ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಪುತ್ರ ಆಗಿರುವ ಸಾಗರ್ ಖಂಡ್ರೆ ಅತ್ಯಂತ ಕಿರಿಯ ವಯಸ್ಸಿನಲ್ಲೇ (26 ವರ್ಷ) ಲೋಕಸಭೆಗೆ ಕಾಲಿಡುವ ಕನಸು ಕಾಣುತ್ತಿದ್ದಾರೆ.
ಬೀದರ್ : ಬಸವಾದಿ ಶರಣರ ಕ್ಷೇತ್ರವಾಗಿದ್ದರೂ ಇಲ್ಲಿ ಜಾತಿ ಮತಗಳದ್ದೇ ಲೆಕ್ಕಾಚಾರ. ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಬೀದರ್‌ನ 6 ಹಾಗೂ ಪಕ್ಕದ ಕಲಬುರಗಿ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಾದ ಆಳಂದ ಹಾಗೂ ಚಿಂಚೋಳಿಯೂ ಸೇರಿ 8 ಕ್ಷೇತ್ರಗಳಿವೆ. ಕೇಂದ್ರ ಸಚಿವ ಭಗವಂತ ಖೂಬಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹ್ಯಾಟ್ರಿಕ್ ಗೆಲುವಿಗೆ ಸಜ್ಜಾಗಿದ್ದರೆ, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಪುತ್ರ ಆಗಿರುವ ಸಾಗರ್ ಖಂಡ್ರೆ ಅತ್ಯಂತ ಕಿರಿಯ ವಯಸ್ಸಿನಲ್ಲೇ (26 ವರ್ಷ) ಲೋಕಸಭೆಗೆ ಕಾಲಿಡುವ ಕನಸು ಕಾಣುತ್ತಿದ್ದಾರೆ.
ಬೀದರ್ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರ ಕೋಟೆಯಾಗಿದ್ದು, ಸಹಜವಾಗಿ ಮೋದಿ ಅಲೆ ಇಲ್ಲಿ ತುಸು ಹೆಚ್ಚೇ ಇದೆ. ಮೋದಿ ನಾಮ ಸ್ಮರಣೆ ಮತ್ತು ತಾವು ಸಚಿವರಾಗಿ ಮಾಡಿದ ಕೆಲಸಗಳನ್ನು ಮುಂದಿಟ್ಟುಕೊಂಡು ಗೆಲುವಿನ ನಗೆ ಬೀರುವ ಗುರಿ ಇಟ್ಟುಕೊಂಡಿರುವ ಖೂಬಾ ಅವರಿಗೆ ಸ್ವಪಕ್ಷೀಯರ ವಿರೋಧವೇ ಈ ಬಾರಿ ಬಹುದೊಡ್ಡ ಅಡ್ಡಿಯಾಗಿ ಪರಿಣಮಿಸುತ್ತಿದೆ. ಔರಾದ್ ಶಾಸಕ ಪ್ರಭು ಚವ್ಹಾಣ್ ಅವರು ಖೂಬಾ ವಿರುದ್ಧ ಬಹಿರಂಗವಾಗಿಯೇ ತಿರುಗಿಬಿದ್ದಿದ್ದು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಔರಾದ್‌ಗೆ ಪ್ರಚಾರಕ್ಕೆಂದು ಬಂದಾಗಲೂ ಪ್ರಚಾರದಿಂದ ದೂರವುಳಿದಿದ್ದರು. ಇನ್ನು ಬಸವಕಲ್ಯಾಣ ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕರೂ ಖೂಬಾ ಜತೆಗೆ ಅಂತರ ಕಾಯ್ದುಕೊಂಡಿದ್ದಾರೆ. ಪಕ್ಷದ ಹಲವು ಪ್ರಮುಖರೊಂದಿಗೆ ಕಡಿತಗೊಂಡಿರುವ ಸಂಬಂಧ, ಕ್ಷೇತ್ರದ ಪ್ರಬಲ ಮರಾಠಾ ಸಮಾಜದ ಮುಖಂಡ ಡಾ.ದಿನಕರ ಮೋರೆ ಇದೀಗ ಕಣದಲ್ಲಿ ಎದುರಾಳಿಗಿರುವುದು ಖೂಬಾ ನಿದ್ದೆಗೆಡಿಸಿದೆ. ಒಂದು ರೀತಿಯಲ್ಲಿ ಕ್ಷೇತ್ರದಲ್ಲಿ ಪ್ರಬಲವಾಗಿರುವ ಲಿಂಗಾಯತ, ಮರಾಠಾ ಮತಗಳು ಈ ಬಾರಿ ಹರಿದು ಹಂಚಿಹೋಗುವ ಮತ್ತು ಲಂಬಾಣಿ ಸಮುದಾಯದ ಮತಗಳೂ ಬಿಜೆಪಿಯಿಂದ ದೂರಸರಿಯುವ ಆತಂಕವೂ ಇದೆ.
ಸೀನಿಯರ್ ಖಂಡ್ರೆ ಬಲ: ಕಾಂಗ್ರೆಸ್‌ನ ಸಾಗರ ಖಂಡ್ರೆ ಹೊಸಮುಖವಾಗಿದ್ದರೂ ಹಿರಿಯ ರಾಜಕಾರಣಿ ಹಾಗೂ ಸಚಿವರೂ ಆಗಿರುವ ತಂದೆ ಈಶ್ವರ ಖಂಡ್ರೆ ಅವರ ಸಂಪೂರ್ಣ ಆಶೀರ್ವಾದ ಅವರ ಮೇಲಿದೆ. ಪುತ್ರನ ಗೆಲುವಿಗಾಗಿ ಸೀನಿಯರ್ ಖಂಡ್ರೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಬಿಜೆಪಿಯ ಆಂತರಿಕ ಕಚ್ಚಾಟಕ್ಕೆ ಹೋಲಿಸಿದರೆ ಕಾಂಗ್ರೆಸ್‌ನಲ್ಲಿ ಮೇಲ್ನೋಟಕ್ಕೆ ಒಗ್ಗಟ್ಟಿದೆ. ಆರಂಭದಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದೆ ಮುನಿಸಿಕೊಂಡಿದ್ದ ಹುಮನಾಬಾದ್ ಗೌಡರ ಮುನಿಸು ಕೂಡ ಈಗ ಕೊಂಚ ಮರೆಯಾದಂತಿದೆ. ಇದು ಕಾಂಗ್ರೆಸ್‌ಗೆ ಪ್ಲಸ್ ಪಾಯಿಂಟ್ ಆಗಿದೆ. ಐದು ಗ್ಯಾರಂಟಿ ಯೋಜನೆಗಳು ತಮ್ಮ ಕೈಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿ ಸಾಗರ್ ಇದ್ದಾರೆ.
ಭಗವಂತ ಖೂಬಾ, ಸಾಗರ್ ಖಂಡ್ರೆ ಸೇರಿ ಕ್ಷೇತ್ರದಲ್ಲಿ ಈ ಬಾರಿ ಒಟ್ಟು 18 ಮಂದಿ ಚುನಾವಣಾ ಕಣದಲ್ಲಿದ್ದಾರೆ. ಆದರೆ, ನೇರಾನೇರಾ ಸ್ಪರ್ಧೆ ಇರುವುದು ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಮಾತ್ರ.
ಅಭ್ಯರ್ಥಿಗಳ ಪರಿಚಯ
ಸಾಗರ್ ಖಂಡ್ರೆ(ಕಾಂಗ್ರೆಸ್)
ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಅವರ ಪಾಲಿಗಿದು ಮೊದಲ ಲೋಕಸಭಾ ಚುನಾವಣೆ. ವೃತ್ತಿಯಲ್ಲಿ ವಕೀಲರಾಗಿರುವ ಸಾಗರ್ ಖಂಡ್ರೆ ತಂದೆಯ ನೆರಳಿನಲ್ಲೇ ಚುನಾವಣಾ ರಾಜಕೀಯಕ್ಕೆ ಧುಮುಕಿದ್ದಾರೆ. ಸಾಗರ್ ಖಂಡ್ರೆ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರು. ದೇಶದಲ್ಲೇ ಅತಿ ಕಿರಿಯ ವಯಸ್ಸಿನ ಸ್ಪರ್ಧಿ ಎಂಬ ಹೆಗ್ಗಳಿಕೆ ಹೊಂದಿರುವ ಸಾಗರ್ ಖಂಡ್ರೆ ಮೂರ್ನಾಲ್ಕು ವರ್ಷಗಳ ಹಿಂದಿನಿಂದಲೇ ಕ್ಷೇತ್ರಾದ್ಯಂತ ಓಡಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ತಂದೆಯ ಪರವಾಗಿಯೂ ಸಾಕಷ್ಟು ಪ್ರಚಾರ ನಡೆಸಿದ್ದಾರೆ.
ಭಗವಂತ ಖೂಬಾ(ಬಿಜೆಪಿ)
ಕೇಂದ್ರದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರಾಗಿರುವ ಭಗವಂತ ಖೂಬಾ ಅವರು ಎಂಜಿನಿಯರಿಂಗ್ ಪದವೀಧರ. ಬೀದರ್‌ನಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಅವರು ಮಾಜಿ ಮುಖ್ಯಮಂತ್ರಿ ದಿ.ಧರಂಸಿಂಗ್ ಹಾಗೂ ಸಚಿವ ಈಶ್ವರ ಖಂಡ್ರೆ ಅವರನ್ನು ಲೋಕಸಭಾ ಚುನಾವಣಾ ಕದನದಲ್ಲಿ ಈ ಹಿಂದೆ ಸೋಲಿಸಿದ್ದಾರೆ. ಇದೀಗ ಮೂರನೇ ಬಾರಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕ್ಷೇತ್ರದಲ್ಲಿ ಆಗಿರುವ ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗ ಮತ್ತಿತರ ಸೇವೆಗಳನ್ನು ಮುಂದಿಟ್ಟುಕೊಂಡು ಅವರು ಮತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
--------------------
ಜಾತಿ ಲೆಕ್ಕಾಚಾರ-
ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ 4.5ಲಕ್ಷ (ಶೇ. 27), ಪರಿಶಿಷ್ಟ ಪಂಗಡ ಇಲ್ಲಿ ಕುರುಬ ಕಬ್ಬಲಿಗ 3ಲಕ್ಷ (ಶೇ. 10) ಸೇರಿ ಎಸ್‌ಸಿ, ಎಸ್‌ಟಿ ಒಟ್ಟು 7.5ಲಕ್ಷ (ಶೇ. 33) ಹಾಗೂ ಮುಸ್ಲಿಂ 3.76ಲಕ್ಷ (ಶೇ. 21). ಲಿಂಗಾಯತ 3.2ಲಕ್ಷ (ಶೇ. 18) ಮರಾಠಾ 1.7ಲಕ್ಷ (ಶೇ. 10), ಕ್ರಿಶ್ಚಿಯನ್ 50 ಸಾವಿರ (ಶೇ. 3), ಸಿಖ್ 1200 (ಶೇ. 0.017), ಬುದ್ಧಿಷ್ಟ 30,000 (ಶೇ. 1.8), ಜೈನ 800 (ಶೇ. 0.07) ಹಾಗೂ ಬ್ರಾಹ್ಮಣ 95ಸಾವಿರ (ಶೇ. 5) ಸೇರಿದಂತೆ ಇತರೆ ಹಿಂದುಳಿದ ವರ್ಗಗಳ ಮತದಾರರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಲಿಂಗಾಯತ, ಮರಾಠಾ ಮತದಾರರೇ ಪ್ರತಿ ಚುನಾವಣೆಯಲ್ಲಿ ನಿರ್ಣಾಯಕ.
---------------------
ಮತದಾರರ ವಿವರ
ಪುರುಷರು 9,71,424
ಮಹಿಳೆಯರು 9,21,435.
ಇತರರು- 103
ಒಟ್ಟು. 18,92,962
---------------------
2019ರ ಲೋಕಸಭಾ ಚುನಾವಣೆಯ ಫಲಿತಾಂಶ
ಭಗವಂತ ಖೂಬಾ ಬಿಜೆಪಿ - 5,85,471
ಈಶ್ವರ ಖಂಡ್ರೆ, ಕಾಂಗ್ರೆಸ್- 4,68,637