ಬಿಜೆಪಿಯಲ್ಲಿ ಅಂದುಕೊಂಡಿದ್ದ ಕೆಲಸಗಳಿಗೆ ಸೂಕ್ತ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಮತ್ತು ಎಲ್ಲ ಜಾತಿ ಜನಾಂಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಕಾಂಗ್ರೆಸ್ ಪಕ್ಷವನ್ನು ಮತ್ತೆ ಸೇರಿದ್ದೇನೆ ವಿಶ್ವಕರ್ಮ ಸಮಾಜದ ನಾಯಕ ಕೆ.ಪಿ. ನಂಜುಂಡಿ ಹೇಳಿದರು.
ಬಾಗಲಕೋಟೆ : ಬಿಜೆಪಿಯಲ್ಲಿ ಅಂದುಕೊಂಡಿದ್ದ ಕೆಲಸಗಳಿಗೆ ಸೂಕ್ತ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಮತ್ತು ಎಲ್ಲ ಜಾತಿ ಜನಾಂಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಕಾಂಗ್ರೆಸ್ ಪಕ್ಷವನ್ನು ಮತ್ತೆ ಸೇರಿದ್ದೇನೆ ವಿಶ್ವಕರ್ಮ ಸಮಾಜದ ನಾಯಕ ಕೆ.ಪಿ. ನಂಜುಂಡಿ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳು ಕಾಂಗ್ರೆಸ್ ಬೆಂಬಲಿಸಬೇಕು ಎಂದೂ ಅವರು ಇದೆ ಸಂದರ್ಭದಲ್ಲಿ ಮನವಿ ಮಾಡಿದರು. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ 14 ವರ್ಷಗಳ ಕಾಲ ಕಾಂಗ್ರೆನ್‌ನಲ್ಲಿ ಸೇವೆ ಸಲ್ಲಿಸಿದ್ದೆ. ಕಾರಣಾಂತರಗಳಿಂದ ಭಾರತೀಯ ಜನತಾ ಪಕ್ಷಕ್ಕೆ ಹೋಗಿ ವಿಧಾನ ಪರಿಷತ್ ಸದಸ್ಯ ಕೂಡ ಆದೆ. ಆದರೆ, ನಾನು ಪ್ರತಿಪಾದಿಸುವ ವಿಷಯಗಳಿಗೆ ಹಾಗೂ ಅಂದುಕೊಂಡಿದ್ದ ಕೆಲಸಗಳಿಗೆ ಅಲ್ಲಿ ಸೂಕ್ತ ನ್ಯಾಯ ಸಿಗದೇ ಇದ್ದುದ್ದರಿಂದ ಪುನಃ ಕಾಂಗ್ರೆಸ್ ಸೇರಿರುವುದಾಗಿ ನಂಜುಂಡಿ ಅವರು ಸ್ಪಷ್ಟಪಡಿಸಿದರು.
25 ವರ್ಷಗಳ ಹೋರಾಟದಿಂದಾಗಿ ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ವಿಶ್ವಕರ್ಮ ಜಯಂತಿ, ಜಕಣಾಚಾರಿ ಜಯಂತಿ, ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಲು ಸಾಧ್ಯವಾಗಿದೆ. ರಾಜ್ಯದಲ್ಲಿನ 197 ಹಿಂದುಳಿದ ಜಾತಿಗಳಲ್ಲಿ ವಿಶ್ವಕರ್ಮ ಸಮುದಾಯದ ಉಪಪಂಗಡಗಳು ಸಹ ಸೇರಿವೆ. ಸಮಾಜದ ಜಾಗೃತಿ ಆಗಬೇಕಾದರೆ ರಾಜಕೀಯ ಬಲ ಬೇಕಾಗುತ್ತದೆ. ಈ ಸಮುದಾಯ ದೇಶದ ನಾಗರಿಕತೆ ಹಾಗೂ ಸಂಸ್ಕೃತಿಯ ಪ್ರತೀಕವಾಗಿದ್ದು, ವಿಶ್ವಕರ್ಮ ಸಮುದಾಯಕ್ಕೆ ಸಿಗಬೇಕಾದ ಸಾಮಾಜಿಕ ನ್ಯಾಯ ಇನ್ನೂ ದೊರೆತಿಲ್ಲ. ಅದನ್ನು ಪಡೆಯುವ ಭಾಗವಾಗಿ ನಾವೆಲ್ಲ ಸಂಘಟಿತರಾಗುತ್ತಿದ್ದೇವೆ ಎಂದು ಹೇಳಿದರು.
ಕೇಂದ್ರದ ವಿಶ್ವಕರ್ಮ ಯೋಜನೆಯಲ್ಲಿ ಹಲವು ಲೋಪಗಳಿವೆ ಎಂದು ಆರೋಪಿಸಿದ ಅವರು, ಕೇವಲ ವಿಶ್ವಕರ್ಮರನ್ನು ಮಾತ್ರ ಈ ಯೋಜನೆಯಲ್ಲಿ ಸೇರಿಸಿಕೊಂಡಿಲ್ಲ. ಬದಲಾಗಿ 18 ಜಾತಿಗಳನ್ನು ಸೇರಿಸಿಕೊಳ್ಳಲಾಗಿದೆ. ಇನ್ನಷ್ಟು ಹಿಂದುಳಿದ ಜಾತಿಗಳನ್ನು ಸೇರಿಸಿಕೊಂಡಿದ್ದರಿಂದ ಆ ಸಮುದಾಯಕ್ಕಾದರೂ ನ್ಯಾಯ ಸಿಗುತ್ತಿತ್ತು ಎಂದರು.