ಕೆಎಎಸ್ ನೇಮಕಾತಿ ಪರೀಕ್ಷೆ ಅನ್ಯಾಯ - ಕೆಪಿಎಸ್‌ಸಿ ಕಚೇರಿಗೆ ಕರವೇ ಮುತ್ತಿಗೆ ಯತ್ನ : ಕಾರ್ಯಕರ್ತರಿಗೆ ಖಾಕಿ ತಡೆ

KannadaprabhaNewsNetwork |  
Published : Feb 25, 2025, 02:02 AM ISTUpdated : Feb 25, 2025, 03:53 AM IST
ರಸ್ತೆಯಲ್ಲಿ ಕುಳಿತು ಕರವೇ ಕಾರ್ಯಕರ್ತರಿಂದ ಪ್ರತಿಭಟನೆ | Kannada Prabha

ಸಾರಾಂಶ

ಕೆಎಎಸ್ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡದ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಮತ್ತು ಕೆಪಿಎಸ್‌ಸಿಯ ಸಮಗ್ರ ಸುಧಾರಣೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರು ಸೋಮವಾರ ಕೆಪಿಎಸ್‌ಸಿ ಕಚೇರಿಗೆ ಮುತ್ತಿಗೆ ಹಾಕಿದರು.

 ಬೆಂಗಳೂರು : ಕೆಎಎಸ್ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡದ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಮತ್ತು ಕೆಪಿಎಸ್‌ಸಿಯ ಸಮಗ್ರ ಸುಧಾರಣೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರು ಸೋಮವಾರ ಕೆಪಿಎಸ್‌ಸಿ ಕಚೇರಿಗೆ ಮುತ್ತಿಗೆ ಹಾಕಿದರು.

ಕೆಪಿಎಸ್‌ಸಿಯ ವಿಳಂಬ ನೀತಿ, ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ರಸ್ತೆಯಲ್ಲಿ ಕುಳಿತು ಘೋಷಣೆಗಳನ್ನು ಕೂಗಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಕೆಪಿಎಸ್‌ಸಿ ಕಚೇರಿ ಎದುರಿನ ರಸ್ತೆಯನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದ ನಗರ ಪೊಲೀಸರು, ಪ್ರತಿಭಟನಕಾರರು ಕಚೇರಿಯೊಳಗೆ ಪ್ರವೇಶಿಸದಂತೆ ತಡೆದರು. ಆದರೂ, ಪಟ್ಟು ಬಿಡದೆ ಬ್ಯಾರಿಕೇಡ್ ದಾಟಿ ಒಳ ನುಗ್ಗಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ಎಳೆದುಕೊಂಡು ಪೊಲೀಸ್ ವಾಹನಕ್ಕೆ ಹತ್ತಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರವೇ ಮುಖಂಡರಾದ ಸಣ್ಣೀರಪ್ಪ ಮಾತನಾಡಿ, ಕನ್ನಡ ನಾಡಿನ ಬಡ ಮಕ್ಕಳ ಭವಿಷ್ಯದ ವಿಚಾರದಲ್ಲಿ ಕೆಪಿಎಸ್‌ಸಿ ಚೆಲ್ಲಾಟ ಆಡುತ್ತಿದೆ. ಕೆಎಎಸ್ ಪ್ರಶ್ನೆಪತ್ರಿಕೆಯ ಅನುವಾದದಲ್ಲಿ ಪದೇ ಪದೇ ತಪ್ಪುಗಳನ್ನು ಮಾಡುತ್ತಿದೆ. ಇದರಿಂದ ಕನ್ನಡದ ಅಭ್ಯರ್ಥಿಗಳು ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಗಿಲ್ಲ. ಮುಖ್ಯ ಪರೀಕ್ಷೆಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಸಾಧ್ಯವಾಗದೇ ರಾಜ್ಯದ ಕೆಎಎಸ್ ಹುದ್ದೆಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಲವು ದಿನಗಳ ಹಿಂದೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದಾಗ ಕನ್ನಡ ಮಕ್ಕಳಿಗೆ ನ್ಯಾಯ ಒದಗಿಸುವುದಾಗಿ ಸರ್ಕಾರದಿಂದ ಭರವಸೆ ಸಿಕ್ಕಿತ್ತು. ಆದರೆ, ಈವರೆಗೆ ಯಾವುದೇ ಕ್ರಮವನ್ನು ಸರ್ಕಾರ ಕೈಗೊಂಡಿಲ್ಲ. ಮತ್ತೊಂದೆಡೆ ಮರುಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿ, ಮುಖ್ಯಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಕೆಪಿಎಸ್‌ಸಿ ಪರೀಕ್ಷೆಗೂ ಸಿದ್ಧತೆ ನಡೆಸಿದೆ. ಕನ್ನಡ ಮಕ್ಕಳ ಬೇಡಿಕೆಗಳಿಗೆ ಯಾವುದೇ ಮನ್ನಣೆ ಇಲ್ಲದಂತಾಗಿದೆ. ಹೀಗಾಗಿ, ಮುತ್ತಿಗೆ ಹಾಕಿದ್ದೇವೆ. ಮುಂದಿನ ದಿನಗಳಲ್ಲಿ ಸರ್ಕಾರ, ಕೆಪಿಎಸ್‌ಸಿ ಕನ್ನಡ ಮಕ್ಕಳಿಗೆ ನ್ಯಾಯ ಕೊಡಿಸದಿದ್ದರೆ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ತಿಳಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ನನ್ನನ್ನು ಯಾರೂ ಅಲುಗಾಡಿಸಲು ಆಗೋದಿಲ್ಲ: ಸಿಎಂ ಖಡಕ್‌ ನುಡಿ