದ್ದೇಶಿಸಲಾಗಿದ್ದು, ಸೋಮವಾರ ಬೆಳಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ತವರು ಕ್ಷೇತ್ರ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರದಲ್ಲಿ ಈ ಯಾತ್ರೆಗೆ ಅಧಿಕೃತ ಚಾಲನೆ ನೀಡಲಾಗುತ್ತಿದೆ.

ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ನೇತೃತ್ವದಲ್ಲಿ ಈ ಯಾತ್ರೆ ನಡೆಯಲಿದ್ದು, ರೈತರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಸೋಮವಾರ ಬೆಳಗ್ಗೆ 10 ಗಂಟೆಗೆ ಕನಕಪುರದ ರೈಸ್‌‍ಮಿಲ್‌ ವೃತ್ತದಲ್ಲಿ ಪಾದಯಾತ್ರೆಗೆ ನಿಖಿಲ್‌ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಅಲ್ಲಿಂದ ಚನ್ನಬಸಪ್ಪ ವೃತ್ತದವರೆಗೆ ನಿಖಿಲ್‌ ಕುಮಾರಸ್ವಾಮಿ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗುತ್ತದೆ. ಬಳಿಕ, ಬಹಿರಂಗ ಸಮಾವೇಶ ನಡೆಸುವ ಮೂಲಕ ರೈತರ ಪರವಾದ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಈ ಯಾತ್ರೆಯಲ್ಲಿ ಜೆಡಿಎಸ್‌‍ ನ ರಾಜ್ಯ ಘಟಕದ ನಾಯಕರು, ಸ್ಥಳೀಯ ಮುಖಂಡರು, ಕಾರ್ಯಕರ್ತರು ರೈತರೊಂದಿಗೆ ಭಾಗವಹಿಸಲಿದ್ದಾರೆ.

ಬೇಡಿಕೆ ಏನು?:

ಬರದಿಂದಾಗಿ ಸಂಕಷ್ಟದಲ್ಲಿರುವ ರೈತರ ಸಂಪೂರ್ಣ ಕೃಷಿ ಸಾಲಮನ್ನಾ ಮಾಡಬೇಕು. ಪ್ರತಿ ಎಕರೆಗೆ 25 ಸಾವಿರ ರೂ.ಪರಿಹಾರ ಧನ ಬಿಡುಗಡೆ ಮಾಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ 8 ಗಂಟೆ ಉಚಿತ ವಿದ್ಯುತ್‌ ಪೂರೈಸಬೇಕು. ಜಾನುವಾರುಗಳಿಗೆ ಉಚಿತ ಮೇವು ಹಾಗೂ ಕುಡಿಯುವ ನೀರು ಒದಗಿಸಬೇಕು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಯಾತ್ರೆ ನಡೆಯಲಿದೆ.

ರೈತರ ಪರವಾಗಿ ಜೆಡಿಎಸ್‌‍ ಇದ್ದು, ಅವರ ಸಮಸ್ಯೆಗಳ ಪರಿಹಾರಕ್ಕೆ ಪಕ್ಷ ಸದಾ ಹೋರಾಟ ನಡೆಸಲಿದೆ ಎಂಬ ಸಂದೇಶವನ್ನು ಈ ಯಾತ್ರೆಯ ಮೂಲಕ ನೀಡಲಾಗುವುದು. ಪ್ರತಿ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಈ ಯಾತ್ರೆ ನಡೆಯಲಿದ್ದು, ಸ್ಥಳೀಯ ಸಮಸ್ಯೆ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಪಾದಯಾತ್ರೆ, ಬಹಿರಂಗ ಸಮಾವೇಶ, ರ್‍ಯಾಲಿ ನಡೆಸುವುದು, ಅಗತ್ಯಬಿದ್ದರೆ ಪ್ರತಿಭಟನೆ ಮಾಡುವ ಮೂಲಕ ರೈತರಿಗೆ ಧೈರ್ಯ ತುಂಬುವ ಕೆಲಸವನ್ನು ಜೆಡಿಎಸ್‌‍ ಮಾಡಲಿದೆ.

ನೈಸ್ ವಿರುದ್ಧ ಗಾಂಧಿ ಜಯಂತಿಯಿಂದ ಹೋರಾಟ: ಎಚ್‌ಡಿಕೆ

ಬೆಂಗಳೂರು: ವಿವಾದಿತ ನೈಸ್‌ ಯೋಜನೆ ವಿರುದ್ಧ ಅ.2ರ ಗಾಂಧಿ ಜಯಂತಿ ದಿನ ಹೋರಾಟ ಪ್ರಾರಂಭ ಮಾಡಲಾಗುವುದು ಎಂದು ಜೆಡಿಎಸ್‌ ನಾಯಕ ಹಾಗೂ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. 50 ಹಳ್ಳಿಗಳ ಜನರಿಗೆ ಭೂಮಿ ವಾಪಸ್‌ ಕೊಡಬೇಕು ಎಂಬುದು ಸೇರಿ ನೈಜ ವಿಚಾರಗಳನ್ನು ಇರಿಸಿಕೊಂಡು ಹೋರಾಟ ಮಾಡಲಾಗುವುದು ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸಂಪುಟ ಚರ್ಚೆಗೆ ಇಂದು ಡಿಕೆಶಿ, ಸಿದ್ದು, ಬಿಕೆ ದಿಲ್ಲಿಗೆ
ರಾಜ್ಯದ ಬರ ಅಧ್ಯಯನಕ್ಕೆ ಕೇಂದ್ರದಿಂದ 3 ಟೀಂ ರಚನೆ