ನಾಳೆಯಿಂದ 3 ದಿನ ಕಿತ್ತೂರು ಕರ್ನಾಟಕದಲ್ಲಿ ಜೆಡಿಎಸ್‌ ಸಭೆ

KannadaprabhaNewsNetwork | Published : Oct 10, 2023 1:00 AM

ಸಾರಾಂಶ

ಪಕ್ಷ ಸಂಘಟನೆಗಾಗಿ ಜೆಡಿಎಸ್‌ ಕೋರ್‌ ಕಮಿಟಿ ಸದಸ್ಯರು 2ನೇ ಹಂತದ ಸಭೆಯನ್ನು ಬುಧವಾರದಿಂದ ಕಿತ್ತೂರು ಕರ್ನಾಟಕ ಭಾಗದಲ್ಲಿ ನಡೆಸಲಿದ್ದಾರೆ. ಕಿತ್ತೂರು ಕರ್ನಾಟಕ ಭಾಗದಲ್ಲಿ ಮೂರು ದಿನ ಈ ಸಭೆ ನಡೆಯಲಿದೆ.
- ಜಿ.ಟಿ.ದೇವೇಗೌಡ ನೇತೃತ್ವದಲ್ಲಿ 21 ಕೋರ್‌ ಕಮಿಟಿ ಸದಸ್ಯರು, ಸ್ಥಳೀಯ ಮುಖಂಡರ ಸಭೆ: ದತ್ತ ಕನ್ನಡಪ್ರಭ ವಾರ್ತೆ ಬೆಂಗಳೂರು ಪಕ್ಷದ ಸಂಘಟನೆಗಾಗಿ ಜೆಡಿಎಸ್‌ ಕೋರ್‌ ಕಮಿಟಿ ಸದಸ್ಯರು ಮೊದಲ ಹಂತದ ಬಳಿಕ ಎರಡನೇ ಹಂತದ ಸಭೆಯನ್ನು ಬುಧವಾರದಿಂದ ಕಿತ್ತೂರು ಭಾಗದಲ್ಲಿ ನಡೆಸಲಿದ್ದಾರೆ ಎಂದು ಕೋರ್‌ ಕಮಿಟಿ ಸಂಚಾಲಕ ವೈ.ಎಸ್‌.ವಿ.ದತ್ತ ತಿಳಿಸಿದ್ದಾರೆ. ಸೋಮವಾರ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಜಿ.ಟಿ. ದೇವೇಗೌಡ ಅಧ್ಯಕ್ಷತೆಯಲ್ಲಿ 21 ಜನರ ಕೋರ್ ಕಮಿಟಿ ನೇಮಕ ಆಗಿದೆ. ಇದು ಮೊದಲ ಹಂತದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಸಭೆ ನಡೆಸಿದೆ. ಬುಧವಾರ ವಿಜಯಪುರ ಜಿಲ್ಲೆಯಲ್ಲಿ ಸಭೆ ನಡೆಯಲಿದ್ದು, ಗುರುವಾರ ಹುಬ್ಬಳ್ಳಿ ಮತ್ತು ಶುಕ್ರವಾರ ಬೆಳಗಾವಿಯಲ್ಲಿ ಸಭೆ ಜರುಗಲಿದೆ. ಈ ವೇಳೆ ಆ ಭಾಗದ ಪಕ್ಷದ ಮುಖಂಡರ ಜತೆ ಸಮಾಲೋಚನೆ ನಡೆಸಲಾಗುವುದು. ವಿಧಾನಸಭೆಯಲ್ಲಿನ ಸೋಲು, ಪಕ್ಷದ ಸಂಘಟನೆ ಸೇರಿದಂತೆ ಹಲವು ವಿಷಯಗಳ ಕುರಿತು ಸಮಾಲೋಚನೆ ನಡೆಸಲಾಗುತ್ತದೆ ಎಂದರು. ---- ಮೈತ್ರಿಗೆ ಸಮರ್ಥನೆ: ಇದೇ ವೇಳೆ ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್‌ ಮಾತನಾಡಿ, ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡರಿಗೆ ನಿಷ್ಠೆಯಿಂದ ಇರುತ್ತೇನೆ. ರಾಜ್ಯದ ಜನತೆಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಮೈತ್ರಿ ಮಾಡಿಕೊಳ್ಳಲಾಗುತ್ತದೆ. ಯಾವುದೇ ಕಾರಣಕ್ಕೂ ದೇವೇಗೌಡರು ಪಕ್ಷದ ಸಿದ್ಧಾಂತವನ್ನು ಬಿಡುವುದಿಲ್ಲ. ಮೈತ್ರಿ ವಿಚಾರವಾಗಿ ಪಕ್ಷದಲ್ಲಿ ಅಸಮಾಧಾನಗೊಂಡಿರುವವನ್ನು ಸಮಾಧಾನ ಮಾಡಿ ಒಟ್ಟಾಗಿ ಹೋಗುತ್ತೇವೆ ಎಂದು ಹೇಳಿದರು.

Share this article