ಬೆಂಗಳೂರು : ವಿಧಾನಪರಿಷತ್ತಿನ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಉಪಚುನಾವಣೆಯ ಅಭ್ಯರ್ಥಿ ಸ್ಥಾನಕ್ಕೆ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸೇರಿದಂತೆ ಮೂರ್ನಾಲ್ಕು ಹೆಸರುಗಳನ್ನು ಹೈಕಮಾಂಡ್‌ಗೆ ಶಿಫಾರಸು ಮಾಡಲು ಬಿಜೆಪಿ ಕೋರ್ ಕಮಿಟಿ ಸಭೆ ತೀರ್ಮಾನಿಸಿದೆ.ಈ ಶಿಫಾರಸ್ಸಿನಲ್ಲಿ ಕಟೀಲ್ ಅವರ ಹೆಸರನ್ನೇ ಮುಂಚೂಣಿ ಸ್ಥಾನದಲ್ಲಿ ಸೂಚಿಸಲು ಉದ್ದೇಶಿಸಲಾಗಿದೆ ಎಂದು ತಿಳಿದು ಬಂದಿದೆ.
ಸೋಮವಾರ ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆಯಲ್ಲಿ ಉಡುಪಿ ಮತ್ತು ಮಂಗಳೂರು ಜಿಲ್ಲೆಯಿಂದ ಶಿಫಾರಸುಗೊಂಡಿದ್ದ ಹೆಸರುಗಳು ಹಾಗೂ ಆಕಾಂಕ್ಷಿಗಳಾಗಿದ್ದ ಸುಮಾರು 13 ಹೆಸರುಗಳ ಬಗ್ಗೆ ಚರ್ಚೆ ನಡೆಯಿತು. ಈ ಪೈಕಿ ನಳಿನ್‌ಕುಮಾರ್ ಕಟೀಲ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮುಖಂಡರಾದ ಉದಯಕುಮಾರ್ ಶೆಟ್ಟಿ ಸೇರಿದಂತೆ ಮೂರ್ನಾಲ್ಕು ಹೆಸರುಗಳನ್ನು ಅಂತಿಮಗೊಳಿಸಿ ವರಿಷ್ಠರಿಗೆ ಕಳುಹಿಸಲು ನಿರ್ಧರಿಸಲಾಯಿತು ಎನ್ನಲಾಗಿದೆ.
ಇದೇ ವೇಳೆ ಪತ್ರದ ಮೂಲಕ ವರಿಷ್ಠರಿಗೆ ಶಿಫಾರಸು ಮಾಡುವ ಬದಲು ಪಕ್ಷದ ರಾಜ್ಯಾಧ್ಯಕ್ಷರು ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಖುದ್ದಾಗಿ ಮಾತನಾಡಿ ನಿರ್ಧರಿಸುವಂತೆ ಕೋರ್ ಕಮಿಟಿ ಸದಸ್ಯರು ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.ಈ ನಡುವೆ ಮುಂಬರುವ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಇನ್ನೂ ಚುನಾವಣೆ ಘೋಷಣೆಯಾಗದೇ ಇರುವುದರಿಂದ ಹೆಚ್ಚು ಚರ್ಚೆ ನಡೆಯಲಿಲ್ಲ.
ಚನ್ನಪಟ್ಟಣ ಕ್ಷೇತ್ರದಿಂದ ಜೆಡಿಎಸ್ ಪಕ್ಷ ಒಪ್ಪಿದರೆ ಎನ್‌ಡಿಎ ಅಭ್ಯರ್ಥಿಯಾಗಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರನ್ನು ಕಣಕ್ಕಿಳಿಸಬಹುದು. ಇನ್ನು ಶಿಗ್ಗಾವಿ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿದೇಶ ಪ್ರವಾಸದಲ್ಲಿ ಇದ್ದುದರಿಂದ ಅವರು ವಾಪಸಾದ ಬಳಿಕ ಆ ಕ್ಷೇತ್ರದ ಬಗ್ಗೆ ಚರ್ಚೆ ಮಾಡಲಾಗುವುದು. ಸಂಡೂರಿನಿಂದ ಮಾಜಿ ಸಂಸದ ದೇವೇಂದ್ರಪ್ಪ ಸೇರಿದಂತೆ ಬಂಗಾರು ಹನುಮಂತು, ದಿವಾಕರ್ ಮತ್ತಿತರ ಹೆಸರುಗಳು ಚರ್ಚೆಯಲ್ಲಿವೆ. ಆದರೆ, ಆ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳಬೇಕು ಎಂಬ ನಿಲವಿಗೆ ಸಭೆ ಬಂದಿತು ಎಂದು ತಿಳಿದು ಬಂದಿದೆ.